ಸಾಮಾಜಿಕ ಕ್ರಾಂತಿಯ ಹರಿಕಾರರು ಹಡಪದ ಅಪ್ಪಣ; ಕದಳಿ ವೇದಿಕೆಯಿಂದ ಸ್ಮರಣೆ

ದಾವಣಗೆರೆ.ಜು.೨೩; ಬಸವಣ್ಣನವರು ಹಾಗೂ ಅಪ್ಪಣ್ಣ ನವರ ಗೆಳೆತನ ಪುಷ್ಪ ಹಾಗೂ ಪರಿಮಳ ಬೆರೆತಂತೆ ಇತ್ತು. ಎರಡು ದೇಹ, ಒಂದು ಆತ್ಮ ಎನ್ನುವ ಹಾಗಿದ್ದರು ಎಂದು ಲೇಖಕಿ ಗಿರಿಜಾ ಸಿದ್ಧಲಿಂಗಪ್ಪ ಹೇಳಿದರು.ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಹಾಗೂ ಕದಳಿ ಮಹಿಳಾ ವೇದಿಕೆ ನಗರ ಘಟಕ ವತಿಯಿಂದ ರಾಘವೇಂದ್ರ ಹೈಟೆಕ್ ಪಿಯು ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ೧೩೭ ನೇ ಕದಳಿ ಕಮ್ಮಟ ಹಾಗೂ ಶರಣ ಹಡಪದ ಅಪ್ಪಣ್ಣ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ದತ್ತಿ ಉಪನ್ಯಾಸ ನೀಡಿದರು.ಅಪ್ಪಣ್ಣನವರು ೧೨ನೇ ಶತಮಾನದಲ್ಲಿದ್ದು ಹಿರಿಯ ಶಿವಶರಣರಾಗಿದ್ದು, ಸಾಮಾಜಿಕ ಕ್ರಾಂತಿಯ ಹರಿಕಾರರಲ್ಲಿ ಒಬ್ಬರಾಗಿದ್ದಾರೆ. ಶರಣರಂತೆ ವರ್ಗರಹಿತ ಸಮಾಜ ನಿರ್ಮಾಣಕ್ಕೆ ಮುಂದಾದರು ಅಪ್ಪಣ್ಣನವರು.ಬಸವಣ್ಣನವರು ಮಂತ್ರಿಯಾಗಿದ್ದಾಗ ಅಪ್ಪಣ್ಣ ನವರನ್ನು ಆಪ್ತ ಕಾರ್ಯದರ್ಶಿಯಾಗಿ ಮಾಡಿಕೊಂಡಿದ್ದರಂತೆ. ಬಸವಣ್ಣನವರು ಅಪ್ಪಣ್ಣನವರಿಂದ ಸಲಹೆ ಸೂಚನೆಗಳನ್ನು ಪಡೆದುಕೊಳ್ಳುತ್ತಿದ್ದರು. ಬಸವಣ್ಣನವರ ಬಲಗೈ ಬಂಟ ಎಂದೇ ಅಪ್ಪಣ್ಣನವರನ್ನು ಕರೆಯಲಾಗುತ್ತಿತ್ತು ಎಂದು ಗಿರಿಜಾ ಹೇಳಿದರು.ಅಪ್ಪಣ್ಣನವರು ನುಡಿದಂತೆ ನಡೆಯುವವರಾಗಿದ್ದರು. ನಿಷ್ಠೆ ಪ್ರಾಮಾಣಿಕತೆಗೆ ಅಪ್ಪಣ್ಣ ಮಾದರಿಯಾಗಿದ್ದರು. ಬಸವಣ್ಣನವರ ಹೆಜ್ಜೆಯಲ್ಲಿ ಹೆಜ್ಜೆ ಹಾಕಿದವರು  ಹಾಗೂ ಪರಸ್ತ್ರೀಯರನ್ನು ಪಾರ್ವತಿ ಎಂದು ಭಾವಿಸಿ ಗೌರವಿಸುತ್ತಿದ್ದರು ಅಪ್ಪಣ್ಣ ಎಂದು ಹೇಳಿದರು.ನಿಜ ಸುಖಿ, ಪರಮಜ್ಞಾನಿ ಅಪ್ಪಣ್ಣನವರ ವಚನಗಳು ನೇರ, ದಿಟ್ಟ ಎಚ್ಚರಿಕೆಯ ವಚನಗಳಾಗಿದ್ದವು. ಅಪ್ಪಣ್ಣನವರು ಒಬ್ಬರೆ ಬೆಳೆಯದೆ ಎಲ್ಲರನ್ನೂ ಜೊತೆಯಲ್ಲಿ ಬೆಳೆಸಿದರು. ಅವರ ಪತ್ನಿ ಲಿಂಗಮ್ಮ ಹಾಗೂ ಅಪ್ಪಣ್ಣನವರು ಬಸವಣ್ಣನವರ ಸೇವೆಯನ್ನು ೨೫ ವರ್ಷಗಳ ಕಾಲ ಮಾಡಿಕೊಂಡಿದ್ದರು ಎಂದು ಹೇಳಿದರು.ಶರಣರಲ್ಲಿ ಮಹಾ ಶರಣಾಗಿ ಬಾಳಿದವರು ಅಪ್ಪಣ್ಣ. ಸರ್ಕಾರ ೨೦೧೮ ರಂದು ಅಪ್ಪಣ್ಣನವರ ಜಯಂತಿ ಆಚರಿಸಲು ಆದೇಶಿಸಿತು. ಅದರಂತೆ ಕದಳಿ ವೇದಿಕೆ ಕೂಡ ಜಯಂತಿ ಆಚರಿಸುತ್ತಿದೆ ಎಂದರು.ಕದಳಿ ಜಿಲ್ಲಾಧ್ಯಕ್ಷೆ ಕುಸುಮಾ ಲೋಕೇಶ್ ಮಾತನಾಡಿ, ನುಡಿದಂತೆ ನಡೆದವರು ಶರಣರು. ಶರಣರ ವಚನಗಳನ್ನು ಪ್ರತಿ ಕನ್ನಡ ಭಾಷಾ ತರಗತಿಯ ವೇಳೆ ಪ್ರಾರಂಭದಲ್ಲಿ ಒಂದು ವಚನ ವಾಚಿಸಿ, ಅದರ ತಾತ್ಪರ್ಯ ಹೇಳುವಂತಾಗಬೇಕು. ಅಂಕಗಳು ವೃತ್ತಿ ಜೀವನ ಕಟ್ಟಿಕೊಟ್ಟರೆ, ವಚನಗಳು ಜೀವನ ಮೌಲ್ಯವನ್ನು ನೀಡಲಿದೆ ಎಂದರು.ಪ್ರಾಧ್ಯಾಪಕ ಬಸವರಾಜ್ ಹನುಮಲಿ ಮಾತನಾಡಿ, ವಚನಗಳು ನಮ್ಮ ಮನಸ್ಸನ್ನು ಪರಿಶುದ್ಧಗೊಳಿಸುತ್ತದೆ. ಮನಸ್ಸು ಶುದ್ಧವಾಗಿದ್ದರೆ ಎಲ್ಲವನ್ನೂ ಕಟ್ಟಿಕೊಡ ಬಹುದು ಎಂದರಲ್ಲದೆ, ವಚನ ವಾಚಿಸಿ, ಅದರ ಅರ್ಥವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.ದತ್ತಿದಾನಿ ಶಕುಂತಲಮ್ಮ ಮಾತನಾಡಿ, ಶರಣರು ವಚನಗಳನ್ನು ಪ್ರಚಾರಕ್ಕಾಗಿ ಬರೆಯಲಿಲ್ಲ. ಜೀವನದ ಅನುಭವಗಳನ್ನು ಬರೆದರು. ಜೊತೆಗೆ ಪ್ರಕೃತಿಯ ಬಗ್ಗೆಯೂ ವಿವರಿಸಿದರು. ನಮ್ಮ ಸಾಹಿತ್ಯ ಪಾಶ್ಚಾತ್ಯ ಸಾಹಿತ್ಯಕ್ಕಿಂತ ಶ್ರೇಷ್ಠವಾಗಿದೆ. ನಮ್ಮಲ್ಲಿರುವ ಸಾಹಿತ್ಯ ಭಂಡಾರ ಇತರೆ ಭಾಷೆಗಳಿಗೆ ತರ್ಜುಮೆ ಆಗದೆ ಕಾರಣ ಪಸರಿಸಲಿಲ್ಲ ಅಷ್ಟೇ. ಯಾವ ಇಲಿಯಟ್, ಷೇಕ್ಸಪಿಯರ್ ಗಳಿಗಿಂತಲೂ ನಮ್ಮ ವಚನಕಾರರು ಕಡಿಮೆ ಇಲ್ಲ ಎಂದು ಅಭಿಪ್ರಾಯಪಟ್ಟರು.ವೇದಿಕೆ ಅಧ್ಯಕ್ಷತೆಯನ್ನು ಕದಳಿ ನಗರ ಘಟಕದ ಅಧ್ಯಕ್ಷೆ ಗಾಯತ್ರಿ ವಸ್ತ್ರದ್ ವಹಿಸಿದ್ದರು. ಅತಿಥಿಗಳಾಗಿ ಡಾ. ಅನಿಲ್ ಕುಮಾರ್ ಶ್ಯಾಗಲೆ ಆಗಮಿಸಿ ಮಾತನಾಡಿದರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಬಿ. ಪರಮೇಶ್ವರಪ್ಪ,ನಗರ ಘಟಕದ ಅಧ್ಯಕ್ಷ ಸಿರಿಗೆರೆ ಪರಮೇಶ್ವರಪ್ಪ,  ಗೌರವಾಧ್ಯಕ್ಷೆ ಸಾವಿತ್ರಮ್ಮ ಸಿದ್ದಪ್ಪ  ಉಪಸ್ಥಿತರಿದ್ದರು.ಕದಳಿ ವೇದಿಕೆಯ ಪೂರ್ಣಿಮಾ ಪ್ರಸನ್ನ ಕುಮಾರ್ ಪ್ರಾರ್ಥಿಸಿ, ಸ್ವಾಗತಿಸಿದರು. ದತ್ತಿ ಪರಿಚಯ ಹಾಗೂ ವಿಜೇತ ವಿದ್ಯಾರ್ಥಿಗಳ ಬಹುಮಾನ ವಿತರಣೆಯನ್ನು ವಿಜಯ ಚಂದ್ರಶೇಖರ್ ನಿರ್ವಹಿಸಿದರು. ಲಕ್ಷ್ಮೀ ಮಲ್ಲಿಕಾರ್ಜುನ್ ನಿರೂಪಿಸಿದರು.

Attachments area

ReplyForward