
ಕಲಬುರಗಿ:ಮೇ.26: ನೀವೂ ಎಷ್ಟೇ ವೈಯಕ್ತಿಕವಾಗಿ ಬೆಳೆದರೂ ಸಾಮಾಜಿಕ ಸೇವೆಗೈದಲ್ಲಿ ಮಾತ್ರ ವ್ಯಕ್ತಿತ್ವಕ್ಕೆ ಬೆಲೆ ಬರುತ್ತದೆ ಎಂದು ಶಹಾಪುರ ವಿಶ್ವಕರ್ಮ ಏಕದಂಡಗಿ ಮಠದ ಪೂಜ್ಯರಾದ ಅಜೇಂದ್ರ ಮಹಾಸ್ವಾಮಿಗಳು ಹೇಳಿದರು.
ನಗರದ ಆಳಂದ ರಸ್ತೆಯ ವಿಶ್ವಾರಾಧ್ಯ ಮಂದಿರದಲ್ಲಿ ಮೌನೇಶ್ವರ ಫರ್ನಿಚಸ್೯ನ ಮಾಲೀಕರಾದ ಸುನೀಲ್ ಕಾಳಪ್ಪ ವಿಶ್ವಕರ್ಮ ಅವರು ತಮ್ಮಿಬ್ಬರ ಮಕ್ಕಳಾದ ಸಮರ್ಥ ಮತ್ತು ಶರಣ ಜತೆಗೆ ಹಮ್ಮಿಕೊಳ್ಳಲಾದ ವಿಶ್ವಕರ್ಮ ಸಮುದಾಯದ 50 ಮಕ್ಕಳ ಸಾಮೂಹಿಕ ಉಪನಯನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಸಮಾಜದಲ್ಲಿ ಕಾಯಕದೊಂದಿಗೆ ಮುನ್ನೆಡೆದಲ್ಲಿ ಹೆಚ್ಚಿನ ಬೆಲೆವಿದೆ. ಅದರ ಜತೆಗೆ ಸಾಮಾಜಿಕ ಸೇವೆ ಮೈಗೂಢಿಸಿಕೊಂಡಲ್ಲಿ ಅವರ ಮುಂದೆ ಮತ್ಯಾರು ಇಲ್ಲ. ಅದೇ ನಿಟ್ಟಿನಲ್ಲಿ ಸುನೀಲ್ ವಿಶ್ವಕರ್ಮ ಮುನ್ನೆಡೆದಿದ್ದಾರೆ ಎಂದು ಶ್ಲಾಘಿಸಿದರು.
ಯಡ್ರಾಮಿ ವಿರಕ್ತ ಮಠದ ಸಿದ್ದಲಿಂಗ ಮಹಾಸ್ವಾಮಿಗಳವರೂ ಸಹ ಸಾನ್ನಿಧ್ಯ ವಹಿಸಿ, ಸನಾತನ ಪರಂಪರೆ ನಾವು ಮರೆಯಬಾರದು. ಆಧುನಿಕ ಭರಾಟೆಯಲ್ಲಿ ನಮ್ಮ ಸಂಪ್ರದಾಯ ಕಡೆಗಣಿಸುವುದು ಸರಿಯಲ್ಲ ಎಂದು ಕಿವಿ ಮಾತು ಹೇಳಿದರು.
ಅಫಜಲಪುರ ವಿಶ್ವಕರ್ಮ ಮೂರು ಝಾವಧೀಶ್ವರ ಮಠದ ಪೂಜ್ಯರಾದ ಗುರುದೇವಯ್ಯ ಮಹಾಸ್ವಾಮಿಗಳು ಹಾಗೂ ಚಿಕ್ಕೇಂದ್ರ ಮಹಾಸ್ವಾಮಿಗಳು, ಶಹಾಪುರ ವಿಶ್ವಕರ್ಮ ಏಕದಂಡಗಿ ಮಠದ ಕಾಳಹಸ್ತೇಂದ್ರ ಮಹಾಸ್ವಾಮಿಗಳು, ಯಾದಗಿರಿ ಏಕದಂಡಗಿ ಮಠದ ಸುರೇಂದ್ರ ಮಹಾಸ್ವಾಮಿಗಳು, ಅಫಜಲಪುರ ಏಕದಂಡಗಿ ಮಠದ ಮೌನೇಶ ಸ್ವಾಮಿಗಳು, ಸುಲೇಪೇಟ ಏಕದಂಡಗಿ ಮಠದ ದೊಡ್ಡೇಂದ್ರ ಮಹಾಸ್ವಾಮಿಗಳು, ಪ್ರಣವ ನಿರಂಜನ್ ಮಹಾಸ್ವಾಮಿಗಳು ಹಾಗೂ ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ ಸೇರಿದಂತೆ ನಾಡಿನ ಮಠಾಧೀಶರು ಸೇರಿದಂತೆ ಅನೇಕರು ಹಾಜರಿದ್ದರು.