ಸಾಮಾಜಿಕ ಭದ್ರತಾ ಯೋಜನೆ, ಅಂಚೆಯಿಂದ ಸಕಾಲದಲ್ಲಿ ಮಾಸಾಶನ ತಲುಪಿಸಲು ಸೂಚನೆ


ದಾವಣೆಗೆರೆ, ಮಾ.6 ಸಾಮಾಜಿಕ ಭದ್ರತಾ ಯೋಜನೆಗಳಾದ ಸಂಧ್ಯಾಸುರಕ್ಷಾ, ವೃದ್ದಾಪ್ಯ, ವಿಧವಾ, ಅಂಗವಿಕಲರ ಮಾಸಾಶನ ಸೇರಿದಂತೆ ಇನ್ನಿತರೆ ಮಾಸಾಶನಗಳನ್ನು ಅಂಚೆ ಇಲಾಖೆಯಿಂದ ನಿಗದಿತ ಸಮಯಕ್ಕೆ ತಲುಪಿಸಬೇಕೆಂದು ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ ಸೂಚನೆ ನೀಡಿದರು.ಅವರು ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಅಂಚೆ ಇಲಾಖೆ ಅಧಿಕಾರಿಗಳು ಹಾಗೂ ಸಾಮಾಜಿಕ ಭದ್ರತಾ ಯೋಜನೆ ಅನುಷ್ಟಾನಾಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಪ್ರತಿ ತಿಂಗಳು ಸಾಮಾಜಿಕ ಭದ್ರತಾ ಯೋಜನೆ ಮಾಸಾಶನ ಸಕಾಲದಲ್ಲಿ ತಲುಪದ ಕಾರಣ ವಯೋವೃದ್ದರಿಗೆ ಜೀವನ ನಿರ್ವಹಣೆ ಹಾಗೂ ದಿನನಿತ್ಯದ ಖರ್ಚುವೆಚ್ಚಗಳಿಗೆ ಸಮಸ್ಯೆಯಾಗಿದೆ ಎಂದು ಹಲವು ಮಾಸಾಶನ ಫಲಾನುಭವಿಗಳು ದೂರು ನೀಡಿದ್ದರು.ಅಂಚೆ ಇಲಾಖೆಯಿಂದ ಮಾಸಾಶನಗಳು ಸಕಾಲದಲ್ಲಿ ವಿತರಣೆಯಾಗಿದೆಯೇ ಇಲ್ಲವೋ ಎಂಬ ಬಗ್ಗೆ ಪರಿಶೀಲನೆ ನಡೆಸಬೇಕು. ಮಾಸಾಶನದ ಮಾಹಿತಿ ಕೇಳಲು ಬರುವವರಿಗೆ ಅಂಚೆ ಕಚೇರಿಯಲ್ಲಿ ಸೌಜನ್ಯತೆಯಿಂದ ವರ್ತನೆ ಮಾಡುವ ಜೊತೆಗೆ ಅವರ ಖಾತೆಯಲ್ಲಿ ಹಣ ಜಮಾ ಆಗಿರುವ ಬಗ್ಗೆ ನಿಖರ ಮಾಹಿತಿಯನ್ನು ನೀಡಬೇಕು. ಕೆಲವೊಂದು ವೇಳೆ ಅಂಚೆ ಇಲಾಖೆ ನೌಕರರು ವಿತರಣೆಯ ವೇಳೆ ವಿಳಂಬ ಮಾಡುವ ಸಂಭವವಿದ್ದು ಇದನ್ನು ಪೋಸ್ಟ್ ಮಾಸ್ಟರ್ ಪ್ರತಿನಿತ್ಯ ಪರಿಶೀಲನೆ ಮಾಡಿಕೊಳ್ಳಬೇಕೆಂದು ತಿಳಿಸಿ ಮುಂದಿನ ದಿನಗಳಲ್ಲಿ ಸರ್ಕಾರದಿಂದ ಜಮಾ ಮಾಡಿದ್ದರೂ ಮಾಸಾಶನ ತಲುಪದಿದ್ದಲ್ಲಿ ಅಂತಹ ಸಿಬ್ಬಂದಿಯ ಮೇಲೆ ಶಿಸ್ತುಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು