ಸಾಮಾಜಿಕ ಕಾಳಜಿಯ ಸೇವೆಗೆ ಸಂದ ರಾಜ್ಯೊತ್ಸವ ಪ್ರಶಸ್ತಿ

ದಾವಣಗೆರೆ.ನ.೨೫; ಯಾವುದೇ ಫಲಾಪೇಕ್ಷೆ, ನಿರೀಕ್ಷೆ ಇಲ್ಲದೇ ಸಾಮಾಜಿಕ ಕಾಳಜಿಯ ಸೇವೆಗಳನ್ನು ನಾವು ಅಂತರಾಳದಿಂದ ಬದ್ಧತೆಯಿಂದ ಕಾರ್ಯಪ್ರವರ್ತರಾದರೆ ಮಾನ, ಸನ್ಮಾನ, ಗೌರವಗಳು ತಾನಾಗೇ ಬರುತ್ತದೆ. ಪ್ರಶಸ್ತಿಗಳಿಗಾಗಿ ನಿರೀಕ್ಷೆ, ಅಪೇಕ್ಷೆ ಇಟ್ಟುಕೊಂಡಾಗ ಅದು ನಮ್ಮ ಸ್ವಾರ್ಥವಾಗುತ್ತದೆ. ಪ್ರಶಸ್ತಿಗಳ ಬೆಲೆಯೂ ವ್ಯರ್ಥವಾಗುತ್ತದೆ. ಕೀರ್ತಿಶೇಷ ಗಾನ ಗಾರುಡಿಗ ಎಸ್.ಪಿ.ಬಾಲಸುಬ್ರಮಣ್ಯಂ ದಾವಣಗೆರೆಯ ಹಿರಿಯ ಚೇತನ ಕಿರುವಾಡಿ ಗಿರಿಜಮ್ಮ ಸೇರಿದಂತೆ ನೂರಾರು ಸ್ವಯಂ ಪ್ರೇರಿತ ದಾನಿಗಳ ಸಹಕಾರ, ಸಹಯೋಗದಿಂದ  ಕರ್ನಾಟಕ ಹಿಮೋಪಿಲಿಯಾ ಈ ಆರೋಗ್ಯಧಾಮ ಅಭಿವೃದ್ಧಿಗೆ ಭದ್ರವಾದ ಬುನಾದಿಯಾಯಿತು. ಇದರಿಂದಾಗಿ ಈ ರಾಜ್ಯೊತ್ಸವ ಪ್ರಶಸ್ತಿಗೆ ಭಾಜನರಾಗಿದ್ದು ಸಾರ್ಥಕವಾಯಿತು ಎಂದು ಕರ್ನಾಟಕ ಹಿಮೋಪಿಲಿಯಾ ಆಸ್ಪತ್ರೆಯ ಮುಖ್ಯಸ್ಥರಾದ ಡಾ.ಸುರೇಶ್ ಹನಗವಾಡಿ ತಮ್ಮ ಮನದಾಳದ ಮಾತು ವ್ಯಕ್ತಪಡಿಸಿದರು.ದಾವಣಗೆರೆಯ ಕಲಾಕುಂಚ ಎಸ್.ಎಸ್.ಬಡಾವಣೆ ಶಾಖೆಯ ಆಶ್ರಯದಲ್ಲಿ ನಿನ್ನೆ ತಾನೇ 66ನೇ ಕನ್ನಡ ರಾಜ್ಯೊತ್ಸವದ ಅಂಗವಾಗಿ ಹಮ್ಮಿಕೊಳ್ಳಲಾದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾರ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ದಾವಣಗೆರೆ ಜಿಲ್ಲಾಡಳಿತದಿಂದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ. ಶಾಂತಾ ಭಟ್, ಡಾ. ಪ್ರಸಾದ್ ಬಂಗೇರರವರಿಗೆ ಅಭಿನಂದಿಸಿ ಗೌರವಿಸಿ, ಸನ್ಮಾನಿಸಲಾಯಿತು. ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ಮಾತನಾಡಿ, “ಮಾನವನ ಜೀವನದಲ್ಲಿ ಬದುಕಿರುವವರೆಗೆ ಒಳ್ಳೆಯ ಕೆಲಸ ಮಾಡಿದರೆ, ಉಸಿರು ನಿಂತ ಮೇಲೆ ಹೆಸರು ಉಳಿಯುತ್ತದೆ. ಈ ನಿಟ್ಟಿಲ್ಲಿ ನಾವು ಬದುಕಿನಲ್ಲಿ ಸಾಮಾಜಿಕ, ಸಾಂಸ್ಕೃತಿಕ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡು ಕ್ರಿಯಾಶೀಲವಾಗಿದ್ದರೆ ಮನಸ್ಸಿನ ಎಲ್ಲ ಖಿನ್ನತೆಗಳು ದೂರವಾಗುತ್ತದೆ. ಜೀವನೋತ್ಸವ ಹೆಚ್ಚುತ್ತದೆ ಎಂದರು.ದಾವಣಗೆರೆಯ ಎಸ್.ನಿಜಲಿಂಗಪ್ಪ ಬಡಾವಣೆಯ ರಿಂಗ್ ರಸ್ತೆಯಲ್ಲಿರುವ ಕರ್ನಾಟಕ ಹಿಮೊಫಿಲಿಯ ಸೊಸೈಟಿ ಸಭಾಂಗಣದಲ್ಲಿ ನಡೆದ ಈ ಸಮಾರಂಭದಲ್ಲಿ ಕಿರುವಾಡಿ ಗಿರಿಜಮ್ಮ, ಕಲಾಕುಂಚ  ಅಧ್ಯಕ್ಷರಾದ ಕೆ.ಹೆಚ್.ಮಂಜುನಾಥ್, ಕಲಾಕುಂಚ ಮಹಿಳಾ ವಿಭಾಗದ ಸಂಸ್ಥಾಪಕರಾದ ಶ್ರೀಮತಿ ಜ್ಯೋತಿ ಗಣೇಶ್ ಶೆಣೈ, ಕಲಾಕುಂಚ ಮಹಿಳಾ ವಿಭಾಗದ ಅಧ್ಯಕ್ಷರಾದ ಹೇಮಾ ಶಾಂತಪ್ಪ ಪೂಜಾರಿ, ಕಲಾಕುಂಚ ಡಿ.ಸಿ.ಎಂ.ಶಾಖೆಯ ಅಧ್ಯಕ್ಷರಾದ ಶ್ರೀಮತಿ ಶಾರದಮ್ಮ ಶಿವನಪ್ಪ, ಸಿದ್ದವೀರಪ್ಪ ಬಡಾವಣೆ ಶಾಖೆಯ ಅಧ್ಯಕ್ಷರಾದ ಶ್ರೀಮತಿ ಲಲಿತಾ ಕಲ್ಲೇಶ್ ಉಪಸ್ಥಿತರಿದ್ದರು.