ಸಾಮಾಜಿಕ ಜಾಗೃತಿ ಚಳುವಳಿ ಸಂಘಟಿಸಿದ ಕ್ರಾಂತಿಯೋಗಿ ಬಸವಣ್ಣನವರು

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಮೇ.11: ಜಾತಿ ರಹಿತ ಸಮಾಜ ನಿರ್ಮಾಣಕ್ಕೆ 12 ನೇ ಶತಮಾನದಲ್ಲಿಯೇ ಸಾಮಾಜಿಕ ಜಾಗೃತಿಯ ಚಳುವಳಿಯನ್ನು ಸಂಘಟಿಸಿದ ಕ್ರಾಂತಿಯೋಗಿ ನಮ್ಮ ಬಸವಣ್ಣನವರು ಎಂದು ತಾಲೂಕು ವೀರಶೈವ ಮಹಾಸಭಾದ ಅಧ್ಯಕ್ಷ ವಿ.ಎಸ್.ಧನಂಜಯಕುಮಾರ್ ಅಭಿಪ್ರಾಯಪಟ್ಟರು.
ಪಟ್ಟಣದ ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ತಾಲೂಕು ಆಡಳಿತ ಆಯೋಜಿಸಿದ್ದ ಜಗಜ್ಯೋತಿ ಬಸವೇಶ್ವರರ 833 ನೇ ಜಯಂತ್ಯೋತ್ಸವ ಹಾಗೂ ಮಹಾಶರಣೆ ಹೇಮರೆಡ್ಡಿ ಮಲ್ಲಮ್ಮನವರ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ವಚನಗಳ ಮೂಲಕ ವೇದದ ಸಾರವನ್ನು ಜನರಿಗೆ ಉಣಬಡಿಸಿದ ಬಸವಣ್ಣನವರು ವೈದಿಕ ಧರ್ಮದಲ್ಲಿದ್ದ ಸಾಮಾಜಿಕ ಅನಿಷ್ಠಗಳ ವಿರುದ್ದ ಧ್ವನಿಯೆತ್ತಿ ಧರ್ಮ ಸುಧಾರಕರಾದರು. ಸಾಮಾಜಿಕ ಸಮಾನತೆಯ ತತ್ವಗಳನ್ನು ಕೇವಲ ಬರವಣಿಗೆಗೆ ಸೀಮಿತಗೊಳಿಸದೆ ಅದನ್ನು ಜಾರಿಗೆ ತರಲು ಸಾಮಾಜಿಕ ಹೋರಾಟವನ್ನು ಸಂಘಟಿಸಿದರು. ಬಸವಣ್ಣನವರ ಅನುಭವ ಮಂಟಪ ಮೊಟ್ಟ ಮೊದಲ ಪ್ರಜಾಧ್ವನಿಯ ಸಭೆ ಎಂದು ಬಣ್ಣಿಸಿದ ಧನಂಜಯ ಕಾಯಕದ ಮೂಲಕವೇ ಕೈಲಾಸದ ದಾರಿಯನ್ನು ತೋರಿಸುವ ಮೂಲಕ ಬಸವಣ್ಣನವರು ಶ್ರಮದ ಮಹತ್ವವನ್ನು ಸಾರಿದರೆಂದರು. ಇಂದು ಮಹನೀಯರ ಜಯಂತಿಗಳು ನಡೆಯುತ್ತಿವೆ. ಆದರೆ ಅವರು ಸಾರಿದ ತತ್ವ ಸಿದ್ದಾಂತಗಳ ಪಾಲನೆ ನಿಂತಿದೆ. ಮಹನೀಯರ ಆದರ್ಶಗಳನ್ನು ಮೈಗೂಡಿಸಿಕೊಂಡು ಬದುಕದಿದ್ದರೆ ಸಾಮಾಜಿಕ ಬದಲಾವಣೆ ಅಸಾಧ್ಯ ಎಂದರು.
ಆಕ್ರೋಶ: ತಾಲೂಕು ಆಡಳಿತ ಆಯೋಜಿಸುವ ಯಾವುದೇ ಸರ್ಕಾರಿ ಜಯಂತಿಗಳಿಗೆ ತಾಲೂಕಿನ ವಿವಿಧ ಇಲಾಖೆಗಳ ಮುಖ್ಯಸ್ಥರಾಗಲೀ ಅಥವಾ ಅವರ ಇಲಾಖೆಗಳ ಪ್ರತಿನಿಧಿಗಳಾಗಲೀ ಗೈರು ಹಾಜರಾಗುತ್ತಿರುವುದರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ವಿ.ಎಸ್.ಧನಂಜಯ ಮಹನೀಯರ ಜಯಂತಿಗಳು ಸರ್ಕಾರಿ ಕಾರ್ಯಕ್ರಮದ ಒಂದು ಬಾಗ. ರಾಜ್ಯ ಸರ್ಕಾರ ಸಚಿವ ಸಂಪುಟದಲ್ಲಿ ತೀರ್ಮಾನಿಸಿ ಮಹನೀಯರ ಜಯಂತಿಗಳ ಆಚರಣೆಯ ಬಗ್ಗೆ ಆದೇಶಿಸಿದೆ. ಮಹನೀಯರ ಜಯಂತಿಗಳಲ್ಲಿ ಸರ್ಕಾರಿ ಅಧಿಕಾರಿಗಳಾಗಲೀ ಅಥವಾ ಅವರ ಇಲಾಖೆಯ ನಿಯೋಜಿತ ಸಿಬ್ಬಂದಿಗಳಾಗಲೀ ಭಾಗವಹಿಸುತ್ತಿಲ್ಲ ಎಂದರೆ ಏನರ್ಥ? ಅಧಿಕಾರಿಗಳ ಜವಾಬ್ದಾರಿಯಾದರೂ ಏನು? ಸರ್ಕಾರದ ಆದೇಶಗಳಿಗೆ ಅಧಿಕಾರಿಗಳು ಗೌರವ ನೀಡುತ್ತಿಲ್ಲ ಎನ್ನುವುದು ಬಹಿರಂಗವಾಗುತ್ತಿದೆ. ಅಧಿಕಾರಿಗಳ ಗೈರು ಹಾಜರಿಯ ವಿರುದ್ದ ಜಿಲ್ಲಾಧಿಕಾರಿಗಳು ಕ್ರಮ ವಹಿಸಬೇಕು. ಸರ್ಕಾರಿ ಜಯಂತ್ಯೋತ್ಸವ ಕಾರ್ಯಕ್ರಮಗಳು ಕಾಟಾಚಾರಕ್ಕೆ ನಡೆಯುತ್ತಿವೆ. ಇವುಗಳ ಸ್ವರೂಪವನ್ನು ಸರ್ಕಾರ ಬದಲಿಸಬೇಕು. ಮಹನೀಯರ ಜಯಂತಿಯ ಹೆಸರಿನಲ್ಲಿರುವ ಸರ್ಕಾರಿ ರಜೆಗಳನ್ನು ರದ್ದುಪಡಿಸಬೇಕು. ಶಾಲಾ ಕಾಲೇಜುಗಳಲ್ಲಿ ಮಹನೀಯರನ್ನು ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮಗಳನ್ನು ಆಯೋಜಿಸಿ ದಾರ್ಶನಿಕರ ಬದುಕನ್ನು ನಮ್ಮ ಮಕ್ಕಳಿಗೆ ತಿಳಿಸುವ ಕೆಲಸ ಮಾಡಬೇಕೆಂದು ಒತ್ತಾಯಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಪ ತಹಸೀಲ್ದಾರ್ ಬಿ.ಆರ್.ಲೋಕೇಶ್ ಜಗಜ್ಯೋತಿ ಬಸವಣ್ಣ ಹಾಗೂ ಘನಶರಣೆ ಹೇಮರೆಡ್ಡಿ ಮಲ್ಲಮ್ಮನವರನ್ನು ಕುರಿತು ಮಾತನಾಡಿದರು.
ತಾಲೂಕು ವೀರಶೈವ ಮಹಾಸಭಾದ ಮಾಜಿ ಅಧ್ಯಕ್ಷರುಗಳಾದ ತೋಟಪ್ಪ ಶೆಟ್ಟಿ, ಕಾರ್ಯದರ್ಶಿ ಈರಪ್ಪ, ವೀರಶೈವ ಸಮಾಜದ ಮುಖಂಡರುಗಳಾದ ಬ್ಯಾಂಕ್ ಪರಮೇಶ್, ಮಾದೇಶ್, ನಾಗೇಂದ್ರ, ಶಿವಕುಮಾರ್, ಶಿವಪ್ಪ, ತಾಲೂಕು ಕಸಾಪ ಮಾಜಿ ಅಧ್ಯಕ್ಷರುಗಳಾದ ಎಂ.ಕೆ.ಹರಿಚರಣತಿಲಕ್, ಕೆ.ಆರ್.ನೀಲಕಂಠ, ಆಸರೆ ಹೆಚ್.ಬಿ.ಮಂಜುನಾಥ್, ಆರೋಗ್ಯ ಇಲಾಖೆಯ ಶೀಳನೆರೆ ಸತೀಶ್, ಶಿಕ್ಷಣ ಸಂಯೋಜಕ ಜ್ಞಾನೇಶ್, ಬಿ.ಸಿ.ಎಂ.ಅಧಿಕಾರಿ ವೆಂಕಟೇಶ್, ಪಿ.ಡಿ.ಓ ಉಮಾಶಂಕರ್ ಸೇರಿದಂತೆ ವಿವಿಧ ಇಲಾಖೆಯ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿದ್ದರು.
ಜಯಂತ್ಯೋತ್ಸವದ ಅಂಗವಾಗಿ ಮಹಾನ್ ಮಾನವತಾವಾದಿ ಬಸವಣ್ಣನವರು ಮತ್ತು ಘನಶರಣೆ ಹೇಮರೆಡ್ಡಿ ಮಲ್ಲಮ್ಮ ನವರ ಭಾವಚಿತ್ರಗಳಿಗೆ ವಿಶೇಷ ಪೂಜೆ ಸಲ್ಲಿಸಿ ಪುಷ್ಪ ನಮನ ಸಲ್ಲಿಸಲಾಯಿತು.