ಕಲಬುರಗಿ,ಜು.25: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಬರೆದಿರುವ ಪತ್ರದ ಪ್ರತಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅದು ನಕಲಿ ಪತ್ರ ಎಂದು ಆಳಂದ್ ಶಾಸಕ ಬಿ.ಆರ್. ಪಾಟೀಲ್ ಅವರು ಹೇಳಿದರು.
ನಗರದಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸೋಮವಾರದಿಂದ ಹರಿದಾಡುತ್ತಿದ್ದು, ಅದು ನಕಲಿ ಪತ್ರವಾಗಿದೆ ಎಂದರು.
ನನ್ನ ಹೆಸರಿನಲ್ಲಿ ಮುಖ್ಯಮಂತ್ರಿಗಳಿಗೆ ಬರೆದಿರುವ ಪತ್ರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಅಸಹಕಾರ ಹಾಗೂ ಇಲಾಖೆಗೆ ಸಂಬಂಧಿಸಿದ ಅನುಧಾನದ ಬೇಡಿಕೆಯ ಕುರಿತು ಮಾಹಿತಿ ನೀಡಲಾಗಿದ್ದು, ಇದು ನನ್ನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ನಡುವೆ ದ್ವೇಷ ಹುಟ್ಟಿಸುವ ಕುತಂತ್ರವಾಗಿದೆ ಎಂದು ಅವರು ಟೀಕಿಸಿದರು.
ಜನರ ವಿಶ್ವಾಸ, ಭರವಸೆ ಹಾಗೂ ಅವರ ಪ್ರೀತಿಯಿಂದ ನಾವು ಶಾಸಕರಾಗಿ ಆಯ್ಕೆಯಾಗಿದ್ದೇವೆ. ಆದಾಗ್ಯೂ, ನಮ್ಮನ್ನು ಆರಿಸಿ ಕಳುಹಿಸಿದ ಜನರ ವಿಶ್ವಾಸಕ್ಕೆ ತಕ್ಕಂತೆ ಅಭಿವೃದ್ಧಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಏಕೆಂದರೆ ವಿವಿಧ ಇಲಾಖೆಗೆ ಸಂಬಂಧಿಸಿದ 20ಕ್ಕೂ ಹೆಚ್ಚು ಸಚಿವರಿಗೆ ನಮ್ಮ ಕ್ಷೇತ್ರಕ್ಕೆ ಅನುದಾನ ನೀಡುವಂತೆ ಮನವಿ ಮಾಡಿದ್ದರೂ ಸ್ಪಂದಿಸುತ್ತಿಲ್ಲ. ಇದರಿಂದ ಜನರ ಆಶೋತ್ತರ ಈಡೇರಿಸುವುದಕ್ಕೆ ಸಾಧ್ಯವಾಗುತ್ತಿಲ್ಲ. ಅಲ್ಲದೇ ಅನುದಾನ ಬಿಡುಗಡೆ ಮಾಡುವುದಕ್ಕೂ ಸಚಿವರು ಮೂರನೇ ವ್ಯಕ್ತಿ ಮೂಲಕ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದಾರೆ. ಸ್ಥಳೀಯ ಶಾಸಕರು ನಾವು ಆಗಿದ್ದರೂ ಅನುದಾನಕ್ಕಾಗಿ ಮೂರನೇ ವ್ಯಕ್ತಿಯ ಮೊರೆ ಹೋಗಬೇಕಾಗಿರುವುದು ಅತ್ಯಂತ ಬೇಸರ ವಿಷಯ ಎಂಬುದನ್ನು ಪತ್ರದಲ್ಲಿ ಬರೆಯಲಾಗಿದ್ದು, ಅದು ನನ್ನ ಹೆಸರಿನಲ್ಲಿ ಬರೆಯಲಾದ ನಕಲಿ ಪತ್ರವಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ಇದಲ್ಲದೇ ಸಚಿವರು ತಮಗೆ ಬೇಕಾದ ಅಧಿಕಾರಿಗಳಿಗೆ ಮಣೆ ಹಾಕಿ ಸ್ವಜನಪಕ್ಷಪಾತ ಮಾಡುತ್ತಿದ್ದಾರೆ. ನಮ್ಮ ಯಾವುದೇ ವರ್ಗಾವಣೆ ಶಿಫಾರಸ್ಸು ಪತ್ರಗಳಿಗೆ ಮಾನ್ಯತೆ ಕೊಡುತ್ತಿಲ್ಲ. ಇದರಿಂದಾಗಿ ಯಾವ ಅಧಿಕಾರಿಯೂ ನಮ್ಮ ಕೆಲಸಗಳನ್ನು ಮಾಡಿ ಕೊಡುತ್ತಿಲ್ಲ. ನಮ್ಮ ಮಾತಿಗೆ ಬೆಲೆ ನೀಡುತ್ತಿಲ್ಲ. ಆದ್ದರಿಂದ ತಾವು ತಕ್ಷಣವೇ ಮಧ್ಯ ಪ್ರವೇಶಿಸಿ ಸಮಸ್ಯೆ ಪರಿಹರಿಸಬೇಕು ಎಂಬುದು ನಮ್ಮ ಕೋರಿಕೆ. ನಮ್ಮ ವಿಶ್ವಾಸಕ್ಕೆ ಚ್ಯುತಿ ಬಾರದಂತೆ ತಾವು ನಡೆದುಕೊಳ್ಳುತ್ತೀರೆಂದು ಭಾವಿಸಿದ್ದೇವೆ ಎಂದು ಆ ಪತ್ರದಲ್ಲಿ ಬರೆಯಲಾಗಿದೆ. ಇದು ನನ್ನ ಹಳೆಯ ಲೆಟರ್ ಹೆಡ್‍ನಲ್ಲಿ ಬರೆಯಲಾಗಿದ್ದು, ಸಹಿ ನನ್ನದಲ್ಲ ಎಂದು ಅವರು ಹೇಳಿದರು.
ಶಾಸಕರ ಕುಂದು ಕೊರತೆಗಳನ್ನು ಆಲಿಸಲು ಮುಖ್ಯಮಂತ್ರಿಗಳಿಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯನ್ನು ಕರೆಯುವಂತೆ ಬರೆದ ಮನವಿ ಪತ್ರವನ್ನು ತಿರುಚಿ ಕಿಡಿಗೇಡಿಗಳು ನಕಲಿ ಪತ್ರವನ್ನು ಹರಿಬಿಟ್ಟಿದ್ದಾರೆ. ಆ ಪತ್ರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಮೇಲೆ ಕೆಲ ಆರೋಪಗಳನ್ನು ಮಾಡುತ್ತಿರುವಂತೆ ಕುತಂತ್ರದಿಂದ ಸುಳ್ಳುಗಳನ್ನು ಹರಿಬಿಡಲಾಗಿದೆ. ಇದು ಬಿಜೆಪಿಯವರ ಕೈವಾಡ ಇರಬಹುದು, ಇಲ್ಲವೇ ನನಗೆ ಆಗದವರು ಇದನ್ನು ಮಾಡಿರಬಹುದು ಎಂದು ಅವರು ಹೇಳಿದರು.
ಆ ಪತ್ರ ನನ್ನದಲ್ಲ. ನಾನು ಕೊಟ್ಟ ಪತ್ರಕ್ಕೂ ಆ ಪತ್ರದಲ್ಲಿರುವ ವಿಷಯಕ್ಕೂ ಸಂಬಂಧವಿಲ್ಲ. ಅದು ನಕಲಿ ಲೆಟರ್‍ನಲ್ಲಿ ನನ್ನ ಸಹಿಯನ್ನು ಫೋಟೋಶಾಪ್ ಮೂಲಕ ಅಂಟಿಸಲಾಗಿದೆ. ಅಲ್ಲದೇ ಈ ನಕಲಿ ಪತ್ರದಲ್ಲಿ ನನ್ನ ಹಳೆಯ ಮನೆಯ ವಿಳಾಸ ಬರೆಯಲಾಗಿದೆ. ಕಳೆದ ನಾಲ್ಕು ವರ್ಷಗಳ ಹಿಂದೆ ಶಾಂತಿನಗರದಲ್ಲಿನ ಮನೆಯ ವಿಳಾಸವನ್ನು ಕೊಡಲಾಗಿದೆ. ಪತ್ರವನ್ನು ಡಿಜಿಟಲ್‍ನಲ್ಲಿ ಟೈಪ್ ಮಾಡಿ, ಸಹಿಗೆ ಜೆರಾಕ್ಸ್‍ನಿಂದ ಸ್ಕ್ಯಾನ್ ಮಾಡಿ ಬಳಸಲಾಗಿದೆ. ಆ ಪತ್ರ ನನ್ನದಲ್ಲ. ನನ್ನ ಎಲ್ಲ ಅಧಿಕೃತ ಪತ್ರಗಳಲ್ಲಿ ಕ್ರಮ ಸಂಖ್ಯೆಯನ್ನು ಪೂರ್ವ ನಿಯೋಜಿತವಾಗಿ ಪ್ರಿಂಟ್ ಮಾಡಿರಲಾಗುತ್ತದೆ. ಅದು ನಕಲಿ ಪತ್ರ ಎನ್ನಲು ಇಷ್ಟು ಸಾಕು ಎಂದು ಅವರು ಸ್ಪಷ್ಟಪಡಿಸಿದರು.
ಇದನ್ನು ನನ್ನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ನಡುವೆ ಮನಸ್ತಾಪ ಮೂಡಿಸಲು ಕುತಂತ್ರದಿಂದ ಮಾಡಿರುವಂತಿದೆ. ಇದನ್ನು ಮಾಡಿದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ದೂರು ಸಲ್ಲಿಸುವುದಾಗಿ ಅವರು ತಿಳಿಸಿದರು.