ಸಾಮಾಜಿಕ ನ್ಯಾಯ ನಿರ್ವಹಣೆ ಎಲ್ಲರ ಹೊಣೆ: ಪರಂ

(ಸಂಜೆವಾಣಿ ಪ್ರತಿನಿಧಿಯಿಂದ)
ತುಮಕೂರು, ಆ. ೧೫- ನಮ್ಮ ರಾಷ್ಟ್ರದ ಸಂವಿಧಾನದ ಮೂಲಾಧಾರ ವಾಗಿರುವ ಪ್ರಜಾಪ್ರಭುತ್ವ, ಜಾತ್ಯಾತೀತತೆ ಮತ್ತು ಸಾಮಾಜಿಕ ನ್ಯಾಯದ ಮೌಲ್ಯಗಳನ್ನು ಪ್ರತಿಯೊಬ್ಬ ನಾಗರಿಕರು ಎತ್ತಿ ಹಿಡಿಯ ಬೇಕು ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಇಂದಿಲ್ಲಿ ಕರೆ ನೀಡಿದರು.
ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದ ವತಿಯಿಂದ ಏರ್ಪಡಿಸಿದ್ದ ೭೭ನೇ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಗೌರವ ರಕ್ಷೆ ಸ್ವೀಕರಿಸಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.


ಪ್ರಜಾಪ್ರಭುತ್ವ, ಜಾತ್ಯಾತೀತೆ ಹಾಗೂ ಸಾಮಾಜಿಕ ನ್ಯಾಯದ ಮೌಲ್ಯಗಳನ್ನು ಎತ್ತಿ ಹಿಡಿಯುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
ಬ್ರಿಟಿಷರಿಂದ ಸ್ವಾತಂತ್ರ್ಯಗೊಂಡ ನಂತರ ಭಾರತ ದೇಶವು ಹಲವು ಮೈಲಿಗಲ್ಲುಗಳನ್ನು ಕಂಡಿದೆ. ಆರ್ಥಿಕತೆ, ರಾಜಕೀಯ, ತಂತ್ರಜ್ಞಾನ, ವಿಜ್ಞಾನ, ಮೂಲ ಸೌಕರ್ಯಗಳು ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಅನೇದ ಸಾಧನೆಗಳಿಗೆ ಸಾಕ್ಷಿಯಾಗಿದೆ. ಈ ಸಾಧನೆ ಅಭಿವೃದ್ಧಿಗಳ ಸಂಖ್ಯೆ ಸ್ವಾತಂತ್ರ್ಯ ಭಾರತದಲ್ಲಿ ಹೆಚ್ಚುತ್ತಲೇ ಇರುತ್ತದೆಯೇ ಹೊರತು, ಎಂದಿಗೂ ಇದಕ್ಕೆ ಅಂತ್ಯ ಎನ್ನುವುದಿಲ್ಲ ಎಂದು ಅವರು ತಿಳಿಸಿದರು.
ಬ್ರಿಟಿಷರಿಂದ ದಾಸ್ಯದಿಂದ ಮುಕ್ತಿ ಪಡೆದು ಭಾರತ ಸ್ವಾತಂತ್ರ್ಯವಾದ ಈ ಸುದಿನವನ್ನು ಸಾವಿರಾರು ಹೋರಾಟಗಾರರು, ದೇಶ ಪ್ರೇಮಿಗಳು ಹಾಗೂ ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನ ಮಾಡಿದ ಅನೇಕ ಸಾಧಕರು, ಹಿರಿಯರು ಮತ್ತು ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಅವರು ಹೇಳಿದರು.
ದೇಶದ ಲಕ್ಷಾಂತರ ಜನರಲ್ಲಿ ದೇಶ ಪ್ರೇಮದ ಕಿಚ್ಚನ್ನು ಹೊತ್ತಿಸಿದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಅಸಹಕಾರ ಚಳವಳಿ, ಕ್ವಿಟ್ ಇಂಡಿಯಾ ಚಳವಳಿ, ದಂಡಿಯಾತ್ರೆ, ಸತ್ಯಾಗ್ರಹದಂತಹ ಹೋರಾಟಗಳು ಬ್ರಿಟೀಷ್ ಸರ್ವಾಧಿಕಾರದ ಆಡಳಿತವನ್ನು ಕೊನೆಗಾಣಿಸಿದವು ಎಂದರು.
ಹೊತ್ತನಾಡು ಮತ್ತು ಹೆತ್ತತಾಯಿ ಇವರ ಋಣ ತೀರಿಸಲು ಯಾರಿಗೂ ಸಾಧ್ಯವಿಲ್ಲ. ಹಾಗಾಗಿ ಕುಟುಂಬದ ಯಜಮಾನಿ ಮಹಿಳೆಗೆ ಮಾಸಿಕ ೨ ಸಾವಿರ ರೂ. ನೀಡುವ ಗೃಹಲಕ್ಷ್ಮಿ, ಮಹಿಳಾ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ. ನಾಡಿನ ಅರ್ಹ ಗೃಹ ಬಳಕೆದಾರರಿಗೆ ಉಚಿತ ವಿದ್ಯುತ್ ಸೌಲಭ್ಯ ಒದಗಿಸುವ ಗೃಹ ಜ್ಯೋತಿ ಯೋಜನೆಯಿಂದಾಗಿ ಇಂದು ಲಕ್ಷಾಂತರ ಮನೆಗಳಲ್ಲಿ ಬದಲಾವಣೆಯ ಬೆಳಕು ಬೆಳಗುತ್ತಿದೆ ಎಂದರು.
ಅನ್ನಭಾಗ್ಯ ಯೋಜನೆಯ ಲಾಭವನ್ನು ರಾಜ್ಯದ ಲಕ್ಷಾಂತರ ಕುಟುಂಬಗಳು ಪಡೆದು ನೆಮ್ಮದಿಯ ಜೀವನ ನಡೆಸುತ್ತಿವೆ. ನಿರುದ್ಯೋಗಿ ಪದವೀಧರ ಹಾಗೂ ಡಿಪ್ಲೋಮಾ ಪದವೀಧರರಿಗೆ ನಿರುದ್ಯೋಗ ಭತ್ಯೆ ನೀಡುವ ಯುವನಿಧಿ ಯೋಜನೆಯೂ ಸಹ ಮುಂದಿನ ದಿನಗಳಲ್ಲಿ ಜಾರಿಗೆ ಬರಲಿದೆ. ಈ ಎಲ್ಲ ಜನಕಲ್ಯಾಣ ಯೋಜನೆಗಳನ್ನು ನಿಗದಿತ ಕಾಲದಲ್ಲಿ ಅನುಷ್ಠಾನಗೊಳಿಸುವ ಮೂಲಕ ನಮ್ಮ ಸರ್ಕಾರ ನುಡಿದಂತೆ ನಡೆದ ಸರ್ಕಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಅವರು ಹೇಳಿದರು.
ಅಧಿಕ ಮಳೆಯಿಂದ ಬೆಳೆ ಹಾನಿಯಾಗಿರುವ ರೈತರಿಗೆ ನೆರವು ನೀಡಲು ಮಳೆಯಾಶ್ರಿತ ಬೆಳೆಗೆ ಪ್ರತಿ ಹೆಕ್ಟೇರ್‌ಗೆ ೧೩೬೦೦ ರೂ., ನೀರಾವರಿ ಬೆಳೆಗಳಿಗೆ ೨೫ ಸಾವಿರ ರೂ. ಮತ್ತು ಬಹು ವಾರ್ಷಿಕ ಬೆಳೆಗಳಿಗೆ ೨೮ ಸಾವಿರ ರೂ.ಗಳ ಪರಿಹಾರವನ್ನು ಘೋಷಿಸಲಾಗಿದೆ. ಈ ಯೋಜನೆಯಡಿಯಲ್ಲಿ ಈವರೆಗೆ ಒಟ್ಟು ಹಾನಿಗೊಳಗಾದ ೯೫.೬೩ ಹೆಕ್ಟೇರ್ ಪ್ರದೇಶದ ಸಂತ್ರಸ್ತರಿಗೆ ನೇರವಾಗಿ ಪರಿಹಾರ ಧನವನ್ನು ವಿತರಿಸಲಾಗುವುದು ಎಂದು ಅವರು ತಿಳಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಸಶಸ್ತ್ರ ಪೊಲೀಸ್ ಪಡೆ, ನಾಗರೀಕ ಪೊಲೀಸ್ ತಂಡ, ಹೋಂಗಾರ್ಡ್ಸ್, ಅರಣ್ಯ ಇಲಾಖೆ, ಮಾಜಿ ಸೈನಿಕರು, ಶ್ರವಣ ದೋಷವುಳ್ಳ ಮಕ್ಕಳ ತಂಡ, ಪೊಲೀಸ್ ತರಬೇತಿ ಶಾಲೆ, ಪೊಲೀಸ್ ಬ್ಯಾಂಡ್ ತಂಡ, ಅರಣ್ಯ ರಕ್ಷಕರ ತಂಡ, ಎನ್‌ಸಿಸಿ ಬಾಲಕರ ತಂಡ, ಎನ್‌ಸಿಸಿ ಬಾಲಕಿಯರ ತಂಡ, ಕಲ್ಪತರು ಪೊಲೀಸ್ ಪಡೆ, ಭಾರತ ಸೇವಾ ದಳ, ಸ್ಕೌಟ್ಸ್ ಮತ್ತು ಗೈಡ್ಸ್ ತಂಡ ಸೇರಿದಂತೆ ವಿವಿಧ ತುಕಡಿಗಳಿಂದ ಆಕರ್ಷತ ಪಥಸಂಚಲನ ನಡೆಯಿತು.
ಸಮಾರಂಭದಲ್ಲಿ ಶಾಸಕರಾದ ಜ್ಯೋತಿಗಣೇಶ್, ಬಿ. ಸುರೇಶ್‌ಗೌಡ, ಮೇಯರ್ ಪ್ರಭಾವತಿ ಸುಧೀಶ್ವರ್, ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಹುಲ್‌ಕುಮಾರ್, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು, ಅಡಿಷನಲ್ ಎಸ್ಪಿ ವಿ. ಮರಿಯಪ್ಪ, ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ, ಉಪವಿಭಾಗಾಧಿಕಾರಿ ಗೌರವಕುಮಾರ್ ಶೆಟ್ಟಿ, ತಹಶೀಲ್ದಾರ್ ಸಿದ್ದೇಶ್, ಪಾಲಿಕೆ ಆಯುಕ್ತೆ ಅಶ್ವಿಜಾ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.