ಸಾಮಾಜಿಕ ಸಮಸ್ಯೆಗಳಿಗೆ ಅಕ್ಕನ ವಚನಗಳು ದಿವ್ಯೌಷಧ

ಕಲಬುರಗಿ: ಎ.4:ಶರಣ ಚಳುವಳಿಯ ಪ್ರಮುಖರಾಗಿ, ಸ್ವಾಭಿಮಾನದ ಪ್ರತೀಕವಾಗಿ, ಸ್ರೀವಾದಿ ಚಳವಳಿಯ ನಿಜವಾದ ಪ್ರತಿಪಾದಕಿಯಾಗಿ, ಅಕ್ಕರೆಯ ಅಕ್ಕನಾಗಿ, ಚಿಕ್ಕ ವಯಸ್ಸಿನಲ್ಲಿಯೇ ಸಕಲ ಸುಖವನ್ನು ತ್ಯಜಿಸಿ, ಸಮಾಜಕ್ಕಾಗಿ ಸೇವೆ ಸಲ್ಲಿಸಿದ ಅಕ್ಕ ಮಹಾದೇವಿಯವರು ಬಹುಮುಖ ವ್ಯಕ್ತಿತ್ವದ ಮಹಿಳಾ ಮೇರು ಶಿಖರವಾಗಿದ್ದು, ಅವರ ಕೊಡುಗೆ ಅನನ್ಯವಾಗಿದೆ. ಮೂಢನಂಬಿಕೆ, ಕಂದಾಚಾರ, ಅಂದಶೃದ್ಧೆ, ಅಧರ್ಮ, ಅನ್ಯಾಯ, ಅಸಮಾನತೆ ಸೇರಿದಂತೆ ಮುಂತಾದ ಸಮಸ್ಯೆಗಳಿಗೆ ಅಕ್ಕ ಮಹಾದೇವಿಯರ ವಚನಗಳು ಔಷಧಿಯ ರೂಪದಲ್ಲಿ ಕಾರ್ಯನಿರ್ವಹಿಸುತ್ತವೆ ಎಂದು ಅಕ್ಕಮಹಾದೇವಿ ಆಶ್ರಮದ ಪೂಜ್ಯ ಪ್ರಭುಶ್ರೀ ತಾಯಿ ಹೇಳಿದರು.
ನಗರದ ಬಿದ್ದಾಪೂರ ಕಾಲನಿಯಲ್ಲಿರುಯವ ಅಕ್ಕಮಹಾದೇವಿ ಆಶ್ರಮದಲ್ಲಿ ಮಹಾ ಶಿವಶರಣೆ ಅಕ್ಕಮಹಾದೇವಿ ಅವರ ಜಯಂತಿ ಪ್ರಯುಕ್ತ ಐದು ದಿವಸಗಳ ಜರುಗಲಿರುವ ವಿಶೇಷ ಉಪನ್ಯಾಸಗಳು, ಚಿಂತನೆಗಳು, ಶರಣ ಸಂಗಮ ಮತ್ತು ಸಂಗೀತ ಕಾರ್ಯಕ್ರಮದಲ್ಲಿ ಅವರು ಆಶಿರ್ವಚನ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಉಪನ್ಯಾಸಕ, ಶರಣ ಚಿಂತಕ ಎಚ್.ಬಿ.ಪಾಟೀಲ, ಬಸವಾದಿ ಶರಣರ ತತ್ವ ಒಳಗೊಂಡ ವಚನಗಳನ್ನು ಅಳವಡಿಸಿಕೊಂಡರೆ ಬದುಕು ಹಸನಾಗಲು ಸಾಧ್ಯವಾಗುತ್ತದೆ. ಶರಣ ತತ್ವ ಪಸರಿಸುವ ಕಾರ್ಯ ಆಶ್ರಮದ ಪೂಜ್ಯ ಪ್ರಭುಶ್ರೀ ತಾಯಿಯವರು ಪ್ರಾಮಾಣಿಕವಾಗಿ ಮಾಡುತ್ತಿದ್ದು, ಅವರಿಗೆ ಸಹಕಾರ ನೀಡುವುದು ಅಗತ್ಯವಾಗಿದೆ ಎಂದರು.
ಶರಣ ಚಿಂತಕ ಬಸ್ಸುಗೌಡ ಪಾಟೀಲ ಹಾವನೂರ ಕಾರ್ಯಕ್ರಮ ಉದ್ಘಾಟಿಸಿದರು. ಓಂಕಾರೇಶ್ವರ ಘೋಷಿಮಠ ಅಕ್ಕಮಹಾದೇವಿ ಅವರ ಜೀವನ ಚರಿತ್ರೆ, ಜಗನಾಥ ರಾಚೋಟಿ ಲಿಂಗಾಂಗ ಸಾಮರಸ್ಯದ ಬಗ್ಗೆ ವಿವರಿಸಿದರು. ಶರಣಗೌಡ ಪಾಟೀಲ ಪಾಳಾ ಮಾತನಾಡಿದರು. ಕಸಾಪ ಉತ್ತರ ವಲಯ ಗೌರವ ಅಧ್ಯಕ್ಷ ಶಿವಯೋಗಪ್ಪ ಬಿರಾದಾರ ಇದ್ದರು. ಭೀಮಾಶಂಕರ ಬಾಬಾ ನಿರೂಪಿಸಿದರು. ಮಲ್ಲಿಕಾರ್ಜುನ ರೋಣದ ವಂದಿಸಿದರು. ವೀರಭದ್ರ ಕುಂಬಾರ ಸಂಗೀತ ಹಾಗೂ ಗುರು ಬಿರಾದಾರ ಅವರು ತಬಲಾ ಸಾಥ್ ನೀಡಿದರು. ಬಡಾವಣೆಯ ಅನೇಕ ಶರಣ-ಶರಣೆಯರು ಪಾಲ್ಗೊಂಡಿದ್ದರು.