ಸಾಮೂಹಿಕ ನಾಯಕತ್ವದಲ್ಲಿ ವಿಧಾನಸಭೆ ಚುನಾವಣೆ: ಡಿಕೆಶಿ

ಬೆಂಗಳೂರು, ಜು.19- ಮುಂಬರುವ ವಿಧಾನಸಭೆ ಚುನಾವಣೆಯನ್ನು ಕಾಂಗ್ರೆಸ್ ಪಕ್ಷ ಸಾಮೂಹಿಕ ನಾಯಕತ್ವದಲ್ಲಿ ಎದುರಿಸಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

ಯಾವುದೇ ವೈಯಕ್ತಿಕ ಮುಂದಾಳತ್ವದಲ್ಲಿ ಚುನಾವಣೆಗೆ ಹೋಗುವುದಿಲ್ಲ. ಇದು ನನಗೆ ಇರುವ ನಿರ್ದೇಶನ’ ಎಂದು ತಿಳಿಸಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು‘ನಮ್ಮ ಸಮೀಕ್ಷೆ ಪ್ರಕಾರ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗಲಿದೆ. 130ಕ್ಕೂ ಹೆಚ್ಚು ಸ್ಥಾನ ಸಿಗಲಿದೆ ಎಂದು ವರದಿ ಬಂದಿದೆ. ಅವಧಿಪೂರ್ವ ಚುನಾವಣೆ ಬಂದಲೂ ನಾವು ಸಿದ್ಧವಾಗಿದ್ದೇವೆ’ ಎಂದು ತಿಳಿಸಿದ್ದಾರೆ.

‘ಪಕ್ಷದಲ್ಲಿ ಹಲವು ನಾಯಕರಿದ್ದಾರೆ. ಎಲ್ಲರಿಗೂ ನಾಯಕತ್ವದ ಅರ್ಹತೆ ಇದೆ. ಸದ್ಯದ ಮಟ್ಟಿಗೆ ಅಧ್ಯಕ್ಷ ಸ್ಥಾನವನ್ನು ನನಗೆ, ವಿರೋಧ ಪಕ್ಷದ ಸ್ಥಾನವನ್ನು ಸಿದ್ದರಾಮಯ್ಯ ಅವರಿಗೆ ನೀಡಲಾಗಿದೆ. ಪರಿಷತ್ ವಿರೋಧ ಪಕ್ಷದ ನಾಯಕ ಸ್ಥಾನವನ್ನು ಹರಿಪ್ರಸಾದ್ ಅವರಿಗೆ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಸ್ಥಾನವನ್ನು ಖರ್ಗೆ ಅವರಿಗೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಬೇರೆ ಪಕ್ಷದವರು ಕಾಂಗ್ರೆಸ್ ಗೆ ಬರುವ ಕುರಿತು, ‘ಶುಭ ಮುಹೂರ್ತ, ಶುಭಗಳಿಗೆ ಬಂದಾಗ ಎಲ್ಲವೂ ತಿಳಿಯುತ್ತದೆ. ಈಗಲೆ ಎಲ್ಲವನ್ನು ಹೇಳಿ ಬೇರೆಯವರನ್ನು ಯಾಕೆ ಎಚ್ಚರಿಸೋಣ’ ಎಂದರು.
ಕಾಂಗ್ರೆಸ್ ಪಕ್ಣದಿಂದ ವೀರಪ್ಪ ಮೊಯ್ಲಿ, ಬಂಗಾರಪ್ಪ, ಸಿದ್ದರಾಮಯ್ಯ, ದೇವರಾಜ ಅರಸು, ಗುಂಡೂರಾವ್ ಅವರು ಮುಖ್ಯಮಂತ್ರಿಯಾಗಿದ್ದು, ದಲಿತರು ಯಾಕೆ ಮುಖ್ಯಮಂತ್ರಿ ಆಗಬಾರದು’ ಎಂದು ಅವರು ಪ್ರಶ್ನಿಸಿದ್ದಾರೆ.

ನೇಮಕಾತಿ ಅಕ್ರಮದ ‘ಸರ್ಕಾರ ಎಲ್ಲ ಪ್ರಕರಣಗಳನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವುದು ನೂರಕ್ಕೆ ನೂರು ಸತ್ಯ. ಈ ಎಲ್ಲ ಆರೋಪಗಳನ್ನು ನಾವು ತನಿಖೆ ಮಾಡಿಸುತ್ತೇವೆ. ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುತ್ತೇವೆ’ ಎಂದರು.