ಸಾಮಾಜಿಕ ಹೊಣೆಗಾರಿಕೆ ಅರಿತಾಗ ಮಾತ್ರ ಉತ್ತಮ ಪತ್ರಕರ್ತರಾಗಲು ಸಾಧ್ಯ

ಚಿತ್ರದುರ್ಗ.ಜು.೨: ಬದಲಾಗುತ್ತಿರುವ ಮಾಧ್ಯಮ ಕ್ಷೇತ್ರದಲ್ಲಿಯೂ ಸಾಮಾಜಿಕ ಹೊಣೆಗಾರಿಕೆ ಅರಿತು, ನಮ್ಮ ಜವಾಬ್ದಾರಿಯನ್ನು ನಮಗೆ ನಾವೇ ಅರ್ಥೈಸಿಕೊಂಡಾಗ ಮಾತ್ರ ಒಬ್ಬ ಉತ್ತಮ ಪತ್ರಕರ್ತರಾಗಲು ಸಾಧ್ಯವಾಗಲಿದೆ ಎಂದು ಶ್ರೀ ಶಿವಶರಣ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಹೇಳಿದರು.ನಗರದ ಪತ್ರಿಕಾ ಭವನದಲ್ಲಿ  ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆಯಲ್ಲಿ ಅವರು ಭಾಗವಹಿಸಿ ಮಾತನಾಡಿದರು.ಸುದ್ದಿಯ ಸತ್ಪರಿಣಾಮ, ದುಷ್ಪಾರಿಣಾಮ ಎರಡನ್ನೂ ಗಮನದಲ್ಲಿಟ್ಟುಕೊಂಡು, ದುಷ್ಪರಿಣಾಮದ ಬದಲಾಗಿ ಸತ್ಪರಿಣಾಮವಾಗುವ ನಿಟ್ಟಿನಲ್ಲಿ ಮಾಧ್ಯಮ ಚಿಂತನೆ ಮಾಡಬೇಕಿದೆ. ಸಾಮಾಜಿಕ ಹೊಣೆಗಾರಿಕೆ ಅರಿತು ಸಮಾಜದ ಸ್ವಾಸ್ಥ್ಯಕ್ಕಾಗಿ, ಸಮಾಜದ ಉದ್ದಾರಕ್ಕೆ ಚಿಂತನೆ ಮಾಡುವ ಸೇವೆ ಸಲ್ಲಿಸಬೇಕು. ಇದರಿಂದ ಮಾಧ್ಯಮ ಕ್ಷೇತ್ರದ ಪಾವಿತ್ರ್ಯತೆ ಎಂದಿಗೂ ಕಡಿಮೆ ಆಗುವುದಿಲ್ಲ ಎಂದು ಹೇಳಿದರು.ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಮಾತನಾಡಿ, ಸರ್ಕಾರದ ಯೋಜನೆಗಳು, ಜನಸಾಮಾನ್ಯರಿಗೆ ಕೆಲವು ವಿಷಯ, ಮಾಹಿತಿಗಳನ್ನು ತುರ್ತಾಗಿ ನಿತ್ಯವೂ ಮಾಧ್ಯಮದ ಮೂಲಕ ತಲುಪಿಸಲಾಗುತ್ತಿದೆ. ಪತ್ರಿಕೆ ಇಲ್ಲದೇ ಬದುಕಲು ಸಾಧ್ಯವಿಲ್ಲ. ನಿತ್ಯದ ಜೀವನದ ಜತೆಗೆ ಪತ್ರಿಕೆ ಹಾಸುಹೊಕ್ಕಾಗಿದೆ ಎಂದರು.ಜನರಿಗೆ ತಿಳಿಸಬೇಕಾದ ವಿಷಯವನ್ನು ಸರಿಯಾದ ರೀತಿಯಲ್ಲಿ ನಿಖರ ಹಾಗೂ ಖಚಿತವಾಗಿ ಮಾಹಿತಿ ನೀಡಬೇಕು. ಮಾಧ್ಯಮ ಕೇವಲ ಸುದ್ದಿ, ಮಾಹಿತಿ ನೀಡುವುದು ಮಾತ್ರವಲ್ಲದೇ ಶಿಕ್ಷಣ, ಮನೋರಂಜನೆ ಸೇರಿದಂತೆ ಸುಮಾರು ವಿಷಯಗಳನ್ನು ಪ್ರಸಾರ ಮಾಡುತ್ತದೆ. ಜನರಿಗೆ ತಪ್ಪು ಮಾಹಿತಿ ನೀಡದೇ ಸರಿಯಾದ ವಿಷಯಗಳನ್ನು ತಿಳಿಸಬೇಕು. ಪತ್ರಿಕಾ ಧರ್ಮಕ್ಕೆ ಚ್ಯುತಿ ಬಾರದಂತೆ ಪತ್ರಕರ್ತರು ತಮ್ಮ ನೈತಿಕ ಮೌಲ್ಯಗಳನ್ನು ಕಾಪಾಡಿಕೊಂಡು ಹೋಗಬೇಕಿದೆ ಎಂದರು.