ಸಾಮಾಜಿಕ ಆಂದೋಲನ ಸ್ವರೂಪ ಪಡೆದ ದೆಹಲಿ ರೈತರ ಹೋರಾಟ: ಪ್ರೊ. ಬಿಳಿಮಲೆ

ಕಲಬುರಗಿ,ಜೂ.9: ಕೇಂದ್ರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸುವಲ್ಲಿ ದೆಹಲಿಯ ಗಡಿಗಳಲ್ಲಿ ನಡೆಯುತ್ತಿರುವ ಹೋರಾಟವು ಬರೀ ರೈತ ಹೋರಾಟವಾಗಿಲ್ಲ. ಬದಲಾಗಿ ಸಾಮಾಜಿಕ ಆಂದೋಲನದ ಸ್ವರೂಪ ಪಡೆದಿದೆ ಎಂದು ದೆಹಲಿ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ನಿವೃತ್ತ ನಿರ್ದೇಶಕ ಹಾಗೂ ಚಿಂತಕ ಪ್ರೊ. ಪುರುಷೋತ್ತಮ್ ಬಿಳಿಮಲೆ ಅವರು ಹೇಳಿದರು.
ರೈತ- ಕೃಷಿ ಕಾರ್ಮಿಕರ ಸಂಘಟನೆಯು ಮಂಗಳವಾರ ಆಯೋಜಿಸಿದ್ದ ದೇಶದ ಪ್ರಸಕ್ತ ರೈತ ಹೋರಾಟದ ಕುರಿತ ಆನ್‍ಲೈನ್ ಸಂವಾದದಲ್ಲಿ ಮಾತನಾಡಿದ ಅವರು, ಉತ್ತರ ಭಾರತದ ವಿವಿಧ ರಾಜ್ಯಗಳ ಸಹಸ್ರಾರು ರೈತರು ಹಲವು ತಿಂಗಳಿಂದ ಕಾಯ್ದೆಗಳ ರದ್ದತಿಗಾಗಿ ಒತ್ತಾಯಿಸಿ ಧರಣಿ ಕುಳಿತಿದ್ದಾರೆ. ಅನ್ನದಾತರ ಬವಣೆಗಳ ಕುರಿತು ಕಿಂಚಿತ್ತೂ ಚಿಂತೆ ಮಾಡದ ಬಿಜೆಪಿ ನೇತೃತ್ವದ ಕೇಂಧ್ರ ಸರ್ಕಾರ ತನ್ನ ಐಟಿ ಸೆಲ್ ಬಳಸಿ ರೈತ ಹೋರಾಟವನ್ನು ಅವಮಾನಗೊಳಿಸುತ್ತಿದೆ. ಅದರ ಅಂಗ ಸಂಸ್ಥೆಗಳೂ ರೈತರನ್ನು ಅಲ್ಲಿಂದ ತೆರವುಗೊಳಿಸಲು ಹಲವು ಬಗೆಯ ಪ್ರಯತ್ನ ನಡೆಸಿವೆ. ಆದಾಗ್ಯೂ, ಕಾಯ್ದೆ ರದ್ದುಗೊಂಡ ಬಳಿಕವಷ್ಟೇ ಅಲ್ಲಿಂದ ತೆರಳುವುದಾಗಿ ಪಟ್ಟು ಹಿಡಿದಿದ್ದಾರೆ. ಸ್ವಾತಂತ್ರ್ಯ ಹೋರಾಟದ ಬಳಿಕ ಇಷ್ಟೊಂದು ದೀರ್ಘ ಕಾಲೀನ ಸಮರ ಶೀಲ ಹೋರಾಟವನ್ನು ನಾನು ಕಂಡಿಲ್ಲ ಎಂದರು.
ರಾಜ್ಯ ಪಟ್ಟಿಯಲ್ಲಿರುವ ಕೃಷಿಯನ್ನು ಕೇಂದ್ರ ಸರ್ಕಾರ ಬಲವಂತವಾಗಿ ಕಿತ್ತುಕೊಂಡು ಕೃಷಿ ಕಾಯ್ದೆಗಳನ್ನು ಜಾರಿಗೊಳಿಸುವ ದಾಷ್ಟ್ರ್ಯ ಪ್ರದರ್ಶಿಸಿರುವುದು ಆತಂಕಕಾರಿ. ಕೇಂದ್ರದ ಇಂತಹ ಕೆಟ್ಟ ಪರಂಪರೆಯನ್ನು ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ದಿಟ್ಟವಾಗಿ ಪ್ರಶ್ನಿಸುತ್ತಿದ್ದಾರೆ. ಬಿಜೆಪಿ ಸರ್ಕಾರ ಇರುವ ಕರ್ನಾಟಕ, ಉತ್ತರ ಪ್ರದೇಶ್, ಮಧ್ಯಪ್ರದೇಶ್, ಗೋವಾದಂತಹ ರಾಜ್ಯಗಳು ಈ ಕುರಿತು ಧ್ವನಿಯನ್ನೇ ಎತ್ತುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಯಾದಂತಹ ಮಹಾದಾಯಿ ವಿವಾದವನ್ನು ಕೇಂದ್ರ ಸರ್ಕಾರ ತಕ್ಷಣ ಬಗೆಹರಿಸಬಹುದಿತ್ತು. ಕೇಂದ್ರದಲ್ಲಿ, ಕರ್ನಾಟಕ ಹಾಗೂ ಗೋವಾದಲ್ಲಿ ಬಿಜೆಪಿ ಸರ್ಕಾರವೇ ಇದೆ. ಆದಾಗ್ಯೂ, ಏಕೆ ಬಗೆಹರಿಯುತ್ತಿಲ್ಲ. ಈ ಉದಾಸೀನವೇಕೆ? ಎಂದು ಅವರು ಪ್ರಶ್ನಿಸಿದರು.
ಹಿರಿಯ ಪತ್ರಕರ್ತ, ಅಂಕಣಕಾರ ಡಿ. ಉಮಾಪತಿ ಅವರು ಮಾತನಾಡಿ, ಕೃಷಿಯಲ್ಲಿ ಮೊದಲಿನಿಂದಲೂ ಮಹಿಳೆಯ ಪಾತ್ರ ದೊಡ್ಡದು. ಎತ್ತು ಖರೀದಿಸಲು ಶಕ್ತಿ ಇಲ್ಲದ ಉತ್ತರ ಪ್ರದೇಶ್ ಹಾಗೂ ಬಿಹಾರದಂತಹ ಹಿಂದುಳಿದ ರಾಜ್ಯಗಳಲ್ಲಿ ಎತ್ತಿನ ಬದಲು ನೆಲ ಉತ್ತಲು ನೊಗ ಕೈ ಹೆಗಲು ಕೊಡುವವರು ಮಹಿಳೆಯರೇ ಆಗಿದ್ದಾರೆ. ಅನಾದಿ ಕಾಲದ ಬೇಟೆಯ ಸಂದರ್ಭದಲ್ಲಿಯೂ ಪುರುಷ ಬಿಲ್ಲು ಬಾಣವನ್ನು ಹೊತ್ತು ಮುನ್ನಡೆದರೆ, ಆತನ ಪತ್ನಿ, ಮಕ್ಕಲು, ಬಿಡಾರ ಹೂಡಲು ಬೇಕಾದ ಸರಂಜಾಮುಗಳು ಮತ್ತಿತರ ಪರಿಕರಗಳ ಭಾರ ಹೊತ್ತು ನಡೆಯಬೇಕಿತ್ತು. ಈ ಶೋಷಣೆಗೆ ಮುಕ್ತಿ ಈಗಲೂ ಸಿಕಿಲ್ಲ. ಇಂದಿಗೂ ಆಸ್ತಿಯಲ್ಲಿ ಮಹಿಳೆಗೆ ಎಷ್ಟು ಪಾಲು ಸಿಗುತ್ತಿದೆ ಎಂಬುದನ್ನು ಯೋಚಿಸಬೇಕು ಎಂದು ಅವರು ಹೇಳಿದರು.
ದೆಹಲಿಯ ಗಡಿಗಳಲ್ಲಿ ರೈತ ಮಹಿಳೆಯರೇ ಕುಳಿತಿದ್ದಾರೆ. ಅವರು ಮರಳಿ ಹೋಗಲಿ ಎಂಬ ಸುಪ್ರಿಂಕೋರ್ಟ್ ನ್ಯಾಯಮೂರ್ತಿಯೊಬ್ಬರ ಮಾತನ್ನು ಕಟುವಾಗಿ ಟೀಕಿಸಿದ ರೈತ ಮಹಿಳೆಯರು ಅವರಿಗೆ ಬರೆದ ಬಹಿರಂಗ ಪತ್ರದಲ್ಲಿ ಮಹಿಳೆಯರು ಕೃಷಿಯ ಆತ್ಮ ಮತ್ತು ಹೃದಯ ಎಂದು ಹೇಳಿದರು ಎಂದು ಸ್ಮರಿಸಿದ ಅವರು, ಹಲವು ರಾಜ್ಯಗಳಲ್ಲಿ ದಲಿತರಿಗೆ ನ್ಯಾಯವಾಗಿ ಹಂಚಿಕೆಯಾಗಬೇಕಾದ ಭೂಮಿ ಇನ್ನೂ ಪ್ರಬಲ ಜಾತಿಗಳ ರೈತರ ಬಳಿಯೇ ಇದೆ. ಸರ್ಕಾರಿ ಜಮೀನು ಸಹ ದಲಿತ ರೈತರಿಗೆ ಹಂಚಿಕೆಯಾಗಿಲ್ಲ ಎಂದು ಅವರು ವಿಷಾಧಿಸಿದರು.
ರೈತ- ಕೃಷಿ ಕಾರ್ಮಿಕರ ಸಂಘಟನೆಯ ರಾಜ್ಯ ಕಾರ್ಯದರ್ಶಿ ಎಚ್.ವಿ. ದಿವಾಕರ್ ಅವರು ಮಾತನಾಡಿ, ಸಂಘಟನೆಯು ದೇಶದ 21 ರಾಜ್ಯಗಳಲ್ಲಿ, ಕರ್ನಾಟಕದ 15ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಸಕ್ರೀಯವಾಗಿದ್ದು, ರೈತರ ಹಲವು ಸಮಸ್ಯೆಗಳ ವಿರುದ್ಧ ರೈತಾಪಿ ಜನರನ್ನು ಸಂಘಟಿಸುತ್ತಿದೆ. ಮೂರು ಕೃಷಿ ಕಾಯ್ದೆಗಳು ವಾಪಸ್ಸು ಆಗುವವರೆಗೂ ಕಿಸಾನ್ ಸಂಯುಕ್ತ ಮೋರ್ಚಾದ ಭಾಗವಾಗಿರುವ ಆರ್‍ಕೆಎಸ್ ಹಿಂದೆ ಸರಿಯುವುದಿಲ್ಲ ಎಂದರು.
ಇಲ್ಲಿಯವರೆಗೂ ಅಧಿಕಾರದಲ್ಲಿದ್ದ ಎಲ್ಲ ಸರ್ಕಾರಗಳು ರೈತರನ್ನು ಶೋಷಿಸುತ್ತಲೇ ಬಂದಿವೆ. ಅಂದಿನ ಸರ್ಕಾರಗಳು ಭೂಮಿಗೆ ಸ್ವರ್ಗ ತರುತ್ತೇವೆ ಎಂದು ಹೇಳಿ ಜಾಗತೀಕರಣ ನೀತಿಗಳನ್ನು ಜಾರಿಗಿಳಿಸಿದರ ಪರಿಣಾಮವಾಗಿ ಇಂದು ನಮ್ಮ ದೇಶದಲ್ಲಿ 6 ಲಕ್ಷಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶೇಕಡಾ 53ರಷ್ಟು ಮಕ್ಕಳು ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ. ಪ್ರತಿ ದಿನ 7000 ಜನ ಆಹಾರವಿಲ್ಲದೇ ಸಾಯುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಇಂದಿನ ಸರ್ಕಾರವು ಅಚ್ಚೇ ದಿನ್ ಎಂದು ಹೇಳಿ ಬಂಡವಾಳ ಶಾಹಿಗಳ ಪರವಾದ ಹಾಗೂ ರೈತ ಕಾರ್ಮಿಕರಿಗೆ ಮಾರಕವಾದ ಕರಾಳ ಕಾನೂನುಗಳನ್ನು ತರುತ್ತಿದ್ದಾರೆ. ಇದರ ವಿರುದ್ಧ ಜಾಗೃತರಾಗಿರುವ ನಮ್ಮ ರೈತ ಸಮುದಾಯವು ಸರ್ಕಾರಗಳ ಹಿಂದೆ ಇರುವ ಕಾಣದ ಕೈಗಳನ್ನು ಗುರುತಿಸುತ್ತಿದ್ದಾರೆ. ಆದ್ದರಿಂದಲೇ 6 ತಿಂಗಳು ಕಳೆದರೂ ರೈತರ ಹೋರಾಟವನ್ನು ವಿಫಲಗೊಳಿಸಲು ಆಗಿಲ್ಲ ಎಂದು ಅವರು ಹೇಳಿದರು.
ಈ ಹೋರಾಟವು ರೈತರ ಬದುಕು ಮತ್ತು ಭವಿಷ್ಯದ ಹೋರಾಟವಾಗಿದೆ. ಆದ್ದರಿಂದ ಅವರು ಅಂಬಾನಿ, ಅದಾನಿಗಳ ಪಾದಸೇವೆ ಮಾಡುತ್ತಿರುವ ಸಕಾರಗಳು ಎದುರಿಸುತ್ತಲೇ ತನ್ನ ಮೂಖ್ಯ ಶತ್ರುವಾಗಿರುವ ಬಂಡವಾಳಶಾಹಿಗಳ ವಿರುದ್ಧ ಸಮರ ಸಾರಿದ್ದಾರೆ. ಆದ್ದರಿಂದ ಹೋರಾಟವು ವರ್ಗ ಸಂಘರ್ಷದ ಲಕ್ಷಣವನ್ನು ಹೊಂದಿದೆ. ಉಳ್ಳವರ ವಿರುದ್ಧ ಇಲ್ಲದವರು ರಣ ಕಹಳೆ ಮೊಳಗಿಸಿದ್ದಾರೆ. ಆಗರ್ಭ ಶ್ರೀಮಂತರ ವಿರುದ್ಧ ದೇಶದ ಬಡಜನತೆ ಶೋಷಿತರೆಲ್ಲ ಒಂದಾಗುತ್ತಿದ್ದಾರೆ. ಆದ್ದರಿಂದ ಈ ಹೋರಾಟ ಮೊದಲಿನಿಂದಲೂ ಸಕ್ರೀಯವಾಗಿರುವ ಎಐಕೆಕೆಎಂಎಸ್‍ಎಸ್ ದೇಶವ್ಯಾಪಿ ಹಲವಾರು ಹೋರಾಟಗಳನ್ನು ಕಟ್ಟುತ್ತ ಸಕ್ರೀಯವಾಗಿದೆ. ರೈತ ಹೋರಾಟವನ್ನು ಬಲಪಡಿಸುವ ನಿಟ್ಟಿನಲ್ಲಿ ಸಂಘಟನೆಯು ತನ್ನೆಲ್ಲ ಶಕ್ತಿ ಮೀರಿ ಶ್ರಮಿಸುತ್ತಿದೆ. ಅಂತಿಮವಾಗಿ ದೆಹಲಿ ರೈತರ ಹೋರಾಟವು ದೇಶವ್ಯಾಪಿ ಬಲಿಷ್ಠವಾಗಿ ಮುನ್ನುಗ್ಗುತ್ತದೆ. ನಾವು ಗೆದ್ದೇ ಗೆಲ್ಲುತ್ತೇವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ರಾಜ್ಯ ಉಪಾಧ್ಯಕ್ಷ ಎಂ. ಶಶಿಧರ್ ಅವರು ಕಾರ್ಯಕ್ರಮ ನಿರೂಪಿಸಿದರು.