
ಹೊಸಪೇಟೆ: ಎ,18-ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ನೀತಿ ಸಂಹಿತೆ ಈಗಾಗಲೇ ಜಾರಿಯಲ್ಲಿದ್ದು, ದಿನಪತ್ರಿಕೆ ಮತ್ತು ವಿದ್ಯುನ್ಮಾನ ಸುದ್ದಿ ವಾಹಿನಿಗಳಲ್ಲಿ ಪ್ರಕಟಿಸುವ ಪಾವತಿ ಸುದ್ದಿ, ಸಾಮಾಜಿಕ ಜಾಲತಾಣಗಳಲ್ಲಿ ನಿಯೋಜಿಸಿದ ತಂಡಗಳು ಸೂಕ್ತ ನಿಗಾವಹಿಸಿ ನೀತಿ ಸಂಹಿತೆ ಉಲ್ಲಂಘನೆ ಆಗುವಂತಹ ವರದಿ, ಪೋಸ್ಟ್ ಮಾಡಿದ ವಿನ್ಯಾಸಗಳು ಕಂಡುಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ವೆಂಕಟೇಶ್ ಟಿ. ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮಾದರಿ ನೀತಿ ಸಂಹಿತೆ ಸಭೆಯಲ್ಲಿ ನೋಡಲ್ ಅಧಿಕಾರಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.
ಅಭ್ಯರ್ಥಿಗಳ ಅಂತಿಮ ಪಟ್ಟಿ ಬಿಡುಗಡೆಯಾಗುವವರೆಗೂ ಸೂಕ್ತ ನಿಗಾ ವಹಿಸಬೇಕು. ಯಾವುದೇ ರೀತಿಯಾದ ಪಾವತಿಸಿ ಸುದ್ದಿ ಅವಕಾಶ ಇಲ್ಲ. ಸಾಮಾಜಿಕ ಜಾಲಾತಾಣಗಳ ಮೇಲೂ ಸೂಕ್ತ ನಿಗಾ ವಹಿಸಿ ಪಕ್ಷ, ಮುಖಂಡರ ಕುರಿತು ಅಥವಾ ಮತಯಾಚನೆಗೆ ಸಂಬಂಧಿಸಿದ ಯಾವುದೇ ತೆರನಾದ ವಿನ್ಯಾಸವುಳ್ಳ ಪೋಸ್ಟ್ ಮತ್ತು ಅನಿಮೇಷನ್ ಮಾಡಿದ ವಿಡಿಯೋ ಅಪ್‍ಲೋಡ್ ಮಾಡಿದಲ್ಲಿ ಸಂಬಧಿಸಿದ ಅಡ್ಮಿನ್ ಮೇಲೆ ಪ್ರಕರಣ ದಾಖಲಿಸಬೇಕು ಎಂದು ನೋಡಲ್ ಅಧಿಕಾರಿಗಳಿಗೆ ಸೂಚಿಸಿದರು.
ರಾಜಕೀಯ ಚಟುವಟಿಕೆ ಮೇಲೆ ನಿಗಾವಹಿಸಿ:
ನೀತಿ ಸಂಹಿತೆ ಕಟ್ಟುನಿಟ್ಟಿನ ಜಾರಿಗಾಗಿ ಈಗಾಗಲೇ ಜಿಲ್ಲೆಯಾದ್ಯಂತ 23 ಚೆಕ್‍ಪೋಸ್ಟ್‍ಗಳು ಕಾರ್ಯಗತವಾಗಿವೆ. ಚೆಕ್‍ಪೋಸ್ಟ್ ಹೊರತುಪಡಿಸಿ ಗ್ರಾಮೀಣ ಭಾಗಗಳಲ್ಲಿ ಹಾಗೂ ನಗರ ಪ್ರದೇಶದ ವಿವಿಧ ವಾರ್ಡ್‍ಗಳಲ್ಲಿ ನೀತಿ ಸಂಹಿತೆಗೆ ವಿರುದ್ಧವಾಗಿ ನಡೆಯುವ ರಾಜಕೀಯ ಚಟುವಟಿಕೆಗಳ ಮೇಲೆ ನಿಗಾ ವಹಿಸಬೇಕು ಅದೇ ರೀತಿಯಾಗಿ ಮತದಾರರಿಗೆ ಆಮಿಷ ಒಡ್ಡುವಂತಹ ಪ್ರಕರಣಗಳ ಮೇಲೂ ನಿಗಾ ವಹಿಸಬೇಕು ಎಂದರು.
ಸ್ಟಾರ್ ಪ್ರಚಾರಕರ ಭಾವಚಿತ್ರ ತೆರವುಗೊಳಿಸಿ:
ಕೆಲ ಅಭ್ಯರ್ಥಿಗಳು ಸಿನಿಮಾ ನಟರನ್ನು ಸ್ಟಾರ್ ಪ್ರಚಾರಕರನ್ನಾಗಿ ಬಳಸಿಕೊಳ್ಳುತ್ತಿದ್ದು, ಅಂತಹ ಸ್ಟಾರ್ ಪ್ರಚಾರಕರ ಪೋಸ್ಟರ್ ಕಂಡುಬಂದಲ್ಲಿ ಕೂಡಲೇ ತೆರವುಗೊಳಿಸಬೇಕು ಎಂದರು.
ಪರವಾನಿಗೆ ಪರಿಶೀಲಿಸಿ:
ನೀತಿ ಸಂಹಿತೆ ಅಂಗವಾಗಿ ವಾಣಿಜ್ಯ ತೆರಿಗೆ ಹಾಗೂ ಪರವಾನಿಗೆ ಪರಿಶೀಲನೆಯನ್ನು ಸಹ ಕೈಗೊಳ್ಳಬಹುದಾಗಿದೆ. ತಪಾಸಣೆ ಜೊತೆಗೆ ಪರವಾನಿಗೆ ಮತ್ತು ತೆರಿಗೆ ವಿವರಗಳನ್ನು ಒಂದೇ ಸಮಯದಲ್ಲಿ ಪರಿಶೀಲಿಸಬಹುದು ಅದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಚುನಾವಣೆ ಜೊತೆಗೆ ಇತರ ಕರ್ತವ್ಯಕ್ಕೂ ಗಮನಹರಿಸಿ ಗ್ರಾಮೀಣ ಭಾಗಗಳಲ್ಲಿ ಬೇಸಿಗೆ ಇರುವ ಕಾರಣದಿಂದ ಕುಡಿಯುವ ನೀರಿನ ಕುರಿತು ಹೆಚ್ಚು ದೂರುಗಳು ಬರುತ್ತಿವೆ. ಇದನ್ನು ಕಡೆಗಣಿಸದೇ ಗ್ರಾಮ ಪಂಚಾಯಿತಿ ಅಧಿಕಾರಿಗಳು ಕುಡಿಯುವ ನೀರಿನ ಸಮಸ್ಯೆಗಳ ಬಗ್ಗೆ ದೂರು ಬಂದಲ್ಲಿ ಸೂಕ್ತ ಕ್ರಮವಹಿಸಿ ದುರಸ್ತಿ ಕಾರ್ಯ ಕೈಗೊಳ್ಳಬೇಕು. ನೀತಿ ಸಂಹಿತೆ ಕುರಿತು ಹೆಚ್ಚಿನ ನಿಗಾ ವಹಿಸಬೇಕು ನೋಡಲ್ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಕ್ಷೇತ್ರಗಳಲ್ಲಿ ಯಾವುದೇ ತೆರನಾದ ಉಲ್ಲಂಘನೆ ಕಂಡುಬಂದಲ್ಲಿ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಬಿ. ಸದಾಶಿವ ಪ್ರಭು, ಅಪರ ಜಿಲ್ಲಾಧಿಕಾರಿ ಅನುರಾಧ ಜಿ., ಪ್ರಾದೇಶಿಕ ಸಾರಿಗೆ ಆಯುಕ್ತ ವಸಂತ್ ಚವ್ಹಾಣ್, ತಹಶೀಲ್ದಾರ್ ಪ್ರತಿಭಾ ಸೇರಿದಂತೆ ನೋಡಲ್ ಅಧಿಕಾರಿಗಳು ಇದ್ದರು.
One attachment • Scanned by Gmail