ಸಾಮಾಜಿಕ ಜವಾಬ್ದಾರಿಯಿಂದ  ನಡೆದಾಗ  ಸಂವಿಧಾನದ ಆಶಯ ಸಾಕಾರ


(ಸಂಜೆವಾಣಿ ವಾರ್ತೆ)
ಬಳ್ಳಾರಿ : ಜ27: ಸಂವಿಧಾನವು ಜನರಿಗೆ  ಹಕ್ಕುಗಳ ಜೊತೆಗೆ ಕರ್ತವ್ಯವನ್ನು ನೀಡಿದೆ.ಜನರು ಸಾಮಾಜಿಕ ಜವಾಬ್ದಾರಿಯಿಂದ ಅರಿತು ನಡೆದಾಗ ಮಾತ್ರ ಸಂವಿಧಾನದ ಆಶಯಗಳು ಸಾಕಾರಗೊಳ್ಳಲು ಸಾಧ್ಯವೆಂದು ನಿವೃತ್ತ ಅಧ್ಯಾಪಕ ಡಾ.ಸಿ.ನಾಗಭೂಷಣ ಅಭಿಪ್ರಾಯಪಟ್ಟಿದ್ದಾರೆ.
ಅವರು ನಿನ್ನೆ ನಗರದ  ಕಿತ್ತೂರು ರಾಣಿ ಚನ್ನಮ್ಮ ಬಾಲಕಿಯರ ಪ್ರಾಥಮಿಕ ಹಾಗು ಪ್ರೌಢಶಾಲೆಯಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ವಿಜ್ಞಾನ  ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತೀಯ ವಿಜ್ಞಾನಿಗಳ  ನೈಪುಣ್ಯತೆ ಜಗತ್ತಿನ ಗಮನ ಸೆಳೆಯುತ್ತಿದೆ.ಸಮಾನತೆ ಸಹಬಾಳ್ವೆಯ ಸೂತ್ರ ಸಂವಿಧಾನದಲ್ಲಿದೆ.ವಿದ್ಯಾರ್ಥಿಗಳು ಸತತ ಪರಿಶ್ರಮದಿಂದ ಸತ್ಪ್ರಜೆಗಳಾಗುವದರ ಜೊತೆಗೆ ದೇಶದ ಏಳ್ಗೆಗೆ ಕೊಡುಗೆ ನೀಡುವಂತಾಗಬೇಕೆಂದರು.
ಇತಿಹಾಸ ಸಂಶೋಧಕ ಡಾ.ಸಿ.ಎಂ.ವೀರಭದ್ರಯ್ಯ ಮಾತನಾಡಿ,ಜಗತ್ತಿನ ಅತ್ಯಂತ ದೊಡ್ಡ ಸಂವಿಧಾನ ನಮ್ಮದಾಗಿದ್ದು, ಅಂಬೇಡ್ಕರ್ ನೇತೃತ್ವದಲ್ಲಿ ಸಂವಿಧಾನ ರಚನೆಗೊಂಡು ದೇಶದ ಸಮಗ್ರತೆಯನ್ನು ಕಾಪಾಡಿಕೊಳ್ಳಲು ಅನುವು ಮಾಡಿಕೊಟ್ಟಿದೆಂದರು.
ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಸಿದ್ದರಾಮ ಕಲ್ಮಠ ಅಧ್ಯಕ್ಷತೆ ವಹಿಸಿದ್ದರು ಸದಸ್ಯರಾದ ಅರವಿ ಶರಣಗೌಡ,ಕೆ.ವಿ.ವೀಣಾ ಮತ್ತು ಕರೂರು ವಿರುಪಾಕ್ಷಗೌಡ ಭಾಗವಹಿಸಿದ್ದರು.
 ಪ್ರಾಥಮಿಕ, ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಎಂ.ಗಿರಿಜಾ,ಪಿ.ಕಟ್ಟೆಮ್ಮಹಾಗೂ ಕೆ.ತಿಪ್ಪೇರುದ್ರ ಹಾಜರಿದ್ದರು.ವಿದ್ಯಾರ್ಥಿಗಳು ಗಣ ರಾಜ್ಯೋತ್ಸವ ಕುರಿತು ಭಾಷಣ ಮತ್ತು ಸಮೂಹ ಗೀತಗಾಯನ ನೆರವೇರಿಸಿದರು.