ಸಾಮಾಜಿಕ ಜಾಲತಾಣದಲ್ಲಿ ಬಂದ ಜಾಹೀರಾತು ನಂಬಿ 2.68 ಲಕ್ಷ ರೂ.ಕಳೆದುಕೊಂಡ ರೈತ

ಕಲಬುರಗಿ,ಸೆ.3-ಸಾಮಾಜಿಕ ಜಾಲತಾಣದಲ್ಲಿ ಬಂದ ಜಾಹೀರಾತು ನಂಬಿ ಮೋಸಕ್ಕೆ ಒಳಗಾದ ರೈತನೊಬ್ಬ 2,68,408 ರೂ.ಕಳೆದುಕೊಂಡು ಕಂಗಾಲಾಗಿದ್ದಾನೆ.
ಇಲ್ಲಿನ ವೀರೇಂದ್ರ ಪಾಟೀಲ ನಗರದ ರಾಮಚಂದ್ರ ಗಂಧೆನವರ್ (55) ಎಂಬುವವರೆ ಸಾಮಾಜಿಕ ಜಾಲತಾಣದಲ್ಲಿ ಪಿ.ಎಂ.ಕುಸಮ ಯೋಜನೆ ಕುರಿತಂತೆ ಬಂದ ಜಾಹೀರಾತು ನಂಬಿ ಹಣ ಕಳೆದುಕೊಂಡು ಕಂಗಾಲಾದವರು.
ರಾಮಚಂದ್ರ ಗಂಧೆನವರ್ ಅವರು ಸಾಮಾಜಿಕ ಜಾಲತಾಣದಲ್ಲಿ ಪಿ.ಎಂ.ಕುಸಮ ಯೋಜನೆಯ ಜಾಹೀರಾತು ನೋಡಿ, ಅದರಲ್ಲಿ ಸೋಲಾರ್ ಪಂಪ್‍ಸೆಟ್‍ಗೆ 5.50 ಲಕ್ಷ ಸಬ್ಸಿಡಿ 2 ಲಕ್ಷ ಅಂತ ಇರುವುದನ್ನು ಗಮನಿಸಿ ಅದರಲ್ಲಿ ನಮೂದಿಸಿದ ಮೊಬೈಲ್ ನಂಬರ್‍ಗೆ ಕರೆ ಮಾಡಿ ಮಾಹಿತಿ ಪಡೆದಿದ್ದಾರೆ. ಕರೆ ಸ್ವೀಕರಿಸಿದ ಪವನಕುಮಾರ ಎಂಬ ವ್ಯಕ್ತಿ ತಾನು ಸುಮಾರು 15 ವರ್ಷಗಳಿಂದ ಪಿ.ಎಂ.ಕುಸುಮ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದು, ಈ ಯೋಜನೆಯಡಿ ಹೆಚ್ಚು ಸಹಾಯಧನ ಪಡೆಯಲು ತನ್ನ ವ್ಯಾಟ್ಸಪ್ ನಂಬರ್‍ಗೆ ಆಧಾರ್, ಪ್ಯಾನ್, ಬ್ಯಾಂಕ್ ಖಾತೆ ಮಾಹಿತಿ ಮತ್ತು 2 ಭಾವಚಿತ್ರ ಕಳುಹಿಸಲು ತಿಳಿಸಿದ್ದಾನೆ, ಅದರಂತೆ ರಾಮಚಂದ್ರ ಅವರು ಅವನ ವ್ಯಾಟ್ಸಪ್ ನಂಬರ್‍ಗೆ ಇದನೆಲ್ಲ ಕಳುಹಿಸಿದ್ದಾರೆ. ಆಗ ಪವನಕುಮಾರ ರೆಜಿಸ್ಟ್ರೇಷನ್ ಫೀ 8000, ಜಿಎಸ್‍ಟಿ ಚಾರ್ಜ್ 21,798, ಪಾರ್ಟಿ ಕಾಂಟ್ರಿಬುಷನ್ 55,500, ಸಾರಿಗೆ ವೆಚ್ಚ 42,800 ರೂ. ಆಗುತ್ತದೆ ಇಷ್ಟು ಹಣವನ್ನು ಫೋನ್ ಪೇ ಮೂಲಕ ಮಾಡುವಂತೆ ತಿಳಿಸಿ ಹಂತ ಹಂತವಾಗಿ 87,900 ರೂ.ಜಮಾ ಮಾಡಿಸಿಕೊಂಡಿದ್ದಾನೆ. ಇನ್ನೂ ಹಣ ಹಾಕುವಂತೆ ಹವನಕುಮಾರ ತಿಳಿಸಿದಾಗÀ ರಾಮಚಂದ್ರ ಅವರಿಗೆ ಸಂಶಯ ಬಂದು ಗೂಗಲ್‍ನಲ್ಲಿ ಪಿ.ಎಂ.ಕುಸಮ ಯೋಜನೆ ಬಗ್ಗೆ ಪರಿಶೀಲನೆ ಮಾಡಿದ್ದಾರೆ. ಅದರಲ್ಲಿ ಸುಶೀಲಕುಮಾರ ಎಂಬಾತನ ಮೊಬೈಲ್ ನಂಬರ್‍ಗೆ ಕರೆ ಮಾಡಿ ತನಗೆ ಮೋಸವಾಗಿರುವುದನ್ನು ತಿಳಿಸಿದ್ದಾರೆ. ಆಗ ಆತ ನಾನು ಈ ಯೋಜನೆಯ ವೆರಿಫಿಕೇಶನ್ ಆಫಿಸರ್ ಆಗಿದ್ದು, ಪವನಕುಮಾರ ಮತ್ತು ಸೌರಭಕುಮಾರ ಅವರು ಈ ಯೋಜನೆಯ ಏಜೆಂಟ್ ಆಗಿದ್ದಾರೆ. ನಿಮ್ಮ ಹಣವನ್ನು ಕಮಿಷನ್ ರೂಪದಲ್ಲಿ ಪಡೆದಿದ್ದಾರೆ. ಇಲ್ಲಿಯವರೆಗೆ ನೀವು ಹಾಕಿದ ಹಣ ಮತ್ತು ಯೋಜನೆಯ ಸಬ್ಸಿಡಿ ಹಣ ಸೇರಿ ನಿಮಗೆ ಬರಬೇಕಾದ ಎಲ್ಲ ಹಣ ಮರಳಿ ಹಾಕಿಸುತ್ತೇನೆ ಇದಕ್ಕೆಲ್ಲ ಚಾರ್ಜ್ ಆಗುತ್ತದೆ ಎಂದು ನಂಬಿಸಿ ರಾಮಚಂದ್ರ ಅವರಿದಂ ಹಂತ ಹಂತವಾಗಿ 52,410 ರೂ. ಪಡೆದು ಮೋಸ ಮಾಡಿದ್ದಾನೆ.
ಪವನಕುಮಾರ, ಸೌರಭಕುಮಾರ ಮತ್ತು ಸುಶೀಲಕುಮಾರ ಎಂಬುವವರು ಪಿ.ಎಂ.ಕುಸುಮ ಯೋಜನೆಯ ಸಬ್ಸಿಡಿ ಹಾಗೂ ಸೌರಶಕ್ತಿಯ ಸಲಕರಣೆ ನೀಡುವುದಾಗಿ ಹೇಳಿ ನಂಬಿಸಿ ಹಂತ ತಂತವಾಗಿ ನಕಲಿ ಬ್ಯಾಂಕ್ ಖಾತೆ ಬಳಸಿ ಆನ್‍ಲೈನ್ ಮೂಲಕ 2,68,408 ರೂ.ಪಡೆದು ಮೋಸ ಮಾಡಿದ್ದು, ಅವರ ವಿರುದ್ಧ ಕ್ರಮ ಜರುಗಿಸುವಂತೆ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ತನಿಖೆ ನಡೆದಿದೆ.