ಸಾಮಾಜಿಕ ಸುಧಾರಣೆಗೆ ಅಲ್ಲಮಪ್ರಭುಗಳ ಕೊಡುಗೆ ಅನನ್ಯ

ಕಲಬುರಗಿ:ಮಾ.22: ಪ್ರಸ್ತುತ ದಿನಗಳಲ್ಲಿಯೂ ಕೂಡಾ ಕಂಡು ಬರುತ್ತಿರುವ ಜಾತಿಯತೆ, ಮೂಢ ನಂಬಿಕೆ, ಕಂದಾಚಾರ, ಅಂಧಶೃದ್ಧೆಯಂತಹ ಮುಂತಾದ ಸಾಮಾಜಿಕ ಸಮಸ್ಯೆಗಳ ನಿರ್ಮೂಲನೆಗೆ 950 ವರ್ಷಗಳ ಹಿಂದೆಯೇ ಬಸವಣ್ಣನವರ ಜೊತೆಗೂಡಿ ನಿರಂತರವಾಗಿ ಹೋರಾಡಿ, ಸಾಮಾಜಿಕ ಸಮಾನತೆಯ ನಿರ್ಮಾಣಕ್ಕೆ ಶ್ರಮಿಸಿದ ಶರಣ ಅಲ್ಲಮಪ್ರಭು ಅವರ ಕೊಡುಗೆ ತುಂಬಾ ಅನನ್ಯವಾಗಿದೆ ಎಂದು ಉಪನ್ಯಾಸಕ, ಶರಣ ಚಿಂತಕ ಎಚ್.ಬಿ.ಪಾಟೀಲ ಅಭಿಪ್ರಾಯಪಟ್ಟರು.
ನಗರದ ಆಳಂದ ರಸ್ತೆಯ ಜೆ.ಆರ್ ನಗರದ ಕೊಹಿನೂರ ಸ್ಪೋಕನ್ ಇಂಗ್ಲೀಷ್ ಅಕಾಡೆಮಿಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗಿದ ‘ಅಲ್ಲಮಪ್ರಭುದೇವರ ಜಯಂತಿ’ಯ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ವಿಶ್ವದ ಪ್ರಥಮ ಸಂಸತ್ತೆಂದು ಕರೆಯಲ್ಪಡುವ ‘ಅನುಭವ ಮಂಟಪ’ದ ಅಧ್ಯಕ್ಷರಾಗಿ ಸಕಲ ಜಾತಿ, ಧರ್ಮ, ಜನಾಂಗದವರಿಗೆ ಸಮಾನವಾದ ಅವಕಾಶಗಳನ್ನು ಒದಗಿಸಿಕೊಟ್ಟು, ಸಮ-ಸಮಾಜ ನಿರ್ಮಾಣಕ್ಕೆ ಸಾಕಷ್ಟು ಪ್ರಯತ್ನಿಸಿದರು. ವಚನಕಾರರ ಜೀವನ ಸಿದ್ಧಾಂತದ ಸಾರವನ್ನು ತಮ್ಮ ಇರುವಿನಲ್ಲಿರಿಸಿಕೊಂಡು ಶರಣ ಮಾರ್ಗಕ್ಕೆ ಗುರುವಾದರು. ಅಪಾರ ಜ್ಞಾನಿಗಳಾದ ಅವರು, ತಮ್ಮ ಅನುಭದಿಂದ ಸಾಮಾಜಿಕ ಕಳಕಳಿಯುಳ್ಳ ಅನೇಕ ವಚನಗಳನ್ನು ರಚಿಸಿದ್ದಾರೆ. ‘ಗುಹೇಶ್ವರಾ’ ಎಂಬ ಅಂಕಿತನಾಮದೊಂದಿಗೆ ರೂಪುಗೊಂಡ ವಚನಗಳು, ಸಮಾಜಕ್ಕೆ ಅವಶ್ಯಕವಾಗಿವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಶಿವಯೋಗಪ್ಪ ಬಿರಾದಾರ, ಡಾ.ಸತೀಶ್ ಟಿ.ಸಣಮನಿ, ದತ್ತು ಹಡಪದ ಸೇರಿದಂತೆ ಇನ್ನಿತರರು ಇದ್ದರು.