ಸಾಮಾನ್ಯ ವ್ಯಕ್ತಿ ರಾಷ್ಟ್ರಪತಿಯಾಗಿ ಕಾರ್ಯನಿರ್ವಹಣೆ ರೋಮಾಂಚನಕಾರಿ: ರಾಮನಾಥ್ ಕೋವಿಂದ್

ನವದೆಹಲಿ, ಜು.24- ಉತ್ತರ ಪ್ರದೇಶದ ಕಾನ್ಪುರ ದೇಹತ್ ಜಿಲ್ಲೆಯ ಪರೌಂಖ್ ಗ್ರಾಮದಲ್ಲಿ ಅತ್ಯಂತ ಸಾಮಾನ್ಯ ಕುಟುಂಬದಲ್ಲಿ ಬೆಳೆದು ರಾಷ್ಟ್ರಪತಿಯಾಗಿ ಕಾರ್ಯನಿರ್ವಹಿಸಿದ್ದು ರೋಮಾಂಚಕ .ಇದು ಪೂರ್ವಜನ್ಮದ ಪುಣ್ಯ ಎಂದು ನಿರ್ಗಮಿತ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೇಳಿದ್ದಾರೆ.

ರಾಮ್‍ನಾಥ್ ಕೋವಿಂದ್ ದೇಶವಾಸಿಗಳನ್ನು ಉದ್ದೇಶಿಸಿ ಮಾತನಾಡುವ ಮಟ್ಟಕ್ಕೆ ಬೆಳೆಯಲು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಶಕ್ತಿ.ಅದಕ್ಕಾಗಿ ವಂದಿಸುತ್ತೇನೆ ಎಂದು ತಿಳಿಸಿದ್ದಾರೆ.

ರಾಷ್ಟ್ರಪತಿ ಸ್ಥಾನದಿಂದ ನಿರ್ಗಮಿಸುವ ಮುನ್ನಾ ದಿನ ದೇಶವನ್ನುದ್ದೇಶಿಸಿ ಮಾತನಾಡಿದ ಅವರು, 5 ವರ್ಷಗಳ ಹಿಂದೆ ಚುನಾಯಿತ ಜನಪ್ರತಿನಿಧಿಗಳ ಮೂಲಕ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದೆ. ರಾಷ್ಟ್ರಪತಿಯಾಗಿ ನನ್ನ ಅವಧಿ ಇಂದಿಗೆ ಮುಕ್ತಾಯವಾಗುತ್ತಿದೆ. ನಿಮ್ಮೆಲ್ಲರಿಗೂ ಮತ್ತು ನನ್ನ ಹೃತ್ಪೂರ್ವಕ ಕೃತಜ್ಞತೆ ವ್ಯಕ್ತಪಡಿಸಲು ಬಯಸುತ್ತೇನೆ ಎಂದು ಹೇಳಿದ್ದಾರೆ.

ಸಂಪ್ರದಾಯ ಮುಂದುವರಿಸಲು ಕರೆ:

ನಮ್ಮ ಬೇರುಗಳೊಂದಿಗೆ ಸಂಪರ್ಕದಲ್ಲಿರುವುದು ಭಾರತೀಯ ಸಂಸ್ಕೃತಿಯ ವಿಶೇಷತೆ. ಯುವ ಪೀಳಿಗೆ ತಮ್ಮ ಗ್ರಾಮ ಅಥವಾ ಪಟ್ಟಣ ಮತ್ತು ಅವರ ಶಾಲೆಗಳು ಮತ್ತು ಶಿಕ್ಷಕರೊಂದಿಗೆ ಸಂಬಂಧ ಹೊಂದುವ ಸಂಪ್ರದಾಯ ಮುಂದುವರಿಸಲು ಅವರು ವಿನಂತಿಸಿದ್ದಾರೆ.

ರಾಷ್ಟ್ರಪತಿಗಳ ಅವಧಿಯಲ್ಲಿ ನನ್ನ ಹುಟ್ಟೂರಿಗೆ ಭೇಟಿ ನೀಡಿದ್ದು ಮತ್ತು ನನ್ನ ಕಾನ್ಪುರ ಶಾಲೆಯ ಹಿರಿಯ ಶಿಕ್ಷಕರ ಪಾದಗಳನ್ನು ಸ್ಪರ್ಶಿಸಿ ಅವರ ಆಶೀರ್ವಾದ ಪಡೆದಿದ್ದು ಜೀವನದ ಅವಿಸ್ಮರಣೀಯ ಕ್ಷಣಗಳಲ್ಲಿ ಯಾವಾಗಲೂ ಇರುತ್ತದೆ ಎಂದಿದ್ದಾರೆ.

ಅಮೃತ ಮಹೋತ್ಸವ ವರ್ಷ:

ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಆಚರಣೆ ಹಂತಕ್ಕೆ ಬಂದಿದ್ದೇವೆ. ರಾಷ್ಟ್ರ `ಆಜಾದಿ ಕಾ ಅಮೃತ್ ಮಹೋತ್ಸವ’ವನ್ನು ಆಚರಿಸುತ್ತಿದೆ ಎಂದು ಹೇಳಿದ್ದಾರೆ.

ಮುಂದಿನ ತಿಂಗಳು, ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವ ಆಚರಿಸುತ್ತೇವೆ. ಸ್ವಾತಂತ್ರ್ಯದ ಶತಮಾನೋತ್ಸವಕ್ಕೆ ಕಾರಣವಾಗುವ 25 ವರ್ಷಗಳ ಅವಧಿಯ `ಅಮೃತ ಕಾಲ’ವನ್ನು ಪ್ರವೇಶಿಸುತ್ತೇವೆ ಎಂದು ಹೇಳಿದ್ದಾರೆ.

ಸದಾ ಗೌರವ:

ಸಶಸ್ತ್ರ ಪಡೆಗಳು, ಅರೆ ಮಿಲಿಟರಿ ಪಡೆಗಳು ಮತ್ತು ಪೆÇೀಲಿಸ್‍ನ ವೀರ ಯೋಧರನ್ನು ಭೇಟಿ ಮಾಡಲು ಅವಕಾಶ ಸಿಕ್ಕ ಸಂದರ್ಭಗಳನ್ನು ವಿಶೇಷವಾಗಿ ಗೌರವಿಸುತ್ತೇನೆ ಎಂದು ಹೇಳಿದ್ದಾರೆ.

ವೀರಯೋಧರ ದೇಶಭಕ್ತಿಯ ಉತ್ಸಾಹ ಅದ್ಭುತವಾಗಿದೆ, ಅದು ಸ್ಪೂರ್ತಿದಾಯಕವಾಗಿದೆ.ಅದು ಎಂದೆಂದೂ ಮನದಲ್ಲಿ ಜೀವಂತವಾಗಿರಲಿದೆ ಎಂದಿದ್ದಾರೆ.

ದೇಶದಲ್ಲಿ ನಾಯಕರ ದಂಡು:

ಇಪ್ಪತ್ತನೇ ಶತಮಾನದ ಆರಂಭದಲ್ಲಿ ಕೆಲವೇ ದಶಕಗಳ ಅವಧಿಯಲ್ಲಿ ನಾಯಕರ ನಕ್ಷತ್ರಪುಂಜವನ್ನು ಹೊಂದಿರುವ ಭಾರತದಷ್ಟು ಅದೃಷ್ಟ ಬೇರೆ ಯಾವುದೇ ದೇಶಕ್ಕಿಲ್ಲ ಎಂದಿದ್ದಾರೆ.

ಇದನ್ನು ತಾವು ಯಾವಾಗಲೂ ಬಲವಾಗಿ ನಂಬಿದ್ದೇನೆ, ಅವರಲ್ಲಿ ಪ್ರತಿಯೊಬ್ಬರೂ ಅಸಾಧಾರಣ ಮನಸ್ಸಿನವರಾಗಿದ್ದಾರೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಗುಣಗಾನ ಮಾಡಿದ್ದಾರೆ.