ಸಾಮಾಜಿಕ ನ್ಯಾಯ ಸಮಾನತೆ ಸರ್ಕಾರಿ ನೌಕರರಿಗೆ ಕಾರ್ಯಾಗಾರ

ಕೋಲಾರ,ಆ,೨೪ಸರ್ಕಾರದ ವಿವಿಧ ಇಲಾಖೆಗಳಿಂದ ಸಿಗುವ ಸೌಭ್ಯಗಳನ್ನು ಪರಿಶಿಷ್ಟ ಜಾತಿ,ಪಂಗಡ, ಅಲ್ಪಸಂಖ್ಯಾತ ಮಹಿಳೆಯರಿಗೆ ಒದಗಿಸುವ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಪ್ರಯತ್ನದಲ್ಲಿ ಸರ್ಕಾರಿ ನೌಕರರು ಮತ್ತು ಅಧಿಕಾರಿಗಳ ಪಾತ್ರ ಮಹತ್ವವಾದುದು ಎಂದು ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಬಿ.ಶಿವಕುಮಾರ್ ಕರೆ ನೀಡಿದರು.
ಮೈಸೂರಿನ ಆಡಳಿತ ತರಬೇತಿ ಸಂಸ್ಥೆ ವತಿಯಿಂದ ಜಿಲ್ಲಾ ಪಂಚಾಯತ್ ಕೋಲಾರ ಮತ್ತು ಜಿಲ್ಲಾ ತರಬೇತಿ ಸಂಸ್ಥೆ ರವರ ಸಹಯೋಗದಲ್ಲಿ ಜಿಲ್ಲಾ ಪಂಚಾಯತ್ ತರಬೇತಿ ಕೇಂದ್ರದಲ್ಲಿ ಸರ್ಕಾರಿ ನೌಕರರು ಮತ್ತು ಅಧಿಕಾರಿಗಳಿಗಾಗಿ ನಡೆದ ಸಾಮಾಜಿಕ ನ್ಯಾಯ ಮತ್ತು ಸಮಾನತೆಯಡಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಮತ್ತು ಅಲ್ಪಸಂಖ್ಯಾತರ ಮಹಿಳೆಯರು’ ಕುರಿತ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸರ್ಕಾರ ಸಮಾಜದಲ್ಲಿನ ಅಸಮಾನತೆ ಹೋಗಲಾಡಿಸಲು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ, ಆದರೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವ ಸರ್ಕಾರದ ಆಶಯ ಈಡೇರುತ್ತಿಲ್ಲ ಎಂಬ ಕೊರಗು ಇದ್ದೇ ಇದೆ ಎಂದ ಅವರು, ಸೌಲಭ್ಯ ಪ್ರತಿಯೊಬ್ಬರಿಗೂ ತಲುಪಿದಾಗ ಮಾತ್ರ ಅಸಮಾನತೆ ಹೋಗಿ ಸಮಾನತೆ ನೆಲಸಲು ಸಾಧ್ಯ ಎಂದರು.
ಮೈಸೂರಿನ ಸಾಮಾಜಿಕ ನ್ಯಾಯ ಮತ್ತು ಸಮಾನತೆ ಕೇಂದ್ರದ ಬೋಧಕರಾದ ಡಾ.ಅಬ್ದುಲ್ ವಹಾಬ್ ಮಾತನಾಡಿ, ಸಂವಿಧಾನವೇ ಸಮಾನತೆಯ ಸಮಾಜ ನಿರ್ಮಾಣಕ್ಕೆ ಅಸ್ತ್ರವಾಗಿದೆ, ನಮ್ಮ ಸಂವಿಧಾನದ ಮೂಲ ಗುರಿಯೇ ಸಮಾನತೆ ಸಾಧಿಸುವುದಾಗಿದ್ದು, ಅನಕ್ಷರತೆ, ಅರಿವಿನ ಕೊರತೆ ಮತ್ತಿತರ ಕಾರಣಗಳಿಂದ ಸರ್ಕಾರದ ಸೌಲಭ್ಯಗಳಿಂದ ಅನೇಕರು ವಂಚಿತರಾಗುತ್ತಿದ್ದಾರೆ, ಪಡೆದವರೇ ಮತ್ತೆ ಮತ್ತೆ ಸೌಲಭ್ಯ ಪಡೆಯುತ್ತಿರುವುದು ಹಲವಾರು ಬಾರಿ ನೋಡಿದ್ದೇವೆ ಎಂದರು.
ಸರ್ಕಾರದ ಯಾವುದೇ ಜನಪರ ಯೋಜನೆ,ಕಾನೂನಿನ ಮೂಲ ಉದ್ದೇಶ ಸಮಾಜದಲ್ಲಿನ ಎಲ್ಲರಿಗೂ ಸರ್ಕಾರದ ಸೌಲಭ್ಯಗಳು ಸಮರ್ಪಕವಾಗಿ ಹಂಚಿಕೆಯಾಗಬೇಕು ಎಂಬುದೇ ಆಗಿದೆ, ಈ ಆಶಯದಿಂದಲೇ ಸರ್ಕಾರ ಸೌಲಭ್ಯಗಳನ್ನು ನೀಡುತ್ತದೆ ಆದರೆ ಅದು ಎಷ್ಟರಮಟ್ಟಿಗೆ ಕಟ್ಟಕಡೆಯ ಪ್ರಜೆಗೂ ತಲುಪುತ್ತಿದೆ ಎಂಬುದರ ಅವಲೋಕನ ಅಗತ್ಯವಾಗಿದೆ ಎಂದರು.
ಸರ್ಕಾರಿ ನೌಕರರು ಮನಸ್ಸುಮಾಡಿದರೆ ಸಮಾನತೆಯ ಸಮಾಜ ನಿರ್ಮಾಣ ಸಾಧ್ಯವಾಗಲಿದ್ದು, ಸರ್ಕಾರದ ಯೋಜನೆಗಳು, ಆರ್ಥಿಕ ಅನುದಾನಗಳು ಪ್ರತಿಯೊಬ್ಬರಿಗೂ ಸಮಾನವಾಗಿ ಹಂಚಿಕೆಯಾಗಿ ಸುಂದರ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಜಿಪಂ ಸಹಾಯಕ ಕಾರ್ಯದರ್ಶಿ ವೆಂಕಟಾಚಲಪತಿ, ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಂಶುಪಾಲ ಮಲಿಕಾರ್ಜುನ್, ಶಿಬಿರಾರ್ಥಿ ಹಾಗೂ ತಾಪಂ ಅಧೀಕ್ಷಕ ಎನ್.ಶ್ರೀನಿವಾಸರೆಡ್ಡಿ, ಗ್ರಾಮ ಪಂಚಾಯಿತಿ ಪಿಡಿಒಗಳಾದ ಇಂದಿರಮ್ಮ, ಸತ್ಯವತಿ ಕೆ.ಸಿ.ಬಾಲಾಜಿ, ಎಂ.ಆರ್.ರವಿ, ಶಕುಂತಲಾ, ತಾಪಂ ಅಧೀಕ್ಷಕಿ ಪ್ರಭ ಹಾಗೂ ಜಿಲ್ಲೆಯ ವಿವಿಧ ಇಲಾಖೆಗಳ ಸರ್ಕಾರಿ ನೌಕರರು ಹಾಜರಿದ್ದರು.