ಸಾಮಾಜಿಕ ಕಳಕಳಿಯ ಕಾನೂನು ಜಾರಿಗೆ ತಂದವರು ನಾಲ್ವಡಿ ಕೃಷ್ಣರಾಜ ಒಡೆಯರ್

ದಾವಣಗೆರೆ ಜೂ.6: ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಡಳಿತಾವಧಿಯಲ್ಲಿ ಹರಿದು ಹಂಚು ಹೋಗಿದ್ದ ಕನ್ನಡಿಗರನ್ನು ಒಂದುಗೂಡಿಸಿ ಕನ್ನಡಿಗರಲ್ಲಿ ಆತ್ಮಸ್ಥೈರ್ಯವನ್ನು ತುಂಬುವ ಸಲುವಾಗಿ ಕನ್ನಡ ಸಾಹಿತ್ಯ ಪರಿಷತ್ತನ್ನು 1915 ಮೇ.5 ರಂದು ಪ್ರಾರಂಭಿಸಿದರು.ಈ ಸಂಸ್ಥೆ ಇಂದು ಕನ್ನಡಿಗರೆಲ್ಲರ ಅಭಿಮಾನದ  ಪ್ರಾತಿನಿಧಿಕ ಮತ್ತು ಸ್ವಾಯತ್ತ ಸಂಸ್ಥೆಯಾಗಿ ರೂಪುಗೊಂಡಿದ್ದು ಕನ್ನಡ- ಕನ್ನಡಿಗ -ಕರ್ನಾಟಕದ ಹಿತವನ್ನು ಸಂವರ್ಧಿಸುವ, ಕಾಪಾಡುವ ಹೊಣೆ ಹೊತ್ತಿದೆ.ಶೈಕ್ಷಣಿಕ ಕ್ಷೇತ್ರದಲ್ಲಿ ಮೊಟ್ಟಮೊದಲ ಬಾರಿಗೆ ಮಹಿಳೆಯರಿಗೆ ಶಿಕ್ಷಣ,ವಯಸ್ಕರ ಶಿಕ್ಷಣ,ವಾಣಿಜ್ಯ ಶಾಲೆಗಳನ್ನು ಪ್ರಾರಂಭಿಸಿದವರು ನಾಲ್ವಡಿ ಕೃಷ್ಣರಾಜ ಒಡೆಯರ್. ಇವರು 1916 ರಲ್ಲಿ ಮೈಸೂರು ವಿಶ್ವವಿದ್ಯಾಲಯವನ್ನು ಸ್ಥಾಪಿಸಿದರು.  1918 ರಲ್ಲಿ ಮಿಲ್ಲರ್ ಆಯೋಗ ರಚಿಸಿ ಹಿಂದುಳಿದ ಸಮುದಾಯಗಳಿಗೆ ಮೀಸಲಾತಿ ಕಲ್ಪಿಸಿ  ಮೀಸಲಾತಿ ಜನಕ ಎಂದು ಕರೆಯಲ್ಪಟ್ಟಿದ್ದಾರೆ. ಸಾಮಾಜಿಕ ಸುಧಾರಣೆಗಾಗಿ ದೇವದಾಸಿ ಪದ್ಧತಿ ನಿಷೇಧ, ವಿಧವೆಯರಿಗೆ ಮರು ವಿವಾಹ, ಶಾಲಾ ಪ್ರವೇಶಕ್ಕೆ ಜಾತಿ ಪರಿಗಣನೆ ನಿಷೇಧ ದಂತಹ ಸಾಮಾಜಿಕ ಕಳಕಳಿಯ  ಕಾನೂನುಗಳನ್ನು ಜಾರಿಗೆ ತಂದವರು ನಾಲ್ವಡಿ ಕೃಷ್ಣರಾಜ ಒಡೆಯರ್. ಹಾಗಾಗಿ ಇವರು ಸಾಮಾಜಿಕ ಕಾನೂನುಗಳ ಹರಿಕಾರ, ನಾಡಿನ ಸುವರ್ಣ ಯುಗದ ಪರಿವರ್ತಕ  ಎಂದೇ ಗೌರವಿಸಲ್ಪಟ್ಟಿದ್ದಾರೆ ಎಂದು ಪ್ರೊ. ವೈ ಎಂ ವಿಠ್ಠಲ್ ರಾವ್ ಅವರು ತಿಳಿಸಿದರು.ಅವರು ಇಂದು ನಗರದ ಕುವೆಂಪು ಕನ್ನಡ   ಭವನದಲ್ಲಿ ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಏರ್ಪಡಿಸಲಾದ ರಾಜರ್ಷಿ  ನಾಲ್ವಡಿ ಕೃಷ್ಣರಾಜ ಒಡೆಯರ್ ರವರ 139ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ “ನಾಲ್ವಡಿ ಕೃಷ್ಣರಾಜ ಒಡೆಯರ್ ರವರು ಕನ್ನಡ ನಾಡು ನುಡಿಗೆ ಕೊಟ್ಟ ಕೊಡುಗೆಗಳು” ಎಂಬ ವಿಷಯದ ಕುರಿತಾದ ಉಪನ್ಯಾಸದಲ್ಲಿ ಮೇಲಿನಂತೆ ತಿಳಿಸಿದರು.ಮುಂದುವರೆದು ಮಾತನಾಡುತ್ತಾ ನಾಲ್ವಡಿ ಕೃಷ್ಣರಾಜ ಒಡೆಯರ್ ಅವಧಿಯ ಕಾಲವು “ಸುವರ್ಣ ಯುಗ” ಎಂದು ಕರೆಯಲ್ಪಟ್ಟಿದೆ. ಏಕೆಂದರೆ ಇವರ ಆಡಳಿತ ಅವಧಿಯಲ್ಲಿ ಶೈಕ್ಷಣಿಕ, ಆರ್ಥಿಕ , ಕೈಗಾರಿಕಾ ,ನೀರಾವರಿ ,ಸಾಮಾಜಿಕ ಕ್ಷೇತ್ರ,ಸ್ಥಳೀಯ ಸಂಸ್ಥೆಗಳ ರಚನೆ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಅಭಿವೃದ್ಧಿಪರ ಯೋಜನೆಗಳನ್ನು ಕೈಗೊಂಡು ಕಾರ್ಯಗತಗೊಳಿಸಿದರು.ನಾಲ್ವಡಿ ಕೃಷ್ಣರಾಜ ಒಡೆಯರ್ ರವರು 1905 ರಲ್ಲಿ ಸಹಕಾರಿ ಸೊಸೈಟಿ ಜಾರಿಗೆ ತರುವುದರ ಮೂಲಕ ರೈತರಿಗೆ ವರದಾನವಾದರು.1902 ರಲ್ಲಿ ಏಷ್ಯಾ ಖಂಡದಲ್ಲೇ ಮೊಟ್ಟ ಮೊದಲನೆಯದಾಗಿ  ಶಿವನಸಮುದ್ರದಲ್ಲಿ ಜಲ ವಿದ್ಯುತ್ ಯೋಜನೆ ಪ್ರಾರಂಭಿಸಿದರು. ಮೈಸೂರು ಸ್ಟೇಟ್ ಬ್ಯಾಂಕ್,ಭದ್ರಾವತಿ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ,ಮೈಸೂರು ಸಾಬೂನು ಕಾರ್ಖಾನೆ, ಸಿಮೆಂಟ್ ಕಾರ್ಖಾನೆ,ಸಕ್ಕರೆ ಕಾರ್ಖಾನೆ,ಮಂಗಳೂರು ಅಂಚು ಕಾರ್ಖಾನೆ ಸ್ಥಾಪಿಸಿ  ಕೈಗಾರಿಕಾ ಕ್ಷೇತ್ರದ ಬೆಳವಣಿಗೆಗೆ ಕಾರಣಕರ್ತರಾಗಿದ್ದಾರೆ.1907 ರಲ್ಲಿ ವಾಣಿ ವಿಳಾಸ ಸಾಗರ ಅಣೆಕಟ್ಟು, 1911ರಲ್ಲಿ ಕೃಷ್ಣರಾಜಸಾಗರ ಅಣೆಕಟ್ಟೆ ಕಟ್ಟಿ ನೀರಾವರಿ ಸೌಲಭ್ಯ ಕಲ್ಪಿಸಿ ಕೊಟ್ಟಿದ್ದಾರೆ.1923 ರಲ್ಲಿ ಪ್ರಜಾಪ್ರತಿನಿಧಿ ಸಭೆ ಯನ್ನು ಶಾಸನಬದ್ಧ ಸಂಸ್ಥೆಯಾಗಿ ಮಾರ್ಪಡಿಸಿದರು. ಸ್ಥಳೀಯ ಸಂಸ್ಥೆಗಳ ರಚನೆ ಮಾಡಿ ಆ ಮೂಲಕ ಆಡಳಿತ ವಿಕೇಂದ್ರಿಕರಣದ ರೂವಾರಿಯಾದರು. ಒಟ್ಟಾರೆ 38 ವರ್ಷಗಳ ದಕ್ಷ ಆಡಳಿತ ನಡೆಸಿ ರಾಜರ್ಷಿ ಎಂದೇ ಗೌರವಕ್ಕೆ ಪಾತ್ರರಾಗಿದ್ದಾರೆ.ಇಂದು ಕನ್ನಡ ಸಾಹಿತ್ಯ ಪರಿಷತ್ತು ಇವರ 139ನೇ ಜನ್ಮದಿನಾಚರಣೆಯನ್ನು ಆಚರಿಸುತ್ತಿರುವುದು ಅತ್ಯಂತ ಪ್ರಸ್ತುತ ಎಂದು ತಿಳಿಸಿದರು.ಕಾರ್ಯಕ್ರಮವನ್ನು ಉದ್ಘಾಟಿಸಿದ ನಗರದ ದಾವಣಗೆರೆ ವಿಶ್ವವಿದ್ಯಾನಿಲಯದ ಮಾರ್ಗದರ್ಶಿ ಸಂಶೋಧಕರಾದ   ಡಾ.ಎಂ ಎಂ ಪಟ್ಟಣಶೆಟ್ಟಿ ಅವರು ತಮ್ಮ ಉದ್ಘಾಟನಾ ನುಡಿಯಲ್ಲಿ ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಜನ್ಮ ದಿನಾಚರಣೆಯನ್ನು ಆಚರಿಸುವುದರ ಮೂಲಕ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ನಾಡಿಗೆ ಕೊಟ್ಟ ಕೊಡುಗೆಗಳನ್ನು ಸ್ಮರಿಸುತ್ತಾ  ಅವರಿಗೆ ಗೌರವ ಸಲ್ಲಿಸುವ ಕೆಲಸ ಮಾಡಿದ್ದಾರೆ ಎಂದು ತಿಳಿಸಿದರು. ಅಲ್ಲದೆ ಕೋವಿಡ್ ಸಂದರ್ಭದಲ್ಲೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಿ ವಾಮದೇವಪ್ಪನವರು ಅಂತರ್ಜಾಲದ ಮೂಲಕ ನವೆಂಬರ್ ತಿಂಗಳ ಪೂರ್ತಿ  “ಕನ್ನಡ ನುಡಿ ಹಬ್ಬ” ಕಾರ್ಯಕ್ರಮವನ್ನು ಆಯೋಜಿಸಿ ನಾಡಿನ ಉದ್ದಗಲಕ್ಕೂ ಕನ್ನಡ ಕಂಪನ್ನು ಪಸರಿಸಿದ ಕೀರ್ತಿಗೆ ಭಾಜನರಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಿ. ವಾಮದೇವಪ್ಪ ನವರು ಅಧ್ಯಕ್ಷೀಯ ನುಡಿ ಗಳನ್ನಡುತ್ತಾ ಹಿಂದಿನ ಇತಿಹಾಸವನ್ನು ಅರಿಯದವ  ಹೊಸ ಇತಿಹಾಸ ಸೃಷ್ಟಿಸಲಾರ ಎಂಬ ಮಾತಿನಂತೆ  , ಇಂದು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ನಮ್ಮೊಂದಿಗೆ ಇಲ್ಲದಿದ್ದರೂ ಅವರ ಸಾಧನೆಗಳು ನಮ್ಮ ಕಣ್ಣ ಮುಂದೆ ಇದ್ದು ಅವು ಎಂದಿಗಿಂತಲೂ ಇಂದು ಹೆಚ್ಚು ಪ್ರಸ್ತುತವಾಗಿವೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಮುಂದಿನ ವರ್ಷದ ಇವರ ಜನ್ಮ ದಿನಾಚರಣೆ ಸಮಾರಂಭಕ್ಕೆ  ನಾಲ್ವಡಿ ಕೃಷ್ಣರಾಜ ಒಡೆಯರ ಕುರಿತಾಗಿ ಅವರ ಪರಿಚಯ ಮತ್ತು ಸಾಧನೆಗಳನ್ನು ಒಳಗೊಂಡ ಒಂದು ಕಿರು ಹೊತ್ತಿಗೆಯನ್ನು ರಚಿಸಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮೂಲಕ ಹೊರ ತರುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.  ಇಂದು ಕರ್ನಾಟಕದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು ದಾವಣಗೆರೆಯಲ್ಲಿ ಮೂರನೇ” ವಿಶ್ವ ಕನ್ನಡ  ಸಮ್ಮೇಳನ”ವನ್ನು  ಈ ಹಿಂದೆ ಘೋಷಿಸಿದಂತೆ  ಮಧ್ಯ ಕರ್ನಾಟಕದ ದಾವಣಗೆರೆಯಲ್ಲಿಯೇ  ಆಯೋಜಿಸಬೇಕೆಂದು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರ ಹಾಗೂ ಎಲ್ಲಾ ಜನಪ್ರತಿನಿಧಿಗಳ, ಸಾಹಿತಿಗಳ ಜನಪರ ಕನ್ನಡ ಸಂಘಟನೆಗಳ ಮೂಲಕ  ಮುಖ್ಯಮಂತ್ರಿಗಳಿಗೆ ಮತ್ತು ಸರ್ಕಾರಕ್ಕೆ   ಒತ್ತಡ ತರಲಾಗುವುದೆಂದು ತಿಳಿಸಿದರು.