ಸಾಮಾಜಿಕ ಸಮಾನತೆಗೆ ಅಲ್ಲಮಪ್ರಭುಗಳ ಕೊಡುಗೆ ಅಮೋಘ

ಕಲಬುರಗಿ:ಎ.13: ಜಾತಿಯತೆ, ಮೂಢ ನಂಬಿಕೆ, ಕಂದಾಚಾರ, ಅಂಧಶೃದ್ಧೆಯಂತಹ ಮುಂತಾದ ಸಾಮಾಜಿಕ ಸಮಸ್ಯೆಗಳ ನಿರ್ಮೂಲನೆಗೆ 950 ವರ್ಷಗಳ ಹಿಂದೆಯೇ ಬಸವಣ್ಣನವರ ಜೊತೆಗೂಡಿ ಅಲ್ಲಮಪ್ರಭುಗಳು ಶ್ರಮಿಸಿದ್ದಾರೆ. ವಿಶ್ವದ ಪ್ರಥಮ ಸಂಸತ್ತೆಂದು ಕರೆಯಲ್ಪಡುವ ‘ಅನುಭವ ಮಂಟಪ’ದ ಅಧ್ಯಕ್ಷರಾಗಿ ಸಕಲ ಜಾತಿ, ಧರ್ಮ, ಜನಾಂಗದವರಿಗೆ ಸಮಾನವಾದ ಅವಕಾಶಗಳನ್ನು ಒದಗಿಸಿಕೊಡುವ ಮೂಲಕ ಸಾಮಾಜಿಕ ಸಮಾನತೆಗೆ ಅಮೋಘವಾದ ಕೊಡುಗೆಯನ್ನು ನೀಡಿದ್ದಾರೆಂದು ಉಪನ್ಯಾಸಕ, ಶರಣ ಚಿಂತಕ ಎಚ್.ಬಿ.ಪಾಟೀಲ ಅಭಿಪ್ರಾಯಪಟ್ಟರು.
ನಗರದ ಆಳಂದ ರಸ್ತೆಯ ಶಿವನಗರದಲ್ಲಿರುವ ‘ಎಂ.ಎಂ.ಎನ್ ಟ್ಯೂಟೋರಿಯಲ್ಸ್’ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ‘ಅಲ್ಲಮಪ್ರಭುದೇವರ ಜಯಂತಿ’ಯ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ನಮನಗಳನ್ನು ಸಲ್ಲಿಸಿ ಅವರು ಮಾತನಾಡುತ್ತಿದ್ದರು.
ಅಪಾರ ಜ್ಞಾನಿಗಳಾಗಿದ್ದ ಪ್ರಭುದೇವರು, ತಮ್ಮ ಅನುಭಾವದಿಂದ ಸಾಮಾಜಿಕ ಕಳಕಳಿಯುಳ್ಳ ಅನೇಕ ವಚನಗಳನ್ನು ರಚಿಸಿದ್ದಾರೆ. ‘ಗುಹೇಶ್ವರಾ’ ಎಂಬ ಅಂಕಿತನಾಮದೊಂದಿಗೆ ರೂಪುಗೊಂಡ ವಚನಗಳು ಸಾಮಾಜಿಕ ಪಿಡುಗುಗಳ ನಿರ್ಮೂಲನೆಗೆ ಔಷಧಿಯಂತೆ ಕಾರ್ಯನಿರ್ವಹಿಸುತ್ತವೆ. ವಚನಕಾರರ ಜೀವನ ಸಿದ್ಧಾಂತದ ಸಾರವನ್ನು ತಮ್ಮ ಇರುವಿನಲ್ಲಿರಿಸಿಕೊಂಡು ಶರಣ ಮಾರ್ಗಕ್ಕೆ ಗುರುವಾದರೆಂದರು.
ಬಳಗದ ಉಪಾಧ್ಯಕ್ಷ ನರಸಪ್ಪ ಬಿರಾದಾರ ದೇಗಾಂವ ಅವರು ಮಾತನಾಡುತ್ತಾ, ಅಲ್ಲಮಪ್ರಭುದೇವರು ಶ್ರೇಷ್ಠ ಸಮಾಜ ಸುಧಾರಕರಾಗಿ, ಅನುಭಾವಿಯಾಗಿ, ಕವಿಯಾಗಿ, ಸಿದ್ಧ ಸಾಧಕರಾಗಿ ಕಾವ್ಯದ ಮಟ್ಟವನ್ನು ಮೀರಿ ನಿಂತ ಪ್ರವಾದಿಯಾಗಿ, ಮಹಾಯೋಗಿಯಾಗಿ, ಮಾನವೀಯ ಮೌಲ್ಯಗಳ ಸಾಕಾರ ಮೂರ್ತಿಯಾಗಿ ಕಂಡುಬರುತ್ತಾರೆಂದು ನುಡಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಸಾಗರ ಜಿ.ಬಂಗರಗಿ, ಅಮರ ಜಿ.ಬಂಗರಗಿ, ಪ್ರಮುಖರಾದ ಎಂ.ಬಿ.ನಿಂಗಪ್ಪ, ಎಸ್.ಎಸ್.ಪಾಟೀಲ ಬಡದಾಳ, ನಾಗೇಂದ್ರಪ್ಪ ಕಲಶೆಟ್ಟಿ, ಅಶೋಕ ಜಾಧವ, ವಿಜಯ ಪಾಟೀಲ ಸೇರಿದಂತೆ ಮತ್ತಿತರರಿದ್ದರು.