ಸಾಮಾಜಿಕ ಕ್ರಾಂತಿಗೆ ನಾಂದಿ ಹಾಡಿದವರು ಬಸವಣ್ಣನವರು -ಬಳ್ಳಾರಿ


ಬ್ಯಾಡಗಿ,ಮೇ.15: 12ನೇ ಶತಮಾನದಲ್ಲಿಯೇ ಸಾಮಾಜಿಕ ಕ್ರಾಂತಿಗೆ ನಾಂದಿ ಹಾಡಿದವರು ವಿಶ್ವಗುರು ಬಸವಣ್ಣನವರು. ಅಂದಿನ ಕಾಲಕ್ಕೆ ಪ್ರಜಾಪ್ರಭುತ್ವ, ಕಾಯಕ, ಸ್ತ್ರೀ ಸಮಾನತೆ ಮಹತ್ವ ಕೊಡುವ ಮೂಲಕ ಜಾತೀಯತೆ ಅಳಿಸಲು ಪ್ರಧಾನ ಆದ್ಯತೆಯನ್ನು ನೀಡಿ ಭಕ್ತಿ ಮಾರ್ಗವನ್ನು ಪ್ರತಿಪಾದಿಸಿದ ಅಪರೂಪದ ವಿಶ್ವಗುರುವಾಗಿದ್ದಾರೆ ಎಂದು ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಹೇಳಿದರು.
ಪಟ್ಟಣದ ಬಸವೇಶ್ವರ ನಗರದಲ್ಲಿ ತಾಲೂಕಾ ಆಡಳಿತ ಹಾಗೂ ಪುರಸಭೆಯ ಸಂಯುಕ್ತಾಶ್ರಯದಲ್ಲಿ ನಡೆದ ಬಸವ ಜಯಂತಿಯ ಅಂಗವಾಗಿ ಬಸವೇಶ್ವರರ ಪುತ್ಥಳಿಗೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಬಸವಣ್ಣನವರು ಕೇವಲ ಸಾಮಾಜಿಕ ಕ್ರಾಂತಿಗೆ ಮಾತ್ರವಲ್ಲ, ರಾಜಕೀಯವಾಗಿಯೂ ಪ್ರಜಾಪ್ರಭುತ್ವ ವ್ಯವಸ್ಥೆಗೆ ನಾಂದಿ ಹಾಡಿದವರು. ಜನಸಾಮಾನ್ಯರಿಗೆ ಸರಳವಾಗಿ ಅರ್ಥವಾಗುವ ವಚನ ಸಾಹಿತ್ಯದ ಮೂಲಕ ಜನರಲ್ಲಿನ ಅಂಧ ಶ್ರದ್ಧೆಯನ್ನು ತೊಡೆದು ಹಾಕಲು ಪ್ರಯತ್ನಿಸಿದ್ದರು. ಅನುಭವ ಮಂಟಪದ ಮೂಲಕ ಲಿಂಗ, ಜಾತಿ ಸಮಾನತೆಗೆ ಒತ್ತು ಕೊಟ್ಟವರು. ಸಮಾಜದಲ್ಲಿ ಮೇಲು ಕೀಳೆಂಬ ಭಾವನೆ ಇರಬಾರದು, ಎಲ್ಲರೂ ಸಮಾನರು ಎಂದು ಬೋಧಿಸಿ, ಆಚರಣೆ ಮಾಡಿದ್ದರು ಎಂದು ತಿಳಿಸಿದರು.
ಕೊರೋನಾ ಎಂಬ ಚಿಕ್ಕ ವೈರಾಣು ಇಡೀ ಮನುಷ್ಯ ದೇಹವನ್ನೇ ನುಸುಳಿ ದಹಿಸುತ್ತಿದೆ. ಇದನ್ನು ತಡೆಯಲು ನಮ್ಮ ಜನರು ಮಾಡಬೇಕಾದ ಚಿಕ್ಕ ಪ್ರಯತ್ನ ಎಂದರೆ ಮಾಸ್ಕ್ ಧರಿಸಿಕೊಳ್ಳುವುದು, ಅಂತರ ಕಾಪಾಡಿಕೊಂಡು ಸ್ವಚ್ಚತೆಯಿಂದಿರಬೇಕು. ಇಲ್ಲದಿದ್ದರೆ ಒಂದು ಸಣ್ಣ ಆಲಕ್ಷ್ಯತನಕ್ಕೆ ದೊಡ್ಡ ಪರಿಣಾಮ ಎದುರಿಸುವ ಪರಿಸ್ಥಿತಿ ಈಗಾಗಲೇ ಸಂಭವಿಸುತ್ತಿದೆ ಎಂದರಲ್ಲದೇ ಪಟ್ಟಣದಲ್ಲಿರುವ ಸರ್ಕಾರಿ ಆಸ್ಪತ್ರೆಗೆ ತಾವು ಖುದ್ದಾಗಿ ಭೇಟಿ ನೀಡಿ ಆಕ್ಸಿಜನ್ ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಲು ವ್ಯವಸ್ಥೆ ಮಾಡಲಾಗಿದ್ದು, ಆರೋಗ್ಯ ಇಲಾಖೆಯೊಂದಿಗೆ ಸಾರ್ವಜನಿಕರ ಸಹಕಾರ ಮುಖ್ಯವಾಗಿದೆ, ಅನಾವಶ್ಯಕವಾಗಿ ಮನೆಯಿಂದ ಹೊರಗೆ ಬರಬೇಡಿ, ಗುಂಪು ಸೇರುವುದನ್ನು ತಡೆಗಟ್ಟಬೇಕು. ಕೋವಿಡ್ ಕುರಿತು ಯಾವುದೇ ಸಮಸ್ಯೆಯಿದ್ದರೂ ತಮ್ಮ ಗಮನಕ್ಕೆ ತರಲು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿ.ಪಂ.ಸದಸ್ಯೆ ಸುಮಂಗಲಾ ಪಟ್ಟಣಶೆಟ್ಟಿ, ಪುರಸಭಾಧ್ಯಕ್ಷೆ ಕವಿತಾ ಸೊಪ್ಪಿನಮಠ, ಮುಖ್ಯಾಧಿಕಾರಿ ವಿ.ಎಂ.ಪೂಜಾರ, ಮಾಜಿ ಪುರಸಭೆ ಅಧ್ಯಕ್ಷ ಮುರಿಗೆಪ್ಪ ಶೆಟ್ಟರ, ಸುರೇಶ ಆಸಾದಿ, ವಾಗೀಶ ಹಿರೇಮಠ, ಕೃಷ್ಣಪ್ಪ ಅಂಚಟಗೇರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.