ಸಾಮೂಹಿಕ ಮದುವೆಗಳಿಂದ ಬಡವರಿಗೆ ಅನುಕೂಲ


ಸಂಜೆ ವಾಣಿ ವಾರ್ತೆ
ಕೊಟ್ಟೂರು. ಮಾ.28: ಸಾಮೂಹಿಕವಾಗಿ ಮದುವೆಗಳು ಆಗುತ್ತಿರುವುದರಿಂದ ಬಡವರಿಗೆ, ದುರ್ಬಲರಿಗೆ ಅನುಕೂಲವಾಗುತ್ತದೆ ಎಂದು ಆನಂದ ಯೋಗಾಶ್ರಮದ ಕಾರ್ಯದರ್ಶಿ ಮಾತಾಶ್ರೀ ಲಕ್ಷ್ಮೀದೇವಿ ಹೇಳಿದರು.
ಪಟ್ಟಣದ ಜಾಗಟಗೇರೆ ಸಮೀಪದ ಆನಂದ ಯೋಗಾಶ್ರಮ ಟ್ರಸ್ಟ್ ಆಶ್ರಮದಲ್ಲಿ ಆಯೋಜಿಸಿದ್ದ ಯುಗಾದಿ ಹಬ್ಬದ ಪ್ರಯುಕ್ತ ತೃತೀಯ ವರ್ಷದ ಉಚಿತ ಸಾಮೂಹಿಕ ವಿವಾಹ ಮಹೋತ್ಸವದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಾಮೂಹಿಕ ಮದುವೆಗಳಲ್ಲಿ ಗಣ್ಯ ವ್ಯಕ್ತಿಗಳ ಮಕ್ಕಳು ಮದುವೆಯಾಗುವ ಮೂಲಕ ಸಮಾಜದಲ್ಲಿ ಆದರ್ಶ ರೂಪಿಸಿಕೊಳ್ಳಬೇಕು, ಸಂಸಾರದಲ್ಲಿ ಸುಖ ದುಃಖ ಕಷ್ಟ ನಷ್ಟಗಳನ್ನು ಸಮಾನವಾಗಿ ಸ್ವೀಕರಿಸಬೇಕು. ಈ ಮದುವೆಯಿಂದ ಉಳಿತಾಯವಾಗುವ ಹಣವನ್ನು ಮಕ್ಕಳ ಮುಂದಿನ ಭವಿಷ್ಯಕ್ಕೆ ಬಳಕೆ ಮಾಡಿಕೊಳ್ಳಬೇಕು ಎಂದರು.
ಸುದ್ದಿಗಾರರೊಂದಿಗೆ ಬಿಜೆಪಿಯ ಆಕಾಂಕ್ಷಿ ಯಾದ ಲಕ್ಷ್ಮಿ ನಾರಾಯಣ್ ಮಾತನಾಡಿ ಈ ಮದುವೆಗಳು ಆಗುತ್ತಿರುವುದರಿಂದ ಬಡವರಿಗೆ ಅನುಕೂಲವಾಗುತ್ತದೆ ಇಂಥಹ ಕಾರ್ಯಕ್ರಮ ಮಾಡಿದ್ದರಿಂದ ಆನಂದ ಯೋಗಾಶ್ರಮಕ್ಕೆ ಧನ್ಯವಾದಗಳು, ಇಂಥಹ ಕಾರ್ಯಕ್ರಮಕ್ಕೆ ನಮ್ಮ ಬೆಂಬಲ ಎಂದೆಂದಿಗೂ ಇರುತ್ತದೆ ಎಂದು ತಿಳಿಸಿದರು.
 ಸಾಹಿತಿ ಅಜ್ಜಯ್ಯ ಬಣಕಾರ್, ಬದ್ದಿ ಮರಿಸ್ವಾಮಿ, ಆನಂದ ಯೋಗಾಶ್ರಮದ ಸ್ಥಾಪಕ ಮಂಜುನಾಥ್ ಗುರೂಜಿ, ಲೇಖಕ ಉಜ್ಜಿನಿ ರುದ್ರಪ್ಪ ಮಾತನಾಡಿದರು.
ಈ ಸಂದರ್ಭದಲ್ಲಿ ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ತೋಟದ ರಾಮಣ್ಣ, ಪೂಜಾರ್ ಕರ್ಣ ಕುಮಾರ್, ಫಕೀರಪ್ಪ ಇತರರು ಉಪಸ್ಥಿತರಿದ್ದರು.