ಸಾಮಾಜಿಕ ಅಂತರ ಕಾಪಾಡಲು ಮನವಿ

ಚಿತ್ರದುರ್ಗ. ಮೇ.3; ವ್ಯಾಪಾರಸ್ತರು ವ್ಯಾಪಾರದ ಭರಾಟೆಯಲ್ಲಿ ಮಾಸ್ಕ್ ಧರಿಸುವುದನ್ನ ಮರೆಯಬಾರದು, ಖರೀದಿ ಮಾಡುವ ಜನರೊಂದಿಗೆ ವ್ಯವಹರಿಸುವಾಗ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಇಟ್ಟುಕೊಂಡು, ಎಚ್ಚರಿಕೆ ವಹಿಸಬೇಕು. ಕೊರೋನಾ ಹೆಮ್ಮಾರಿಯಂತೆ ಹರಡುತ್ತಿರುವ ಕಾರಣ, ಜನರಲ್ಲಿ ಮುಂಜಾಗ್ರತೆ ಕ್ರಮಗಳ ಬಗ್ಗೆ ಅರಿವಿಲ್ಲದೆ, ತಿರಸ್ಕಾರ ಮತ್ತು ಬೇಜವಾಬ್ದಾರಿತನ ಎಲ್ಲವೂ ಕೂಡಿ, ಇಂದು ಕೊರೋನ ವೇಗವಾಗಿ ಹಬ್ಬಲು ಪ್ರಯತ್ನಿಸುತ್ತಿದೆ. ನಮ್ಮ ಸಹಕಾರವಿಲ್ಲದೆ ಕೊರೋನಾ ಹಬ್ಬಲು ಸಾಧ್ಯವಿಲ್ಲ ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾಧ್ಯಕ್ಷರಾದ ಡಾ. ಹೆಚ್. ಕೆ. ಎಸ್. ಸ್ವಾಮಿಯವರು ತಿಳಿಸಿದರು. ಅವರು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ, ಚಿತ್ರದುರ್ಗ ವಿಜ್ಞಾನ ಕೇಂದ್ರ ಮತ್ತು ಜಿಲ್ಲಾ ಸಂಚಾರಿ ಪೊಲೀಸ್ ಸಹಕಾರದೊಂದಿಗೆ ವಿಜ್ಞಾನ ಕಾಲೇಜಿನ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಕರೋನ ಬಗ್ಗೆ ಜನಜಾಗೃತಿ ರ‍್ಯಾಲಿಯಲ್ಲಿ ಮಾತನಾಡುತ್ತಿದ್ದರು. ಗುಂಪು ಗುಂಪಾಗಿ ಸೇರಿ ಆರ್ಥಿಕ ಚಟುವಟಿಕೆಗಳನ್ನು ನಡೆಸುತ್ತಿರುವುದರ ದುಷ್ಪರಿಣಾಮ ಈ ಕರೋನಾ ಕಾಡ್ಗಿಚ್ಚಿನಂತೆ ಹಬ್ಬುತ್ತಿದೆ. ಜನರು ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು, ಅವಶ್ಯಕತೆ ಇದ್ದರೆ ಮಾತ್ರ ಮನೆಯಿಂದ ಹೊರ ಬರುವುದನ್ನು ರೂಢಿಸಿಕೊಳ್ಳಬೇಕು. ಕನಿಷ್ಠ 6 ಅಡಿ ಅಂತರದಲ್ಲಿ ನಿಂತು ವ್ಯವಹರಿಸುವುದನ್ನು ಜನರಿಗೆ ಮನದಟ್ಟು ಮಾಡಿಕೊಳ್ಳಬೇಕು. ವ್ಯಾಪಾರಸ್ಥರು ವ್ಯಾಪಾರದ ನಂತರ ಕೈ ಕಾಲುಗಳನ್ನು ಸ್ವಚ್ಛವಾಗಿ ತೊಳೆದು ಇಟ್ಟುಕೊಳ್ಳುವುದನ್ನು ಕಲಿಯಬೇಕು. ಮೂಗು ಕಣ್ಣುಗಳನ್ನ ಪದೇಪದೇ ಮುಟ್ಟಿಕೊಳ್ಳಬಾರದು. ಮರು ಬಳಸುವಂತಹ ಮಾಸ್ಕ್ಗಳನ್ನು ತೊಳೆದು, ಸ್ವಚ್ಛಗೊಳಿಸಿ, ಪೂರ್ತಿ ಮೂಗು ಮತ್ತು ಬಾಯಿ ಮುಚ್ಚಿಕೊಂಡಿರಬೇಕು. ಗದ್ದದ ಕೆಳಗೆ ಮಾಸ್ಕ್ ಧರಿಸಿ ವ್ಯಾಪಾರ ಮಾಡುತ್ತಿರುವುದರಿಂದ ಮ್ಯಾಸ್ಕ್ ಉಪಯೋಗವೇ ದೊರೆಯದಂತಾಗುತ್ತಿದೆ. ಜನಸಾಮಾನ್ಯರಲ್ಲಿ ವೈರಿ ವೈರಾಣುವಿನ ಹರಡುವಿಕೆ ಬಗ್ಗೆ ಜನಜಾಗೃತಿ ಮೂಡಿಸುವುದರಿಂದ, ಕರೋನ ಹಬ್ಬುವುದನ್ನ ತಡೆಗಟ್ಟಬಹುದು ಎಂದರು.ವೈದ್ಯಕೀಯ ಸೌಲಭ್ಯಗಳ ಕೊರತೆ ಉಂಟಾಗುತ್ತಿರುವ ಈ ಸಂದರ್ಭದಲ್ಲಿ ಜನರು ಹೆಚ್ಚು ರಸ್ತೆಗಿಳಿಯದೆ, ಸ್ವನಿಯಂತ್ರಣ ಹಾಕಿಕೊಂಡು, ಸ್ವಯಂಘೋಷಿತ ಕರ್ಫ್ಯೂ, ಸ್ವಯಂ ಘೋಷಿತ ಬಂದ್‌ಗಳನ್ನು ಏರ್ಪಡಿಸಿಕೊಳ್ಳಬೇಕು. ಆಸ್ಪತ್ರೆಗಳಲ್ಲಿ ಹೇಗೆ ಜನಜೀವನವನ್ನ ಶಿಸ್ತುಗೊಳಿಸಲಾಗುತ್ತದೆಯೋ ಅದೇ ತರ ಸಾರ್ವಜನಿಕರೂ ಸಹ ಮಾರ್ಕೆಟ್‌ಗಳಲ್ಲಿ, ಮದುವೆ ಸಮಾರಂಭಗಳಲ್ಲಿ, ರಸ್ತೆ ಬದಿಯ ವ್ಯಾಪಾರಗಳಲ್ಲಿ, ಹೋಟಲ್‌ಗಳಲ್ಲಿ, ಅದೇ ಶಿಸ್ತು ಕ್ರಮಗಳನ್ನು ಅನುಸರಿಸಿದರೆ ಕರೋನ ನಿಯಂತ್ರಣ ಸುಲಭವಾಗುವುದು ಎಂದರು.ಪಿಪಿಇ ಕಿಟ್‌ಗಳನ್ನು ಧರಿಸಿ, ಕರೋನ ಬಗ್ಗೆ ಗೀತೆಗಳನ್ನು ಹಾಡಿದ ಸಂತ ಜೋಸೆಫ್ ಕಾನ್ವೆಂಟ್‌ನ ಎಚ್. ಎಸ್. ಪ್ರೇರಣಾ, ಎಸ್.ಆರ್.ಎಸ್. ಕಾಲೇಜಿನ ಎಚ್. ಎಸ್. ರಚನಾ ಜನರ ಮನಸ್ಸನ್ನ ಜಾಗೃತಗೊಳಿಸಲು ಸಹಕರಿಸಿದರು. ಕರೋನÀ ಬಗ್ಗೆ, ಮಾಸ್ಕ್ ಬಗ್ಗೆ, ಸಾಮಾಜಿಕ ಅಂತರದ ಬಗ್ಗೆ ಪೋಸ್ಟರ್‌ಗಳನ್ನು ಪ್ರದರ್ಶಿಸಲಾಯಿತು.ಸಮಾಜ ಸೇವಕಿ ಶ್ರೀಮತಿ ರೀನಾ ವೀರಭದ್ರಸ್ವಾಮಿ, ಕೆಜೆವಿಎಸ್‌ನ ಜಿಲ್ಲಾ ಉಪಾಧ್ಯಕ್ಷರಾದ ಜಯದೇವಮೂರ್ತಿ ಹಾಜರಿದ್ದರು.