ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ಪ್ರಚಾರ

ದೇವದುರ್ಗ,ಮೇ.೦೧- ವಿಧಾನಸಭೆ ಚುನಾವಣೆ ಮತದಾನಕ್ಕೆ ದಿನಗಣನೆ ಆರಂಭವಾಗಿದ್ದು, ಇಂಥ ಸಂದರ್ಭದಲ್ಲಿ ಮೂರೂ ಪಕ್ಷಗಳಿಂದ ಭರ್ಜರಿ ಪ್ರಚಾರ ನಡೆಯುತ್ತಿದೆ. ಪ್ರಚಾರದ ಹೆಸರಿನಲ್ಲಿ ಮೂರೂ ಪಕ್ಷದ ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ ಮಿಂದೇಳುತ್ತಿದ್ದು ವಿರೋಧಿಗಳ ವಿರುದ್ಧ ಎಲ್ಲೆಮೀರಿ ಅಪಪ್ರಚಾರ ಮಾಡುತ್ತಿದ್ದಾರೆ.
ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ಯುಟ್ಯೂಬ್, ಟ್ವಿಟ್ಟರ್, ಇನ್ಟಾಗ್ರಾಮ್, ವಾಟ್ಸ್‌ಅಪ್‌ನಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರು ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ. ತಮ್ಮ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಮಾಡುವ ಜತೆಗೆ ವಿರೋಧಿ ಅಭ್ಯರ್ಥಿಗಳ ಬಗ್ಗೆ ಅಪಪ್ರಚಾರ ಮಾಡುವುದಲ್ಲದೆ ವೈಯಕ್ತಿಕ ತ್ಯೇಜೋವಧೆ ಮಾಡಲಾಗುತ್ತಿದೆ.
ಮೂರೂ ಪಕ್ಷದ ನಾಯಕರ ಹೆಸರಿನಲ್ಲಿ ಫೇಸ್‌ಬುಕ್, ವಾಟ್ಸ್‌ಆಪ್ ಗ್ರೂಪ್ ರಚಿಸಿಕೊಂಡು ಪ್ರಚಾರ ನಡೆಸಲಾಗುತ್ತಿದೆ. ಅಲ್ಲದೆ ಕೆಲ ಬೆಂಬಲಿಗರು ತಮ್ಮದೆ ಖಾತೆಯಿಂದ ಅಭ್ಯರ್ಥಿಪರ ಪ್ರಚಾರ ಮಾಡುತ್ತಿದ್ದಾರೆ. ಇನ್ನು ಕೆಲವರು ವಿರೋಧಿಗಳ ಫೋಟೋ, ವಿಡಿಯೋ ಹಾಗೂ ಆಡಿಯೋ ದುರ್ಬಳಕೆ ಮಾಡಿಕೊಂಡು ಎಲ್ಲೆಮೀರಿ ಅಪಪ್ರಚಾರ ಮಾಡುತ್ತಿದ್ದಾರೆ. ಈ ತಂತ್ರದಲ್ಲಿ ಮೂರೂ ಪಕ್ಷಗಳ ನಾಯಕರು ಜಿದ್ದಿಗೆಬಿದ್ದಂತೆ ಅಪ್‌ಲೋಡ್ ಮಾಡುತ್ತಿದ್ದು, ಜಾಲತಾಣ ಬಳಸುವ ಸಾಮಾನ್ಯ ಜನರಿಗೆ ಕಿರಿಕಿರಿಯಾಗುತ್ತಿದೆ.
ಸಾಮಾನ್ಯ ಜನರು ಅಭ್ಯರ್ಥಿಗಳ ಬಗ್ಗೆ ಫೋನ್‌ನಲ್ಲಿ ಮಾತನಾಡುವ ಆಡಿಯೋ ರೆಕಾರ್ಡ್ ಮಾಡಿಕೊಂಡು ತಮ್ಮ ಪಕ್ಷದ ಪರವಾಗಿ ಹಾಗೂ ವಿರೋಧಿಗಳ ವಿರುದ್ಧ ಹಾಕುವ ಮೂಲಕ ಮಾತನಾಡಿದವರಿಗೆ ಕುತ್ತು ತರುತ್ತಿದ್ದಾರೆ. ಫೋನ್‌ನಲ್ಲಿ ವೈಯಕ್ತಿಕವಾಗಿ ವ್ಯಕ್ತಿ ಬಗ್ಗೆ ಮಾತನಾಡಿದ್ದನ್ನು ಕೆಲವರು ರೇಕಾರ್ಡ್ ಮಾಡಿ ಜಾಲತಾಣದಲ್ಲಿ ಅಪ್‌ಲೋಡ್ ಮಾಡುತ್ತಿದ್ದಾರೆ. ಸಾಮಾನ್ಯ ಜನರು ರಾಜಕೀಯ ವಿಷಯ ಬಗ್ಗೆ ಸುಮ್ಮನೆ ಮಾತನಾಡಿದೆವು ಎನ್ನುವಂತೆ ಜಾಲತಾಣ ಮುಜುಗರ ತರಿಸುತ್ತಿದೆ.
ಸಾಮಾಜಿಕ ಜಾಲತಾಣದಲ್ಲಿ ಫೋಟೋ, ವಿಡಿಯೋ, ಆಡಿಯೋ ಅಪ್‌ಲೋಡ್ ಮಾಡಿದ ವಿಷಯವಾಗಿ ಗಲಾಟೆಗಳು ನಡೆದಿವೆ. ಕೆಲವರು ಜಗಳಮಾಡಿಕೊಂಡಿದ್ದರೆ ಇನ್ನು ಕೆಲವರು ದೂರುಪ್ರತಿದೂರು ನೀಡುತ್ತಿದ್ದಾರೆ. ಕ್ಷೇತ್ರದಲ್ಲಿ ಸಾಮಾಜಿಕ ಜಾಲತಾಣಗಳು ಪ್ರಚಾರಕ್ಕಿಂತ ಅಪಪ್ರಚಾರಕ್ಕೆ ಹೆಚ್ಚು ಬಳಕೆಯಾಗಿದ್ದು, ಕಡಿವಾಣ ಹಾಕುವವರು ಇಲ್ಲದಂತಾಗಿದೆ. ಇದರಿಂದ ಹಲವು ಫೇಸ್‌ಬುಕ್, ಟ್ವಿಟ್ಟರ್ ಸೇರಿ ವಿವಿಧ ತಾಣದಿಂದ ದೂರು ಉಳಿಯುತ್ತಿದ್ದಾರೆ.