ಸಾಮಾಜಿಕ ಕಲಾನ್ಯಾಯದಿಂದ ದಸರಾ ಉದ್ಘಾಟನೆ ಅವಕಾಶ: ಡಾ.ಹಂಸಲೇಖ

ಸಂಜೆವಾಣಿ ನ್ಯೂಸ್
ಮೈಸೂರು: ಸೆ.13:- ಈ ಬಾರಿಯ ಮೈಸೂರು ದಸರಾ ಮಹೋತ್ಸವ ಉದ್ಘಾಟಿಸುವ ಅವಕಾಶ ದೊರೆತಿರುವುದು ಸಾಮಾಜಿಕ ಕಲಾ ನ್ಯಾಯ ಎಂದು ಖ್ಯಾತ ಸಂಗೀತ ನಿರ್ದೇಶಕ ಡಾ.ಹಂಸಲೇಖ ಅಭಿಪ್ರಾಯಪಟ್ಟರು.
ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಮಂಗಳವಾರ ರಾಜಶೇಖರ ಕೋಟಿ ಸಭಾಂಗಣದಲ್ಲಿ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ದಸರಾ ಉದ್ಘಾಟನೆಗೆ ಆಯ್ಕೆಗೊಂಡ ಬಳಿಕ ಒಬ್ಬರು ಕಾವ್ಯ ನ್ಯಾಯ ಎಂದರು. ಮತ್ತೊಬ್ಬರು ಸಾಮಾಜಿಕ ನ್ಯಾಯ ಎಂದರು. ನಾನು ಜಿಜ್ಞಾಸೆಯಲ್ಲಿದ್ದೇನೆ ಎಂದರು.
ನಾನು ಸಿನಿಮಾದಿಂದ ಬಂದವನು. ಮಹಾಭಾರತ, ಕುರಾನ್, ಸಿಖ್, ಬೌದ್ಧ ಧರ್ಮ ಎಲ್ಲವೂ ಒಂದೇ. ಸಿನಿಮಾಗೆ ಬೇಕಾದ ಕೆಲಸವನ್ನು ಮಾಡುತ್ತಿರುತ್ತೇವೆ. ನಾನು ಸಿನಿಮಾ ರೈಟರ್. ಕವಿ ಪಟ್ಟಬೇಡ. ಸಿನಿಮಾ ರೈಟರ್ ಆಗಿ ಬದುಕುವುದೇ ಇಷ್ಟ. ಹಾಗಾಗಿ ದಸರಾ ಉದ್ಘಾಟನೆ ಸಾಮಾಜಿಕ ಕಲಾ ನ್ಯಾಯವಾಗಿದೆ ಎಂದು ನುಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ದಸರಾ ಉದ್ಘಾಟಿಸುವಂತೆ ಆಹ್ವಾನಿಸಿದಾಗ 90 ವರ್ಷ ಮೇಲ್ಪಟ್ಟ ಜಾನಪದ ಕ್ಷೇತ್ರಕ್ಕೆ ಕೆಲಸ ಮಾಡಿದ ಗೊ.ರು.ಚೆನ್ನಬಸಪ್ಪ, ನನ್ನ ಇಷ್ಟದ ಸಂಗೀತಗಾರ ಪಂಡಿತ್ ರಾಜೀವ್ ತಾರಾನಾಥ್, ಸಾಹಿತಿ ದೇವನೂರ ಮಹಾದೇವ ಅವರನ್ನು ಆಹ್ವಾನಿಸುವಂತೆ ಹೇಳಿದೆ. ಈ ಬಾರಿಯ ಹಬ್ಬ ಉದ್ಘಾಟಿಸುವಂತೆ ಸಿಎಂ ಹೇಳಿದರು. ಇದು ದಸರಾ ಹೈಪವರ್ ಕಮಿಟಿಯ ಏಕಪಕ್ಷೀಯ ನಿರ್ಧಾರ ಎಂದರು.
ಆತವಿಶ್ವಾಸದ ಜ್ಯೋತಿ ಹಚ್ಚುವೆ:
ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕೃಷಿಕ, ಶ್ರಮಿಕ ಮತ್ತು ಕಾರ್ಮಿಕ ಅರಮನೆಗೆ ಬರಬೇಕು. ಮಾತಾಡಬೇಕು. ಸಲಹೆ ಸೂಚನೆ ನೀಡುವಂತಾಗಬೇಕು ಎಂದು ಸಂವಿಧಾನ ಬರುವುದಕ್ಕಿಂತ ಮುಂಚೆ ಆಲೋಚಿಸಿ ಪ್ರಜಾಪ್ರತಿನಿಧಿ ಕಾಯಿದೆ ತಂದರು. ನಾನು ವರ್ಕಿಂಗ್ ಕ್ಲಾಸ್‍ನಿಂದ ಬಂದವನು. ಕಲಿತು, ಅರ್ಹತೆ ಗಳಿಸಿದೆ. ಈ ದಸರಾಗೆ ದೀಪ ಹಚ್ಚುವ ಕೈ ನನ್ನದು. ಅದರ ಹಿಂದಿನ ಚೈತನ್ಯವನ್ನು ನಾಡಿನ ಎಲ್ಲ ಹಿರಿಯರು ಕೊಟ್ಟಿದ್ದಾರೆ. ದಸರಾ ಉದ್ಘಾಟಿಸುವ ಮೂಲಕ ನಾಡಿನ ಸಂಕೋಚದ ಪ್ರತಿಭೆಗಳಲ್ಲಿ ಆತವಿಶ್ವಾಸದ ಜ್ಯೋತಿ ಬೆಳಗಲಿದ್ದೇನೆ ಎಂದು ಹೇಳಿದರು.
ಸಾರ್ಟ್ ವಿಲೇಜ್:
ಸಾರ್ಟ್ ಸಿಟಿ ದೇಶದ ಆಶಯ. ನನ್ನ ಆಶಯ ಸಾರ್ಟ್ ವಿಲೇಜ್ ಆಗಬೇಕು. ರೈತ ತಾನು ಬೆಳೆದ ಬೆಳೆಗೆ ಮಧ್ಯವರ್ತಿಗಳು ಇಲ್ಲದೇ ಮಾರಾಟ ಮಾಡಬೇಕು. ಅಮೆರಿಕದಲ್ಲಿ ರೈತರು ಬೆಳೆದ ಬೆಳೆಗಳಿಗೆ ಬೆಲೆ ಇದೆ. ಬದುಕಿನಲ್ಲಿ ಕಲೆ ತುಂಬಿದೆ. ಇದು ನಮಲ್ಲಿಯೂ ಬರಬೇಕೆಂಬ ಆಶಯ ಎಂದು ನುಡಿದರು.
ನಾಡಿನಲ್ಲಿ ಯಾವ ಹಬ್ಬ ನಡೆದರೂ ಮೂಲದಲ್ಲಿ ರೈತ ಇರುತ್ತಾನೆ. ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂಬುದು ಯಾವತ್ತಿನ ಆಶಯ. ನಾಡಿನ ಕೃಷಿ ತಜ್ಞರು ಸರಿಯಾದ ಯೋಚನೆ ಮಾಡಿ ನಿರ್ಣಯ ಮಾಡಬೇಕು. ರೈತರು ಸಂಕಷ್ಟದಲ್ಲಿದ್ದಾಗ ದುಂದುಗಾರಿಕೆ ಮಾಡೋದು ತಪ್ಪು ಎಂದು ಬರ ನಡುವಿನ ಅದ್ಧೂರಿ ದಸರೆ ಕುರಿತ ಪ್ರಶ್ನೆಗೆ ಪ್ರತಿಕ್ರಯಿಸಿದರು.
ಕನ್ನಡ ಒಂದಂಶದ ಕಾರ್ಯಕ್ರಮ:
ದೇಶ ಮಟ್ಟದಲ್ಲಿ ಉತ್ತರ-ದಕ್ಷಿಣವೆಂದು ವಿಭಾಗೀಸುವ ಪ್ರಯತ್ನ ನಡೆಯುತ್ತಿದೆ ಎಂದು ಕೇಳಿದ್ದೇನೆ. ಈಗ ಕನ್ನಡ ಒಂದಂಶದ ಕಾರ್ಯಕ್ರಮವಾಗಬೇಕಿದೆ. ಕನ್ನಡದ ಕಾಲು ಹಿಡಿ ಕಾಪಾಡಬೇಕಿದೆ. ಇಲ್ಲದಿದ್ದರೆ ಕನ್ನಡಿಗರು ಅನಾಥರಾಗಬೇಕಾಗುತ್ತದೆ ಎಂದು ಹಂಸಲೇಖ ನುಡಿದರು.
ಹಿಂದಿ ಹೇರಿಕೆಯ ಪಿಡುಗು ಇವತ್ತಿನದಲ್ಲ. ನೆಹರೂ ಕಾಲದ ಆಲೋಚನೆ. ಇಡೀ ರಾಷ್ಟ್ರದಲ್ಲಿ ಹಿಂದಿ ಭಾಷೆ ಬರಬೇಕೆಂದು ಬಯಸಿದ್ದರು. ದೆಹಲಿಗೆ ಕನ್ನಡಬೇಕಾಗಿಲ್ಲ. ನಮಗೆ ಹಿಂದಿ ಬೇಕಾಗಿಲ್ಲ. ಆದರೆ, ದೆಹಲಿ ನಮಗೇ ಬೇಕು. ಈಗ ಕನ್ನಡಿಗರು ಕನ್ನಡ ಜನಪದ ಲೀಲೆ ಹಿಡಿದು ತಾಯಿ ನಿನಗೆ ದಸರಾ ಹೂವಿನ ಮಾಲೆ ಹಾಕಬೇಕಿದೆ ಎಂದು ತಿಳಿಸಿದರು.
ಸ್ವರ ನೇಯ್ಗೆಗಾರ:
ನಾನು ನೇಕಾರ ಸಮಾಜದವನು ಸಂಗೀತಗಾರನಾಗಿ ಸ್ವರ ನೇಯ್ಗೆ ಕೆಲಸ ಮಾಡುತ್ತಿದ್ದೇನೆ. ದಸರಾ ಹಬ್ಬದಲ್ಲಿ ಎಲ್ಲರನ್ನೂ ಕೂಡಿಸುವಂತಹ ಕೆಲಸ ಮಾಡೋಣ ಎಂದು ಸನಾತನ ಮತ್ತು ಮಹಿಷಾ ದಸರಾ ಆಚರಣೆ ಕುರಿತಂತೆ ಹಲವು ಪ್ರಶ್ನೆಗಳಿಗೆ ಉತ್ತರಿಸಲು ನಯವಾಗಿ ನಿರಾಕರಿಸಿದರು.
ಆನ್‍ಲೈನ್ ಕಲಿಕೆ:
ಮೈಸೂರಿನಲ್ಲಿರುವ ಗಂಗೂಬಾಯಿ ಹಾನಗಲ್ ಸಂಗೀತ ವಿವಿ ಗಟ್ಟಿಗೊಳ್ಳಬೇಕು. ಇಲ್ಲಿ ಡಿಗ್ರಿ ಪಡೆದವರಿಗೆ ಶಾಲೆಗಳಲ್ಲಿ ಉದ್ಯೋಗ ಕೊಡುವ ಭರವಸೆಯನ್ನು ಸರ್ಕಾರ ಕೊಡಬೇಕಿದೆ. ಅಲ್ಲದೇ ಆನ್‍ಲೈನ್ ಮೂಲಕ ಕಲೆಗಳನ್ನು ಕಲಿಸುವ ಸಲಹೆ ನೀಡಿದ್ದೇನೆ. ಇದರಿಂದ ವಿವಿಯ ವ್ಯಾಪ್ತಿಯ ಹೆಚ್ಚಲಿದೆ. ಪ್ರಪಂಚದ್ಯಂತ ವಿದ್ಯಾರ್ಥಿಗಳು ಬರಲಿದ್ದಾರೆ ಎಂದು ಹೇಳಿದರು.
ಫಿಲ್ಮ್ ಸಿಟಿ ಮೈಸೂರಿನ ಹಕ್ಕು:
ಫಿಲಿ ಸಿಟಿ ನಿರ್ಮಾಣಕ್ಕೆ ಮೈಸೂರು ಸಂಪೂರ್ಣ ಹಕ್ಕು ಹೊಂದಿದೆ. ಬೆಂಗಳೂರಲ್ಲಿ ಜಾಗ ಇಲ್ಲ. ಸರಿಯಾದ ಸಮಯಕ್ಕೆ ಶೂಟಿಂಗ್‍ಗೆ ಹೋಗಲಾಗದು. ಮೈಸೂರಲ್ಲಿ ವಿಮಾನ ನಿಲ್ದಾಣ ಇದೆ. ಸಾಂಸ್ಕೃತಿ, ಪ್ರಾಕೃತಿಕ ಸಂಪತ್ತು ಇದೆ. ಈಗ ಗುರುತಿಸಿರುವ ಜಾಗಕ್ಕೆ ಮತ್ತಷ್ಟು ಸೇರಿಸಿ ಅತ್ಯಾಧುನಿಕ ಫಿಲಂ ಸಿಟಿ ಮೈಸೂರಲ್ಲಿ ನಿರ್ಮಿಸಬೇಕು ಎಂದು ನುಡಿದರು.
ಫಿಲಿ ಸಿಟಿ ನಿರ್ಮಿಸುವಾಗ ಸ್ಟುಡಿಯೋ ಮಾಲೀಕರನ್ನು ಸಲಹೆ ಪಡೆಯಬೇಕು. ಮಲ್ಟಿ ನ್ಯಾಷನಲ್ ಕಂಪನಿಗಳಿಗೆ ಕೊಟ್ಟು ಸುಮನಾಗಬಾರದು. ನಿರ್ಮಾಣದ ವೇಳೆ ರಾಜ ವಿನ್ಯಾಸವನ್ನು ಮರೆಯಬಾರದು. ಹಾಗಾದಾಗ ಮಾತ್ರ ಫಿಲಿ ಸಿಟಿ ಮೈಸೂರಿನ ಕಳಸವಾಗಲಿದೆ ಎಂದು ಹಂಸಲೇಖ ಹೇಳಿದರು.
ಜಾನಪದಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡಬೇಕೆಂಬುದು ನನ್ನ 18 ವರ್ಷಗಳ ಕನಸು. ದೇಸಿ ಸಂಗೀತಕ್ಕೆ ಐದನಿ ಸಂಗೀತ ಶಾಸ್ತ್ರಕ್ಕೆ ಮೈಸೂರಿನ ಸಂಗೀತ ವಿವಿ ಮಾನ್ಯತೆ ಕೊಟ್ಟಿದೆ. ಇದು ಜಾನಪದಕ್ಕೆ ಸಿಕ್ಕ ಅರ್ಹತೆ ಮತ್ತು ಮಾನ್ಯತೆಯಾಗಿದೆ. ಜಗತ್ತಿನ ಕಲೆಗಳ ಜತೆ ಮಾತಾಡಲು ಆಯುಧವಾಗಲಿದೆ. ಜಗತ್ತು ಜಾನಪದದ ಬೆನ್ನು ಬಿದ್ದಿದೆ ಎಂದು ತಿಳಿಸಿದರು.
ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ.ರವಿಕುಮಾರ್, ಉಪಾಧ್ಯಕ್ಷ ಬಸವಣ್ಣ, ನಗರ ಕಾರ್ಯದರ್ಶಿ ರಂಗಸ್ವಾಮಿ, ಖಜಾಂಚಿ ನಾಗೇಶ್ ಪಣತ್ತಲೆ, ಧರ್ಮಪುರ ನಾರಾಯಣ ಇದ್ದರು.