ಸಾಮಾಜಿಕ ಸೇವೆ ವಿಸ್ತಾರಗೊಳ್ಳಲಿ


ಹುಬ್ಬಳ್ಳಿ, ಜು 27: ನಗರದ ಕುಸುಗಲ್ ರಸ್ತೆಯ ಸ್ಪೋರ್ಟ್ಸ್ ಪಾರ್ಕ್‍ನಲ್ಲಿ ನಿರಾಮಯ ಫೌಂಡೇಶನ್ ವತಿಯಿಂದ ಕಾರ್ಗಿಲ್ ವಿಜಯೋತ್ಸವ ಮತ್ತು ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಉದ್ಯಮಿ ರಮೇಶ ಭಾಪಣಾ, ಇಂದು ನಾವು ಸುರಕ್ಷಿತವಾಗಿ ಇರಲು ನಮ್ಮ ಸೈನಿಕರು ಕಾರಣ. ಸೈನಿಕರ ಸಾಹಸ, ಧೈರ್ಯಗಳನ್ನು ಇಂತಹ ಕಾರ್ಯಕ್ರಮದ ಮೂಲಕ ನೆನಪಿಸಿಕೊಳ್ಳುವ ಕಾರ್ಯಕ್ರಮ ಮಾಡುತ್ತಿರುವ ನಿರಾಮಯ ಫೌಂಡೇಶನ್ ಮತ್ತು ಈ ತಂಡದ ಸಾಮಾಜಿಕ ಸೇವೆಗಳು ವಿಸ್ತಾರಗೊಳ್ಳಲಿ ಎಂದು ಹಾರೈಸಿದರು.
ರಕ್ತದಾನ ಶಿಬಿರದ ಸಹಯೋಗ ನೀಡಿದ ರಾಷ್ಟ್ರೋತ್ಥಾನ ರಕ್ತನಿಧಿ ಕೇಂದ್ರದ ಮುಖ್ಯಸ್ಥರಾದ ದತ್ತಮೂರ್ತಿ ಕುಲಕರ್ಣಿ ಮಾತನಾಡಿ ರಕ್ತದಾನ ಮಾಡುವಂತೆ, ಇತರರಿಗೂ ಪ್ರೇರಪಿಸುವಂತೆ ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಾಜಿ ಯೋಧರಾದ ಹೆಚ್.ಎಲ್. ಭಜಂತ್ರಿ ಮಾತನಾಡಿ ತಮ್ಮ ಸೇವಾ ಅನುಭವವನ್ನು, ಸಿಯಾಚಿನ ಯುದ್ದ ಪ್ರದೇಶದ ಸೈನಿಕರ ಜೀವನವನ್ನು, ದೇಶದ ಗಡಿ, ಸೈನಿಕನ ಮನಸ್ಥಿತಿ ಹೀಗೆ ಸೈನಿಕರ ಕುರಿತಾಗಿ ತಮ್ಮ ಅನುಭವ ಹಂಚಿಕೊಂಡರು.
ನಿರಾಮಯ ಫೌಂಡೇಶನ್ ಅಧ್ಯಕ್ಷರಾದ ಡಾ. ಮಲ್ಲಿಕಾರ್ಜುನ ಬಾಳಿಕಾಯಿ ಅವರು ಅಧ್ಯಕ್ಷೀಯ ಮಾತುಗಳಲ್ಲಿ ಕಾರ್ಗಿಲ್ ಯುದ್ಧದ ಹಿನ್ನಲೆ ಮತ್ತು ಯುದ್ದದ ಸಮಯದಲ್ಲಿ ನಡೆದ ಘಟನೆಗಳು, ರಾಜತಾಂತ್ರಿಕ ನಡೆಗಳ ಕುರಿತು ಸವಿಸ್ತಾರವಾಗಿ ಮಾತನಾಡಿದರು.
ನಂತರ ರಕ್ತದಾನ ಶಿಬಿರ ನಡೆಯಿತು. ಶಿಬಿರಕ್ಕೆ ಭೇಟಿ ನೀಡಿದ ಹು-ಧಾ ಸೆಂಟ್ರಲ್ ಕ್ಷೇತ್ರದ ಶಾಸಕರಾದ ಮಹೇಶ ಟೆಂಗಿನಕಾಯಿ ತಂಡದ ಸದಸ್ಯರನ್ನು ಶ್ಲಾಘಿಸಿದರು.
ಉಪಾಧ್ಯಕ್ಷರಾದ ದೇವರಾಜ ದಾಡಿಬಾವಿ, ಪವನ ಪಾಟೀಲ ಇದ್ದರು. ಸಂಚಾಲಕರಾದ ಗುರು ಬನ್ನಿಕೊಪ್ಪ ನಿರೂಪಿಸಿದರು, ಪ್ರಾರ್ಥನೆಯನ್ನು ನವೀನ ಪದಕಿ,ಸ್ವಾಗತವನ್ನು ಗುರು ಭದ್ರಾಪೂರ ಹಾಗೂ ಗಿರಿಧರ ಹಿರೇಮಠ ಪ್ರಾಸ್ತಾವಿಕ ನುಡಿಗಳನ್ನಾಡಿದರು.