ವಿಜಯಪುರ, ಏ.16: ಕರ್ನಾಟಕ ವಿಧಾನಸಭೆಗೆ ಸಾರ್ವತ್ರಿಕ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಮಾಧ್ಯಮಗಳ ಮೇಲೆ ವಿಶೇಷ ನಿಗಾ ವಹಿಸಲಾಗಿದ್ದು, ನೀತಿ ಸಂಹಿತೆ ಉಲ್ಲಂಘನೆಯಾಗುವಂತಹ ಯಾವುದೇ ಪೋಸ್ಟ್‍ಗಳಾಗಲಿ, ಕಾಮೆಂಟ್‍ಳಾಗಲೀ ಮಾಡುವಂತಿಲ್ಲ. ಅಂತಹ ಪೋಸ್ಟ್-ಕಮೆಂಟ್‍ಗಳು ಕಂಡು ಬಂದಲ್ಲಿ ಸಂಬಂಧಿಸಿದವರ ಮೇಲೆ ಮೂಕದ್ದಮೆ ದಾಖಲಿಸಿ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿಗಳಾದ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ಎಚ್ಚರಿಸಿದ್ದಾರೆ.
ಚುನಾವಣೆಗೆ ನಿಯೋಜಿತ ಜಿಲ್ಲಾ ಮಾಧ್ಯಮ ಪರಿಶೀಲನಾ ಕೋಶದಲ್ಲಿರುವ ವಿವಿಧ ಕ್ಷೇತ್ರಗಳ ತಜ್ಞರು ಪತ್ರಿಕೆಗಳು, ಫೇಸ್‍ಬುಕ್, ವಾಟ್ಸಾಪ್, ಇನ್‍ಸ್ಟಾಗ್ರಾಂ, ಯೂಟ್ಯೂಬ್, ವೆಬ್ ಪೋರ್ಟ್‍ಲ್‍ಗಳು, ಟ್ವಿಟ್ಟರ್ ಮತ್ತಿತರ ಸಾಮಾಜಿಕ ಜಾಲತಾಣಗಳಲ್ಲಿ ಸೂಕ್ಷ್ಮ ನಿಗಾ ಇರಿಸಲಾಗಿದ್ದು, ಚುನಾವಣೆಗೆ ಸಂಬಂಧಿಸಿದ ಪೋಸ್ಟ್‍ಗಳನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದ್ದು, ಯಾವುದೇ ಸಾಮಾಜಿಕ ಜಾಲತಾಣ ಬಳಕೆದಾರರು ವೈಯಕ್ತಿಕ ನಿಂದನೆ, ಅವಹೇಳನ, ನಿರ್ದಿಷ್ಟ ವ್ಯಕ್ತಿ ಅಥವಾ ಸಮುದಾಯಕ್ಕೆ ಅವಮಾನ ಮಾಡುವುದು, ನಿಂದಿಸುವುದು, ಹೀಗಳೆಯುವುದು ಈ ರೀತಿ ಯಾವುದೇ ಅನುಚಿತ ವರ್ತನೆಯುಳ್ಳ ಬರಹ, ಪೋಸ್ಟ್ ಅಥವಾ ಅಂಥ ಪೋಸ್ಟ್‍ಗಳನ್ನು ಪಾರ್ವರ್ಡ್ ಮಾಡಿದ್ದು ಕಂಡು ಬಂದಲ್ಲಿ ಅಂಥವರ ವಿರುದ್ಧ ಪೊಲೀಸ್ ಠಾಣೆಗಳಲ್ಲಿ ಮೊಕದ್ದಮೆ ದಾಖಲು ಮಾಡಿ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.
ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರು, ಸಾಮಾನ್ಯ ಜನರು ಕೂಡಾ ಯಾವುದೇ ಜಾತಿ, ಧರ್ಮ, ಕೋಮು ಆಧರಿಸಿ ಚುನಾವಣಾ ಪ್ರಚಾರ ನಡೆಸುವುದು ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗುತ್ತದೆ. ಆದ್ದರಿಂದ ಸಾರ್ವಜನಿಕರು, ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಚುನಾವಣೆಗೆ ಸಂಬಂಧಿಸಿದ ವಿಷಯಗಳನ್ನು ಪ್ರಕಟಿಸುವಾಗ, ಪೋಸ್ಟ್ ಮಾಡುವಾಗ, ಪಾರ್ವರ್ಡ್ ಮಾಡುವಾಗ, ಕಾಮೆಂಟ್ ಮಾಡುವಾಗ ಎಚ್ಚರಿಕೆ ವಹಿಸುವಂತೆ ಅವರು ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟರ್, ಜಾಹೀರಾತು ಪ್ರಕಟಿಸಬೇಕಾಗಿದ್ದಲ್ಲಿ ಎಂಸಿಎಂಸಿಯಿಂದ ಪೂರ್ವಾನುಮತಿ ಪಡೆದುಕೊಂಡಿರಬೇಕು. ಜಿಲ್ಲಾ ಮಾಧ್ಯಮ ಪರಿಶೀಲನಾ ಕೋಶದ ನೋಡಲ್ ಅಧಿಕಾರಿ ರಾಮನಗೌಡ ಕನ್ನೊಳ್ಳಿ, ಸದಸ್ಯ ಕಾರ್ಯದರ್ಶಿ ಅಮರೇಶ ದೊಡಮನಿ, ಸದಸ್ಯರಾಗಿ ಪ್ರೊ.ಓಂಕಾರ ಕಾಕಡೆ, ಮಲ್ಲಿಕಾರ್ಜುನ ಭಜಂತ್ರಿ, ಪ್ರೊ.ವಿಜಯಾ ಕೋರಿಶೆಟ್ಟಿ, ಪ್ರೊ.ಪಿ.ಜಿ.ತಡಸದ, ಪ್ರೊ.ಅಜೀಜ್ ಮಕಾನದಾರ, ಸಂದೀಪ್ ಮತ್ತು ಸುರೇಶ ಬಾಗೇವಾಡಿ ಅವರು ಸದಸ್ಯರುಗಳಾಗಿ ಕಾರ್ಯನಿರ್ವಹಿಸುತ್ತಿದ್ದು, ಜಿಲ್ಲೆಯ ಸಾಮಾಜಿಕ ಜಾಲತಾಣ ಹಾಗೂ ಮುದ್ರಣ ಹಾಗೂ ವಿದ್ಯುನ್ಮಾನ ಚಟುವಟಿಕೆಗಳ ಮೇಲೆ ತೀವ್ರ ನಿಗಾ ಇರಿಸಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.