ಸಾಮಾಜಿಕ ಹೊಣೆಗಾರಿಕೆಯಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ: ಅರುಣಕುಮಾರ್

ಸಂಜೆವಾಣಿ ವಾರ್ತೆ
ಹೊಸಪೇಟೆ, ನ.03: ಪ್ರತಿಯೊಬ್ಬರು ತಮ್ಮ ಸಾಮಾಜಿಕ ಬದ್ದತೆಯನ್ನು ಪ್ರದರ್ಶಿಸಿದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯವಾಗಲಿದೆ  ಎಂದು ಇಂಡಿಯನ್ ಬ್ಯೂರೋಆಫ್ ಮೈನ್ಸ್ ಸಹಾಯಕ ನಿಯಂತ್ರಣಾಧಿಕಾರಿ ಅರುಣಕುಮಾರ್ ಹೇಳಿದರು.
ಮಂಗಳವಾರ ಎಂಎಸ್‍ಪಿಎಲ್ ಸಂಸ್ಥೆಯ ಸಿಎಸ್‍ಆರ್ ವಿಭಾಗ ಹಾಗೂ ಇಂಡಿಯನ್ ಬ್ಯೂರೋ ಆಫ್ ಮೈನ್ಸ್ ಸಹಯೋಗದಲ್ಲಿ ನಗರದ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಆಜಾದಿಕಾ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ ಅವರು, ಗಣಿ ಸಂಸ್ಥೆಗಳು ಆರೋಗ್ಯ, ಮಹಿಳಾ ಸಬಲೀಕರಣ ಹಾಗೂ ಪರಿಸರ ಹಸರೀಕರಣಕ್ಕೆ ಮಹತ್ವ ನೀಡುವ ಅಗತ್ಯವಿದೆ. 2030ರ ಒಳಗಾಗಿ ಪ್ರಪಂಚದಲ್ಲಿಯೇ ಭಾರತವನ್ನು ಮಾಲಿನ್ಯ ಮುಕ್ತ ದೇಶವನ್ನಾಗಿ ಮಾಡುವ ಹೊಣೆಗಾರಿಕೆ ನಮ್ಮ ಮೇಲಿದೆ ಎಂದರು.
ಇಂಡಿಯನ್ ಬ್ಯೂರೋಆಫ್ ಮೈನ್ಸ್‍ನ ಗಣಿಗಾರಿಕೆಯ ಹಿರಿಯ ಭೂವಿಜ್ಞಾನಿ ಡಾ. ಸುಧಾಕರ್ ಟಿ.ಎಲ್. ಮಾತನಾಡಿ, ಪ್ರತಿಯೊಂದು ದೇಶಗಳು ಪರಿಸರಕ್ಕೆ ಪೂರಕವಾಗಿ ಅನೇಕ ಯೋಜನೆಗಳನ್ನು ರೂಪಿಸುತ್ತಾ ಬಂದಿವೆ. ಈ ನಿಟ್ಟಿನಲ್ಲಿ ನಮ್ಮದೇಶವೂ ಸಹ ಅನೇಕ ಕಾರ್ಯ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ಇತ್ತೀಚಿಗೆ ಅನೇಕ ಖಾಸಗೀ ಕಂಪನಿಗಳು ಸಹ ಸಾಮಾಜಿಕ ಹೊಣೆಗಾರಿಕೆ ವಿಭಾಗಗಳ ಮೂಲಕ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿವೆ. ಈ ನಿಟ್ಟಿನಲ್ಲಿ ಎಂಎಸ್‍ಪಿಎಲ್ ಸಂಸ್ಥೆಯು ಪ್ರತಿ ವರ್ಷ ಲಕ್ಷಾಂತರ ಸಸಿಗಳನ್ನು ನೆಡುವ ಮೂಲಕ ಪರಿಸರಕ್ಕೆ ಪೂರಕ ವಾತಾವರಣವನ್ನು ಸೃಷ್ಠಿಸುತ್ತಿದೆ ಎಂದರು.
ಎಂಎಸ್‍ಪಿಎಲ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಪ್ರಭುದೇವಪ್ಪ ಮಾತನಾಡಿ, ಸಂಸ್ಥೆಯು ಅನೇಕ ಗ್ರಾಮಗಳನ್ನು ದತ್ತು ತೆಗೆದುಕೊಂಡು ಅವುಗಳ ಅಭಿವೃದ್ಧಿಗೆ ಪೂರಕವಾಗಿ ಕಾರ್ಯ ನಿರ್ವಹಿಸುತ್ತಿದೆ. ವಿಶೇಷವಾಗಿ ಕೇಂದ್ರ ಸರ್ಕಾರ ಗಣಿಗಾರಿಕೆ ನಡೆಸುವ ಸಂಸ್ಥೆಗಳಿಗೆ ಮರ-ಗಿಡಗಳನ್ನು ನಡೆಲು ಕಾಯ್ದೆ ರೂಪಿಸುವುದಕ್ಕಿಂತ ಮೊದಲೇ ಕಾರ್ಯ ಪ್ರವೃತ್ತವಾಗಿದೆ. ಇದುವರೆಗೆ ಸುಮಾರು 75 ಲಕ್ಷ ಸಸಿಗಳನ್ನು ನೆಟ್ಟು, ಅವುಗಳ ಪೋಷಣೆ ಕಾರ್ಯವನ್ನು ಮಾಡುತ್ತಿದೆ ಎಂದರು.
ಎಂಎಸ್‍ಪಿಎಲ್ ಸಂಸ್ಥೆಯ ಉಪಾಧ್ಯಕ್ಷ ಕೆ.ಮಧುಸೂಧನ್ ಮಾತನಾಡಿದರು. ಕುಮಾರಿ ಅಕ್ಷತಾ ಪ್ರಾರ್ಥಿಸಿದರು. ಎಸ್.ಎಸ್.ಚಂದ್ರಶೇಖರ್ ಸ್ವಾಗತಿಸಿದರು. ಹನುಮಂತ ಪೂಜಾರ್ ವಂದಿಸಿದರು.