ಕಲಬುರಗಿ:ಜೂ.29: ಮಾನವರೆಲ್ಲರೂ ಒಂದೆಯಾಗಿದ್ದು, ಹುಟ್ಟಿದ ಧರ್ಮ, ಜಾತಿ,ಅಂತಸ್ಥು, ಅಧಿಕಾರಗಳ ಆಧಾರದ ಮೇಲೆ ಮೇಲು-ಕೀಳು, ದೊಡ್ಡವರು, ಸಣ್ಣವರು ಭಾವನೆಗಳು ಮನುಷ್ಯನ ವ್ಯಕ್ತಿತ್ವ ಕುಗ್ಗಿಸುತ್ತವೆ. ಆದ್ದರಿಂದ ಇವೆಲ್ಲವುಗಳನ್ನು ಮೀರಿ, ಉನ್ನತವಾದ ವ್ಯಕ್ತಿತ್ವ, ಭ್ರಾತೃತ್ವ ತತ್ವ ನಮ್ಮದಾಗಿಸಿಕೊಳ್ಳಬೇಕು. ಎಲ್ಲಾ ಮಹಾತ್ಮರು ಸಮಾಜಕ್ಕೆ ನೀಡಿದ ವಿಶ್ವಭ್ರಾತೃತ್ವ ಮೌಲ್ಯಗಳು ಒಂದೆಯಾಗಿದ್ದು, ಅವುಗಳನ್ನು ಸರಿಯಾಗಿ ಅರ್ಥಮಾಡಿಕೊಂಡು ಸಾಮರಸ್ಯ ಭಾವದಿಂದ ಬದುಕಿದರೆ ಸಮಾಜದಲ್ಲಿ ಶಾಂತಿ ನೆಲಸಲು ಸಾಧ್ಯವಾಗುತ್ತದೆ ಎಂದು ಸಮಾಜ ಸೇವಕ, ಇಸ್ಲಾಂ ಧಾರ್ಮಿಕ ಮುಖಂಡ ಹಜರತ್ ಆದಾಮ್ ಅಲಿ ಶಹಾ ಬಾಬಾ ಹೇಳಿದರು.
ನಗರದ ಕೆಬಿಎನ್ ದರ್ಗಾ ರಸ್ತೆಯ ರೋಜಾ(ಬಿ)ಯ ಜಲಾಲವಾಡಿ ಬಡಾವಣೆಯಲ್ಲಿರುವ ‘ಹಜರತ್ ಸೈಯದ್ ಶಹಾ ಹಾತ್ ಬಡೆ ಹುಸೇನಿ ದರ್ಗಾ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಬಕ್ರೀದ್ ಹಬ್ಬದ ಪ್ರಯುಕ್ತ ಗುರುವಾರ ಏರ್ಪಡಿಸಲಾಗಿದ್ದ ಕೋಮು ಸಾಮರಸ್ಯ, ಸಮಾಜ ಸೇವಕರಿಗೆ ಸತ್ಕಾರ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಅವರು ಮಾತನಾಡಿದರು.
ಬಳಗದ ಅಧ್ಯಕ್ಷ, ಉಪನ್ಯಾಸಕ ಎಚ್.ಬಿ.ಪಾಟೀಲ, ಜಿಲ್ಲಾ ಯುವ ಸಂಘಗಳ ಒಕ್ಕೂಟದ ಅಧ್ಯಕ್ಷ ಡಾ.ಸುನೀಲಕುಮಾರ ಎಚ್.ವಂಟಿ ಮಾತನಾಡಿ, ಮಾನವರೆಲ್ಲರೂ ಒಬ್ಬನೇ ದೇವರ ಮಕ್ಕಳು. ದೇವನೊಬ್ಬ-ನಾಮ ಹಲವು. ನಾವು ಹುಟ್ಟಿ ಬರುವಾಗ ಜೊತೆಯಲ್ಲಿ ಏನು ತಂದಿಲ್ಲ. ಹೋಗುವಾಗ ಏನು ತೆಗೆದುಕೊಂಡು ಹೋಗುವುದಿಲ್ಲ. ಇರುವಷ್ಟು ದಿವಸಗಳಲ್ಲಿ ನಾವೆಲ್ಲರೂ ಕೂಡಿ ಬಾಳೋಣ. ಕಲಹ, ಜಗಳವಾಡಿದರೆ ಯಾವುದೇ ಪ್ರಯೋಜನೆಯಿಲ್ಲ. ಎಲ್ಲರೂ ಜೊತೆಗೂಡಿ ಸಾಗಬೇಕು. ಪ್ರತಿಯೊಬ್ಬರಲ್ಲಿ ಪ್ರೀತಿ, ವಿಶ್ವಾಸ, ನಂಬಿಕೆ ಬೆಳೆಸಿಕೊಂಡು ಹೋಗಬೇಕು. ಬಕ್ರೀದ ಹಬ್ಬವು ಶಾಂತಿ, ಸಹೋದರತೆ, ತ್ಯಾಗ, ಭಾವೈಕ್ಯತೆಯ ಸಂಕೇತವಾಗಿ ಆಚರಿಸಲಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಹಜರತ್ ಜಾನಿ ಶಹಾ ಸಾಹೇಬ್ ಚಿಸ್ತಿ, ಮುನಾವರ್ ಶಹಾ ಚಿಸ್ತಿ, ಅಬ್ದುಲ್ ರೆಹಮಾನ ಶಹಾ ಚಿಸ್ತಿ, ನಬಿ ಶಹಾ, ಇಬ್ರಾಹಿಂ ಶಹಾ, ಜಾವುದ್ ಶಹಾ, ಶಿವಯೋಗಪ್ಪ ಬಿರಾದಾರ, ಬಸವರಾಜ ಎಸ್.ಪುರಾಣೆ, ಅನೀಲಕುಮಾರ ಡಬರಾಬಾದ್ ಸೇರಿದಂತೆ ಹಲವರು ಭಾಗವಹಿಸಿದ್ದರು.