
ಕಲಬುರಗಿ : ಆ.20:ಬಡವರ, ದೀನ-ದಲಿತರ, ಶೋಷಿತ ವರ್ಗ, ರೈತರ, ನಾಡಿನ ಸಮಗ್ರ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸಿದ ನಾಡಿನ ಮುಖ್ಯಮಂತ್ರಿಯಾಗಿದ್ದ ಡಿ.ದೇವರಾಜ ಅರಸು ಅವರ ಕೊಡುಗೆ ಅವಿಸ್ಮರಣೀಯವಾಗಿದೆ. ಅವರು ಕಾಲವನ್ನು ಮೀರಿ ಗುರ್ತಿಸಬಲ್ಲ ಒಬ್ಬ ದಾರ್ಶನಿಕರಾಗಿದ್ದರು. ಸಮಕಾಲೀನ ರಾಜಕಾರಣದ ಕೇಂದ್ರಸ್ಥಾನದಲ್ಲಿ ಸಾಮಾಜಿಕ ನ್ಯಾಯ ಕಾಣಿಸಿಕೊಳ್ಳಲು ಅರಸು ಕಾರಣರಾಗಿದ್ದು, ಸಾಮಾಜಿಕ ನ್ಯಾಯದ ಹರಿಕಾರರಾಗಿ ಕಂಡುಬರುತ್ತಾರೆ ಎಂದು ಉಪನ್ಯಾಸಕ, ಸಮಾಜ ಸೇವಕ ಎಚ್.ಬಿ.ಪಾಟೀಲ ಹೇಳಿದರು.
ನಗರದ ಆಳಂದ ರಸ್ತೆಯ ಖಾದ್ರಿ ಚೌಕ್‍ನಲ್ಲಿರುವ ‘ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಭಾನುವಾರ ಜರುಗಿದ ‘ಡಿ.ದೇವರಾಜ ಅರಸು ಅವರ 108ನೇ ಜಯಂತಿ’ಯ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ನಮನಗಳನ್ನು ಸಲ್ಲಿಸಿ ಅವರು ಮಾತನಾಡುತ್ತಿದ್ದರು.
ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್ ಮಾತನಾಡಿ, ಸಾಮಾಜಿಕ ನ್ಯಾಯವನ್ನು ಪಕ್ಕಕ್ಕಿಟ್ಟು, ಅರಸು ರಾಜಕಾರಣವನ್ನು ವಿಶ್ಲೇಷಿಸಲು ಸಾಧ್ಯವಿಲ್ಲ. ‘ಊಳುವವನೆ ಭೂ ಒಡೆಯ’ ನೀತಿ, ಹಿಂದುಳಿದ ವರ್ಗದವರಿಗೆ ರಾಜಕೀಯ ಪ್ರಾತಿನಿಧ್ಯದಲ್ಲಿ ಮೀಸಲಾತಿ, ‘ಮಲ ಹೊರುವ ಪದ್ಧತಿ’ ಹಾಗೂ ‘ಜೀತ ಪದ್ಧತಿ ನಿಷೇಧ’, ‘ಋಣಭಾರ ಪರಿಹಾರ ಕಾಯ್ದೆ’, ‘ಭಾಗ್ಯಜ್ಯೋತಿ ಯೋಜನೆ’ ಹೀಗೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಬಸಯ್ಯಸ್ವಾಮಿ ಹೊದಲುರ, ದೇವೇಂದ್ರಪ್ಪ ಗಣಮುಖಿ, ಶಿವಯೋಗಪ್ಪ ಬಿರಾದಾರ, ರೇಣುಕಾಚಾರ್ಯ ಸ್ಥಾವರಮಠ, ಸೈಯದ್ ಹಮೀದ್ ಹುಸೇನ್, ಸೋಹೆಲ್ ಶೇಖ್, ಇರ್ಫಾನ್ ಶೇಖ್ ಸೇರಿದಂತೆ ಮತ್ತಿತರರಿದ್ದರು.