ಸಾಮೂಹಿಕ ಅತ್ಯಾಚಾರ ನಾಲ್ವರು ಅಪ್ರಾಪ್ತರಿಗೆ ಜಾಮೀನು

ಹೈದರಾಬಾದ್, ಜು.೨೭- ಒಂದು ತಿಂಗಳ ಹಿಂದೆ ತೆಲಂಗಾಣದಲ್ಲಿ ಆಕ್ರೋಶ ಹಾಗೂ ರಾಜಕೀಯ ಘರ್ಷಣೆಗೆ ಕಾರಣವಾಗಿದ್ದ ಹೈದರಾಬಾದ್ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಅಪ್ರಾಪ್ತ ವಯಸ್ಸಿನ ನಾಲ್ವರು ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.
ಐದನೇ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕಮ್ ಜುವೆನೈಲ್ ಜಸ್ಟೀಸ್ ಬೋರ್ಡ್ ಈ ಆದೇಶ ಹೊರಡಿಸಿದ್ದು, ಶಾಸಕರ ಪುತ್ರ ಸೇರಿದಂತೆ ಎಲ್ಲಾ ನಾಲ್ವರು ಆರೋಪಿಗಳನ್ನು ಜೂನ್ ಮೊದಲ ವಾರದಿಂದ ಬಂಧಿತರಾಗಿದ್ದ ಬಾಲಾಪರಾಧಿಗೃಹದಿಂದ ಬಿಡುಗಡೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ನಾಲ್ವರಿಗೆ ಬಾಲ ನ್ಯಾಯ ಮಂಡಳಿಯಿಂದ ಜಾಮೀನು ಮಂಜೂರಾಗಿದೆ. ಈ ಪ್ರಕರಣದಲ್ಲಿ ಬಂಧಿತರಾಗಿರುವ ಐದನೇ ಅಪ್ರಾಪ್ತ ಬಾಲಕ ಜಾಮೀನಿಗಾಗಿ ತೆಲಂಗಾಣ ಹೈಕೋರ್ಟ್‌ಗೆ ಮೊರೆ ಹೋಗಿರುವುದರಿಂದ ಬಾಲಾಪರಾಧಿ ಗೃಹದಲ್ಲಿಯೇ ಇರುತ್ತಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಕರಣದ ಏಕೈಕ ವಯಸ್ಕ ಆರೋಪಿ
ಸಾದುದ್ದೀನ್ ಮಲ್ಲಿಕ್‌ನನ್ನು ಚಂಚಲಗುಡ ಜೈಲಿನಲ್ಲಿ ಇರಿಸಲಾಗಿದೆ. ಈ ಪ್ರಕರಣದಲ್ಲಿ ಒಟ್ಟು ೬ ಮಂದಿಯನ್ನು ಬಂಧಿಸಲಾಗಿತ್ತು.
ಏನಿದು ಪ್ರಕರಣ: ಮೇ ೨೮ರಂದು ೧೭ ವರ್ಷದ ಅಪ್ರಾಪ್ತೆ ಪಾರ್ಟಿಗೆಂದು ಪಬ್‌ಗೆ ಹೋಗಿದ್ದಳು. ಈ ವೇಳೆ ಹುಡುಗನೊಬ್ಬನನ್ನು ಆಕೆಯನ್ನು ಭೇಟಿಯಾಗಿದ್ದಳು. ಬಳಿಕ ಪರಿಚಿತ ಹುಡುಗ ಮತ್ತು ಆತನ ಸ್ನೇಹಿತರೊಂದಿಗೆ ಕ್ಲಬ್‌ನಿಂದ ಹೊರಬಂದಿದ್ದಳು.
ಪಾರ್ಟಿ ಮುಗಿದ ಬಳಿಕ ಮನೆಗೆ ಡ್ರಾಪ್ ಮಾಡುತ್ತೇನೆಂದು ಭರವಸೆ ನೀಡಿದ್ದ ಹಿನ್ನೆಲೆಯಲ್ಲಿ ಅವರೊಂದಿಗೆ ಮರ್ಸಿಡೆಸ್ ಬೆಂಜ್ ಕಾರಿನಲ್ಲಿ ಹೋಗಿದ್ದಳು. ಕಾರಿನಲ್ಲಿ ಹೋಗುವಾಗ ಹತ್ತಿರದ ಕೆಫೆ ಬಳಿ ಮೇ.೨೮ರಂದು ಸಂಜೆ ೬.೩೦ಕ್ಕೆ ಇನ್ನೋವಾ ಕಾರಿಗೆ ಎಲ್ಲರು ಸ್ಥಳಾಂತರವಾಗಿದ್ದಾರೆ.
ಬಳಿಕ ಆಕೆಯನ್ನು ರಸ್ತೆ ನಂಬರ್ ೪೪ರಲ್ಲಿರುವ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಕಾರಿನಲ್ಲೇ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ. ಬಳಿಕ ರಾತ್ರಿ ೭.೩೦ರ ಸುಮಾರಿಗೆ ಆಕೆಯನ್ನು ಮತ್ತೆ ಪಬ್‌ಗೆ ಬಿಟ್ಟಿದ್ದಾರೆ. ಘಟನೆ ನಡೆದ ಪ್ರದೇಶವು ಹೈದರಾಬಾದ್‌ನ ಐಷಾರಾಮಿ ಪ್ರದೇಶವಾಗಿದ್ದು, ಅಲ್ಲಿ ಅನೇಕ ಉನ್ನತ ರಾಜಕಾರಣಿಗಳು, ಉದ್ಯಮಿಗಳು, ನಟರು ಮತ್ತು ಇತರ ಪ್ರಭಾವಿ ವ್ಯಕ್ತಿಗಳು ವಾಸಿಸುತ್ತಿದ್ದಾರೆ.
ಈ ಘಟನೆ ನಡೆದ ಒಂದು ವಾರದ ಬಳಿಕ ಸಂತ್ರಸ್ತೆಯ ತಂದೆ ದೂರು ನೀಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ದೂರು ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರಿಗೆ ಅತ್ಯಾಚಾರ ಎಸಗಲು ಬಳಸಿದ ಕಾರು ಶಾಸಕರೊಬ್ಬರಿಗೆ ಸೇರಿದ್ದು ಎಂದು ತಿಳಿದುಬಂದಿತ್ತು. ಅಲ್ಲದೆ, ತೆಲಂಗಾಣದ ಗೃಹ ಸಚಿವ ಮಹ್ಮೂದ್ ಅಲಿ ಅವರ ಮೊಮ್ಮಗನ ವಿರುದ್ಧ ಆರೋಪ ಕೇಳಿಬಂದಿದೆ.