
ಸಂಜೆವಾಣಿ ವಾರ್ತೆ
ಶಿವಮೊಗ್ಗ, ಆ. 31; ಸಾಮಾನ್ಯ ಜನರ ಜೀವನದಲ್ಲಿ ಸದಾ ಕಾಲ ಸರ್ಕಾರದ ಸಹಕಾರವೇ ಗೃಹಲಕ್ಷ್ಮಿಯಂತಹ ಯೋಜನೆಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಮಧು ಬಂಗಾರಪ್ಪ ನುಡಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಹಾಗೂ ಮಹಾನಗರಪಾಲಿಕೆ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಇಂದು ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಲಾಗಿದ್ದ ಗೃಹಲಕ್ಷ್ಮಿ ಯೋಜನೆಯ ಅನುಷ್ಟಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಗೃಹಲಕ್ಷ್ಮಿ ಯೋಜನೆ ಒಂದು ಐತಿಹಾಸಿಕ ಮತ್ತು ದೇಶದಲ್ಲಿಯೇ ಅಚ್ಚರಿ ಮೂಡಿಸುವಂತಹ ಕಾರ್ಯಕ್ರಮವಾಗಿದೆ. ಪ್ರತಿ ಕುಟುಂಬದ ಯಜಮಾನಿಯರೇ ಆ ಕುಟುಂಬದ ನಿಜವಾದ ಮುಖ್ಯಮಂತ್ರಿಗಳು. ಅವರ ಮೇಲೆ ಇಡೀ ಕುಟುಂಬ ನಿರ್ವಹಣೆ ಜವಾಬ್ದಾರಿ ಇರುತ್ತದೆ. ಬೆಲೆ ಏರಿಕೆಯ ಸಂದರ್ಭದಲ್ಲಿ ಹಾಗೂ ಮಹಿಳೆಯರ ಆರ್ಥಿಕ ಸಬಲೀಕರಣದ ವಿಷಯದಲ್ಲಿ ಗೃಹಲಕ್ಷ್ಮಿ ಯೋಜನೆ ಮುಖ್ಯ ಪಾತ್ರ ವಹಿಸುತ್ತದೆ. ನಮ್ಮ ಮೇಲೆ ವಿಶ್ವಾಸವಿಟ್ಟು ನಮ್ಮನ್ನು ಆರಿಸಿ ಕಳುಹಿಸಿದ್ದೀರಿ. ಸರ್ಕಾರ ತಾನು ನೀಡಿದ ವಾಗ್ದಾನದಂತೆ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಮಹಿಳೆಯರಿಗೆ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಿರುವ ‘ಶಕ್ತಿ’ ಯೋಜನೆ ಮಹಿಳೆಯರನ್ನು ಸಬಲಗೊಳಿಸಿದೆ. ಯಾವುದೇ ವ್ಯಕ್ತಿ ಹಸಿವಿನಿಂದ ಮಲಗಿದರೆ ಸರ್ಕಾರದಕ್ಕೆ ಗೌರವ ಸಿಗುವುದಿಲ್ಲ. ಆದ್ದರಿಂದ ಅನ್ನಭಾಗ್ಯ ಯೋಜನೆಯಡಿ ಪ್ರತಿ ಕುಟುಂಬಕ್ಕೆ 10 ಕೆಜಿ ಅಕ್ಕಿಯನ್ನು ನೀಡುವ ಭರವಸೆಯನ್ನು ಸರ್ಕಾರ ನೀಡಿತ್ತು. ಸದ್ಯಕ್ಕೆ ಅಕ್ಕಿ ಲಭ್ಯತೆ ಸಾಕಷ್ಟು ಇಲ್ಲದ ಕಾರಣ, 5 ಕೆಜಿ ಅಕ್ಕಿ ಬದಲಾಗಿ ಕುಟುಂಬದ ತಲಾ ಸದಸ್ಯರಿಗೆ ರೂ.170 ಗಳನ್ನು ನೀಡಲಾಗುತ್ತಿದೆ. ಹಾಗೂ 32 ವರ್ಷದಿಂದ ರೈತರಿಗೆ 10 ಹೆಚ್‍ಪಿ ಪಂಪ್‍ಸೆಟ್‍ಗೆ ಉಚಿತವಾಗಿ ವಿದ್ಯುತ್ ನೀಡಲಾಗುತ್ತಿದೆ.ಗೃಹಜ್ಯೋತಿ ಯೋಜನೆಯಡಿ ಪ್ರತಿ ಗೃಹ ಬಳಕೆದಾರರಿಗೆ ಗರಿಷ್ಟ 200 ಯುನಿಟ್‍ವರೆಗೆ ಉಚಿತ ವಿದ್ಯುತ್ ನೀಡುತ್ತಿರುವುದು ಜನರಿಗೆ ಅತ್ಯಂತ ಸಹಕಾರಿಯಾಗಿದೆ. ಅಂಬೇಡ್ಕರ್ ಅವರ ಆಶಯದಂತೆ ಇಂದು ಎಲ್ಲ ಜಾತಿ, ಮತ, ವರ್ಗದವರು ಒಂದಾಗಿ, ಒಂದೇ ವೇದಿಕೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ಸಂತಸದ ವಿಷಯ ಎಂದ ಅವರು ಸರ್ಕಾರ ನುಡಿದಂತೆ ನಡೆದಿದೆ. ದೇಶದಲ್ಲೇ ಗೃಹಲಕ್ಷ್ಮಿಯಂತಹ ಉತ್ತಮ ಕಾರ್ಯಕ್ರಮವನ್ನು ನೀಡಿದ ರಾಜ್ಯ ಸರ್ಕಾರ ಜಯಶಾಲಿಯಾಗಿದೆ. ಸರ್ಕಾರ ಇನ್ನೂ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತರಲಿದೆ ಎಂದರು.