ಸಾಮಾಜಿಕ ಸೇವೆ ನಮ್ಮೆಲ್ಲರ ಜವಾಬ್ದಾರಿಯಾಗಲಿ

ರಾಯಚೂರು,ಮಾ.೨೩-ಮಾನವ ಸಮಾಜ ಜೀವಿ, ಸಮಾಜಕ್ಕಾಗಿ ಬದುಕುವುದರಲ್ಲಿರುವ ಸಂತೋಷ ಬೇರಾವುದರಲ್ಲಿಲ್ಲ ಆ ನಿಟ್ಟಿನಲ್ಲಿ ಮಾನವನಿಗೆ ಸಾಮಾಜಿಕ ಸಂಬಂಧಗಳನ್ನು ಹೇಗೆ ಉಳಿಸಿಕೊಳ್ಳಬೇಕೆಂಬ ಅರಿವಿರಬೇಕು, ಸಾಮಾಜಿಕ ಸೇವೆ ನಮ್ಮೆಲ್ಲರ ಜವಾಬ್ದಾರಿಯಾಗಲಿ ಎಂದು ರಾಯಚೂರು ವಿಶ್ವವಿದ್ಯಾಲಯದ ಸಮಾಜ ವಿಜ್ಞಾನ ಡೀನ್ ಪ್ರೊ.ನುಸ್ರತ್ ಫಾತೀಮಾ ಅವರು ಹೇಳಿದರು.
ರಾಯಚೂರು ವಿಶ್ವವಿದ್ಯಾಲಯದ ಸಮಾಜಕಾರ್ಯ ವಿಭಾಗದ ವತಿಯಿಂದ ವಿಶ್ವ ಸಮಾಜಕಾರ್ಯ ದಿನಾಚರಣೆ ಮಂಗಳವಾರ ಆಯೋಜಿಸಿದ್ದು ಉದ್ಘಾಟರಾಗಿ ಆಗಮಿಸಿ ಮಾತನಾಡಿದ ಇವರು ಇಂದು ಹಲವಾರು ಭಾರತೀಯರು ಪಾಶ್ಚಾತ್ಯ ಸಂಸ್ಕೃತಿಗೆ ಮೊರೆಹೋಗಿ ಆಧುನಿಕರಣದ ವಶವಾಗಿ ಸಾಕಷ್ಟು ವಿಷಯಗಳಲ್ಲಿ ಸಮಾಜದ ಜೊತೆ ತಮ್ಮ ಸಂಬಂಧಗಳನ್ನು ಕಳಚಿಕೊಂಡು ಪರಿಸ್ಥಿತಿಗಳನ್ನು ಎದುರಿಸುತ್ತಿದ್ದಾರೆ ಅಂತಹ ಮನಸ್ಥಿತಿಗಳನ್ನು ಸಮಾಜಕಾರ್ಯ ಕರ್ತರು ಗುರುತಿಸಿ ಸಮಸ್ಯೆ ಬಗೆ ಹರಿಸುವಲ್ಲಿ ಕಾರ್ಯನಿರ್ವಹಿಸಬೇಕಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಸಮಾಜಕಾರ್ಯ ವಿಭಾಗದ ಅತಿಥಿ ಉಪನ್ಯಾಸಕರಾದ ಡಾ.ಶರಣಬಸವರಾಜ ಇವರು ಮಾತನಾಡುತ್ತ ಸಮಾಜದ ಮೇಲಿನ ಕಾಳಜಿ ಸೇವಾ ಮನೋಭಾವನೆ ರೂಢಿಸಿಕೊಳ್ಳಲು ಪ್ರೋತ್ಸಾಹ ನೀಡುವುದಕ್ಕಾಗಿ ವಿಶ್ವ ಸಮಾಜಕಾರ್ಯ ದಿನ ಆಚರಿಸಲಾಗುತ್ತದೆ ಇದರ ಪ್ರಯುಕ್ತ ಸಹಯೋಗದ ಸಾಮಾಜಿಕ ಕ್ರಿಯೆಯ ಮೂಲಕ ವಿವಿಧತೆಯನ್ನು ಗೌರವಿಸುವುದು ಸಮಾಜಕಾರ್ಯದ ಉದ್ದೇಶವಾಗಿದೆ. ನಾವೆಲ್ಲರು ಒಂದೇ, ನನಗಲ್ಲ ನಮಗೆ ಎನ್ನುವ ಜೊತೆಗೆ ಸಮಾಜದಲ್ಲಿರುವ ಜಾತಿ, ಮತ, ಧರ್ಮ, ವಯಸ್ಸು, ಪದವಿ, ಸ್ಥಾನ ಹೀಗೆ ವಿವಿಧತೆ ಹೊಂದಿದರೂ ಸಹಯೋಗದಿಂದ ವ್ಯಕ್ತಿಯನ್ನು ಗೌರವಿಸುವುದು ಅವರ ಕುಂದು ಕೊರತೆಗಳನ್ನು ಅವಲೋಕಿಸಿ ಸರಿಯಾದ ಪರಿಹಾರ ಕಂಡುಕೊಳ್ಳುವ ಮನೋಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದು ನುಡಿದರು.