
(ಸಂಜೆವಾಣಿ ವಾರ್ತೆ)
ವಿಜಯಪುರ:ಆ.5: ಸಂಶೋಧನಾ ವಿದ್ಯಾರ್ಥಿನಿಯರು ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸುವ ಸಂಶೋಧನೆಯನ್ನು ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಬಿ.ಕೆ.ತುಳಸಿಮಾಲ ಹೇಳಿದರು.
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಸಂಶೋಧನಾ ವಿದ್ಯಾರ್ಥಿನಿಯರಿಗೆ ಲ್ಯಾಪ್-ಟಾಪ್ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ಲ್ಯಾಪಟಾಪ್‍ಗಳ ಸದುಪಯೋಗವನ್ನು ಸಂಶೋಧನೆಗಷ್ಟೇ ಸೀಮಿತಗೊಳಿಸದೇ ಮಾಹಿತಿ ವಿಶ್ಲೇಷಣೆಗಳನ್ನು ಮಾಡಿ ಆ ಮೂಲಕ ಆರ್ಥಿಕವಾಗಿ ಸದೃಢರಾಗಬಹುದೆಂದು ಸಲಹೆ ನೀಡಿದರು.
ಸಮಾರಂಭದಲ್ಲಿ ವಿಜಯಪುರದ ಸಮಾಜ ಕಲ್ಯಾಣ ಇಲಾಖೆಯ ಉಪ-ನಿರ್ದೇಶಕ ಪುಂಡಲಿಕ ಮಾನವರ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ವಿವಿಯ ಕುಲಸಚಿವ ಎಸ್.ಎಸ್.ಸೋಮನಾಳ, ಪ್ರಾಧ್ಯಾಪಕರು, ಅತಿಥಿ ಉಪನ್ಯಾಸಕರು, ಸಂಶೋಧನಾ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ವಿವಿಯ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಘಟಕÀದ ನಿರ್ದೇಶಕಿ ಪ್ರೊ.ಲಕ್ಷ್ಮಿದೇವಿ.ವೈ ಸ್ವಾಗತ ಮತ್ತು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಿಕ್ಷಣ ಅಧ್ಯಯನ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ಸರಸ್ವತಿ ಬೆಳ್ಳುಂಡಗಿ ಅತಿಥಿಗಳ ಪರಿಚಯ ಮಾಡಿದರು. ದೈಹಿಕ ಶಿಕ್ಷಣ ಅಧ್ಯಯನ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ಸುಮಾ ತಡವಳಕರ ವಂದಿಸಿದರು. ಮಹಿಳಾ ಅಧ್ಯಯನ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ತೇಜಸ್ವಿನಿ ಚಾಂದಕವಟೆ ಕಾರ್ಯಕ್ರಮವನ್ನು ನಿರೂಪಿಸಿದರು.