ಸಾಮರ್ಥ್ಯ ಮೀರಿ ರೋಗಿಗಳ ದಾಖಲು ಬೇಡ : ಗೌರವ್ ಗುಪ್ತ


ಬೆಂಗಳೂರು, ಮೇ.೪- ಕೋವಿಡ್ ಹಿನ್ನೆಲೆ ಆಕ್ಸಿಜನ್ ಸಾಮಾರ್ಥ್ಯದ ಅನುಗುಣವಾಗಿ ಮಾತ್ರ ಖಾಸಗಿ ಆಸ್ಪತ್ರೆಗಳು ರೋಗಿಗಳನ್ನು ದಾಖಲಿಸಿಕೊಳ್ಳಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಸೂಚಿಸಿದ್ದಾರೆ.
ನಗರದಲ್ಲಿಂದು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲ ಖಾಸಗಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಸಾಮಾರ್ಥ್ಯ ಕ್ಕಿಂತ ಅಧಿಕ ರೋಗಿಗಳನ್ನು ಇಟ್ಟುಕೊಂಡಿರುವ ಲಭಿಸಿದೆ.ಆದರೆ, ಇದು ಸರಿಯಲ್ಲ. ಸಾಮಾರ್ಥ್ಯ ಇಲ್ಲದಿದ್ದರೂ, ರೋಗಿಗಳನ್ನು ಇಟ್ಟುಕೊಂಡು ಚೆಲ್ಲಾಟ ಆಡಬೇಡಿ ಎಂದು ತಾಕೀತು ಮಾಡಿದ್ದಾರೆ.
ಈ ಹಿಂದೆ ಒಂದು ಆಕ್ಸಿಜನ್ ಸಿಲಿಂಡರ್ ವಾರದವರೆಗೂ ಬಳಕೆ ಬರುತಿತ್ತು.ಆದರೆ, ಇದೀಗ ದಿನಕ್ಕೆ ಮೂರು ಬಾರಿ ತುಂಬಿಸಲಾಗುತ್ತಿದೆ ಎಂದೂ ಕೆಲ ಆಸ್ಪತ್ರೆಗಳು ಹೇಳಿವೆ.ಹಾಗಾಗಿ, ಆಕ್ಸಿಜನ್ ಸಿಲಿಂಡರ್ ಸರಬರಾಜು ಮಾಡುವವರ ಮಾಹಿತಿಯೂ ಸಂಗ್ರಹಿಸಲಾಗುತ್ತಿದೆ ಎಂದರು.
ಬೆಂಗಳೂರು ಖಾಸಗಿ ಆಸ್ಪತ್ರೆಗಳಲ್ಲಿ ಖಾಸಗಿಯಾಗಿ ದಾಖಲಾಗುವ ಕೋವಿಡ್ ಸೋಂಕಿತರ ಸಂಖ್ಯೆ ಮತ್ತು ಹಾಸಿಗೆ ಲಭ್ಯತೆ ಕುರಿತ ಮಾಹಿತಿಯನ್ನು ಪೋರ್ಟಲ್‌ನಲ್ಲಿ ಅಪ್ಲೋಡ್ ಮಾಡಿ ಸಾರ್ವಜನಿಕರಿಗೆ ತಿಳಿಸಲಾಗಿದೆ.
ಇದರಲ್ಲಿ ಕೆಪಿಎಂಇ ಅಡಿ ನೊಂದಣಿಯಾಗಿರುವ ಎಲ್ಲಾ ಖಾಸಗಿ ಆಸ್ಪತ್ರೆಗಳು ಸದರಿ ಪೋರ್ಟಲ್ ನಲ್ಲಿ ಸಾಮಾನ್ಯ, ಎಚ್‌ಡಿಯು, ಐಸಿಯು, ಐಸಿಯು-ವೆಂಟಿಲೇಟರ್ ಹಾಸಿಗೆಗಳ ರಿಯಲ್ ಟೈಂ ಮಾಹಿತಿಯನ್ನು ಪೋರ್ಟಲ್‌ನಲ್ಲಿ ಅಪ್ಲೋಡ್ ಮಾಡಬೇಕು.
ಜೊತೆಗೆ ಸದರಿ ಹಾಸಿಗೆಗಳ ಮಾಹಿತಿಯನ್ನು ಆಸ್ಪತ್ರೆಯ ಹೆಲ್ಪ್‌ಡೆಸ್ಕ್‌ಗಳ ಬಳಿ ಹಾಸಿಗೆ ಲಭ್ಯತೆಯ ಫಲಕಗಳನ್ನು ಕಡ್ಡಾಯವಾಗಿ ಅಳವಡಿಸಿ ಸಾರ್ವಜನಿಕರಿಗೆ ತಿಳಿಯುವಂತೆ ಪ್ರದರ್ಶಿಸಬೇಕು ಎಂದು ಸೂಚಿಸಲಾಗಿದೆ ಎಂದರು.
ಪಾಲಿಕೆ ವ್ಯಾಪ್ತಿಯಲ್ಲಿ ಸರ್ಕಾರ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಸುಮಾರು ಹನ್ನೊಂದು ಸಾವಿರ ಹಾಸಿಗೆಗಳು ಸೆಂಟ್ರಲ್ ಬೆಡ್ ಮ್ಯಾನೇಜ್ಮೆಂಟ್ ಸಿಸ್ಟಮ್ ಅಡಿ ಇದ್ದು ಅದರಂತೆ ಕಳೆದ ಐದು ದಿನಗಳಿಂದ ಹಲವು ಹಾಸಿಗೆ ವ್ಯವಸ್ಥೆಯ ಸೌಲಭ್ಯವನ್ನು ಈ ವ್ಯವಸ್ಥೆ ಮೂಲಕ ಹಂಚಿಕೆ ಮಾಡಲಾಗಿದೆ ಎಂದ ಅವರು, ಜೀವ ರಕ್ಷಕ ರೆಮಿಡಿಸಿವಿರ್ ಸಹ ಕೊರತೆ ಆಗದಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಿದರು.