ಸಾಮಾಜಿಕ ಸಮಸ್ಯೆ-ಪರಿಹಾರದ ಮೇಲೆ ಬೆಳಕು ಚೆಲ್ಲುವ ಸಾಹಿತ್ಯ ಹೊರಹೊಮ್ಮಲಿ

ಕಲಬುರಗಿ:ಮೇ.17: ಕವಿಯಾದವನು ಆದರ್ಶ ವ್ಯಕ್ತಿತ್ವವನ್ನು ಹೊಂದಿರಬೇಕು. ಕೇವಲ ಕಲ್ಪನೆ ಆಧಾರಿತ ಸಾಹಿತ್ಯ ರಚಿಸಿದರೆ, ಅದರಿಂದ ಸಮಾಜಕ್ಕೆ ಪ್ರಯೋಜನೆಯಿಲ್ಲ. ಬದಲಿಗೆ ಸಮಾಜದಲ್ಲಿರುವ ರೈತ, ಜನ ಸಾಮಾನ್ಯರು, ಸಾಮಾಜಿಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿ,ಅವುಗಳಿಗೆ ಪರಿಹಾರಗಳನ್ನು ಸೂಚಿಸುವ ಸಮಾಜಮುಖಿ ಸಾಹಿತ್ಯ ರಚನೆ ಮಾಡುವುದು ಪ್ರಸ್ತುತ ಸಂದರ್ಭದಲ್ಲಿ ಅವಶ್ಯಕವಾಗಿದೆ ಎಂದು ಪ್ರಗತಿಪರ ಚಿಂತಕ ಪ್ರೊ.ಆರ್.ಕೆ.ಹುಡಗಿ ಆಶಯ ವ್ಯಕ್ತಪಡಿಸಿದರು.

    ನಗರದ ಆಳಂದ ರಸ್ತೆಯ ಸಂತೋಷ ಕಾಲನಿಯ ಕೆ.ಎಚ್.ಬಿ ಗೀನ್ ಪಾರ್ಕ ಬಡಾವಣೆಯ ದಕ್ಷಿಣಮುಖಿ ಆಂಜನೇಯ ದೇವಸ್ಥಾನದ ಆವರಣದಲ್ಲಿ 'ಗಿರಿಜಾ ಪ್ರಕಾಶನ'ದ ವಿಜಯಕುಮಾರ ಮಾಲಿಪಾಟೀಲ ರಚಿತ 'ಅಂತರಂಗದ ಮೃದಂಗ' ಕವನ ಸಂಕಲನವನ್ನು ಮಂಗಳವಾರ ಸಂಜೆ ಜರುಗಿದ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡುತ್ತಿದ್ದರು.
   ನಮ್ಮ ಭಾಗದಲ್ಲಿ ಅನೇಕ ಪ್ರತಿಭಾವಂತರಿದ್ದು, ಅವರಿಗೆ ಪ್ರೋತ್ಸಾಹ ನೀಡುವುದು ಅಗತ್ಯವಾಗಿದೆ. ಇಲ್ಲಿನ ಮಾಧ್ಯಮಗಳು ಸಮಾಜ ಸೇವಕರು, ಸಾಹಸಿ ಕವಿಗಳು, ಚಿಂತಕರು, ಸಾಧಕರನ್ನು ಗುರ್ತಿಸಿ, ಬೆಳೆಸುವ ಕಾರ್ಯ ಮಾಡಬೇಕಾಗಿದೆ. ನಮ್ಮ ಭಾಗದಲ್ಲಿ ಸಾಹಸಿ ಕವಿಗಳ ಸಂಖ್ಯೆ ಹೆಚ್ಚಾಗಬೇಕು. ಸೂಕ್ಷ್ಮತೆ ಅಥವಾ ಸಂವೇದನಾಶೀಲ ಗುಣ ಬೆಳೆಸಿಕೊಳ್ಳಬೇಕು. ಕವಿಯಲ್ಲಿ ಮಾನವೀಯತೆ, ಸಾಮಾಜಿಕ ನ್ಯಾಯವನ್ನು ಒದಗಿಸಿಕೊಡಬೇಕೆಂಬ ಹಠಮಾರಿತನ, ಜಿದ್ದು ಇದ್ದರೆ, ಆಗ ಸಮಜಮುಖಿ ಕವಿಯಾಗಲು ಸಾಧ್ಯವಿದೆ ಎಂದು ಅನೇಕ ವಿಚಾರಗಳನ್ನು ಪ್ರಸ್ತಾಪಿಸಿದರು.
   ಸಾಹಿತಿ ಪ್ರೊ.ಕಲ್ಯಾಣರಾವ ಪಾಟೀಲ ಮಾತನಾಡಿ, ಬದುಕಿನ ವಾಸ್ತವಿಕತೆಯನ್ನು ಹೊಂದಿರುವ ಸಾಹಿತ್ಯ ರಚನೆಗೆ ಆದ್ಯತೆ ನೀಡಬೇಕು. ಈ ಕೃತಿಯು 123 ಕವನಗಳನ್ನು ಹೊಂದಿರುವ, ಸಮಾಜಕ್ಕೆ ಅಗತ್ಯವಾದ ವಿಷಯಗಳನ್ನು ಒಳಗೊಂಡ ಮೌಲಿಕ, ಬೃಹತ ಕವನ ಸಂಕಲನವಾಗಿದ್ದು, ಎಲ್ಲರು ಓದುವಂತ ಕೃತಿ ಇದಾಗಿದೆ ಎಂದರು.
ಹಿರೇನಂದೂರ ಶಿವಸಾಂಭ ಸ್ವಾಮೀಜಿ, ಡಾ.ಶಿವರಾಜ ಶಾಸ್ತ್ರಿ ಎನ್.ಹೇರೂರ್, ಶರಣಗೌಡ ಡಿ.ಪಾಟೀಲ, ಸಂಜೀವಕುಮಾರ ಶೆಟ್ಟಿ, ಎಚ್.ಬಿ.ಪಾಟೀಲ, ಪೃತ್ವಿರಾಜ ವಿ.ಮಾಲಿಪಾಟೀಲ, ಶರಣಗೌಡ ಬಿ.ಪಾಟೀಲ, ಡಾ.ವಿಜಕುಮಾರ ಪರೂತೆ, ವೈಜನಾಥ ಗೋಳೆ, ವಿಜಯಕುಮಾರ ಮಾಲಿಪಾಟೀಲ, ಗಿರಿಜಾ ವಿ.ಮಾಲಿಪಾಟೀಲ, ಆರ್.ಜೆ.ವಾಣಿ ವೇದಿಕೆ ಮೇಲಿದ್ದರು.
  ಪ್ರೊ.ರವೀಂದ್ರ ವಿ.ಪಾಟೀಲ ಪುಸ್ತಕ ಪರಿಚಯಿಸಿದರು. ಸಂಗಮೇಶ್ವರ ಸರಡಗಿ ಲೇಖಕರ ಪರಿಚಯ ಮಾಡಿಕೊಟ್ಟರು. ಶಿವಕಾಂತ ಚಿಮ್ಮಾ ಸ್ವಾಗತಿಸಿದರು. ಮೋಹನ ಎಂ.ಕಟ್ಟಿಮನಿ ನಿರೂಪಿಸಿದರು. ವೀರೇಶ ಬೋಳಶೆಟ್ಟಿ ನರೋಣಾ ವಂದಿಸಿದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ ಗೌರವಿಸಲಾಯಿತು.