ಸಾಮರಸ್ಯಯುತ ಜೀವನದಿಂದ ಸಮಾಜದಲ್ಲಿ ಶಾಂತಿ

ಕಲಬುರಗಿ: ಡಿ.25: ದೇಶದಲ್ಲಿರುವ ಪ್ರತಿಯೊಬ್ಬರು ಜಾತಿ, ಧರ್ಮ, ಪ್ರದೇಶ, ಅಧಿಕಾರ, ಅಂತಸ್ಥಿನ ಆಧಾರಗಳ ಮೇಲೆ ಮೇಲು-ಕೀಳು ಮಾಡಿದರೆ, ಎಲ್ಲರಲ್ಲಿ ಅಶಾಂತಿ ಉಂಟಾಗುತ್ತದೆ. ಎಲ್ಲಾ ಧರ್ಮ, ಮಹಾತ್ಮರ ತತ್ವ, ಸಂದೇಶ ಸಮಾಜದ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿದ್ದು, ಅದನ್ನು ಅರ್ಥಮಾಡಿಕೊಂಡು ಪರಸ್ಪರ ಎಲ್ಲರೂ ಸಹೋದರತ್ವ ಭಾವನೆಯಿಂದ ಸಾಮರಸ್ಯಯುತ ಜೀವನವನ್ನು ಸಾಗಿಸಿದರೆ ಸಮಾಜದಲ್ಲಿ ನೆಮ್ಮದಿ, ಶಾಂತಿ ನೆಲೆಸಲು ಸಾಧ್ಯವಾಗುತ್ತದೆಯೆಂದು ಉಪನ್ಯಾಸಕ, ಚಿಂತಕ ಎಚ್.ಬಿ.ಪಾಟೀಲ ಹೇಳಿದರು.
ಅವರು ನಗರದ ಆಳಂದ ರಸ್ತೆಯ ಸಂತೋಷ ಕಾಲನಿಯ ಕೆಎಚ್‍ಬಿ ಗ್ರೀನ್ ಪಾರ್ಕ್‍ನಲ್ಲಿ ಸಮಾಜ ಸೇವಕ ಯಲ್ಲಪ್ಪ ಬೈರಾಮಡಗಿ ಅವರ ಮನೆಯ ಪ್ರಾಂಗಣದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’, ‘ಕೆಎಚ್‍ಬಿ ಗ್ರೀನ್ ಪಾರ್ಕ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ’ ಇವುಗಳ ಜಂಟಿ ಆಶ್ರಯದಲ್ಲಿ ಶುಕ್ರವಾರ ಸಂಜೆ ಹಮ್ಮಿಕೊಳ್ಳಲಾದ ‘ಕ್ರಿಸ್‍ಮಸ್ ಸಾಮರಸ್ಯ ಕಾರ್ಯಕ್ರಮ’ವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಯೇಸು ಸೇರಿದಂತೆ ಎಲ್ಲಾ ಮಹಾತ್ಮರ ಸಂದೇಶ ಒಂದೇ ಆಗಿದೆ. ಅದನ್ನು ನಾವು ತಿಳಿದುಕೊಳ್ಳುವಲ್ಲಿ ಎಡವಿರುವುದರಿಂದ ಸಮಾಜದಲ್ಲಿ ಸಮಸ್ಯೆಗಳು ಉದ್ಭವವಾಗುತ್ತಿವೆ. ಪ್ರತಿಯೊಬ್ಬರಲ್ಲಿ ಪರಸ್ಪರ ಪ್ರೀತಿ, ಕರುಣೆ, ಪ್ರೇಮದ ಭಾವನೆ ಮೂಡಿದರೆ, ದ್ವೇಷ ಮಾಯೆಯಾಗಲು ಸಾಧ್ಯವಾಗುತ್ತದೆ. ಭಾರತ ಸರ್ವಧರ್ಮಗಳ ದೇಶ. ಭೇದ-ಭಾವ ಮಾಡಿದರೆ ತೊಂದರೆಗಳಾಗುತ್ತವೆ. ಆದ್ದರಿಂದ ಎಲ್ಲರೂ ಒಂದೇ ತಾಯಿಯ ಮಕ್ಕಳೆಂದು ಭಾವಿಸಿ ಸಹ ಜೀವನ ಸಾಗಿಸಬೇಕಾಗಿದೆಯೆಂದರು.
ಬಡಾವಣೆಯ ಸಂಘದ ಅಧ್ಯಕ್ಷ ಸಂಜೀವಕುಮಾರ ಶೆಟ್ಟಿ, ಸಮಾಜ ಸೇವಕ ಯಲ್ಲಪ್ಪ ಬೈರಾಮಡಗಿ ಮಾತನಾಡುತ್ತಾ, ಪ್ರತಿಯೊಬ್ಬರೂ ತಮ್ಮ ಧರ್ಮವನ್ನು ಪಾಲಿಸಿ. ಆದರೆ, ಅನ್ಯ ಧರ್ಮವನ್ನು ಗೌರವಿಸುವ ಮೂಲಕ ಮೇರು ಗುಣಗಳನ್ನು ಬೆಳೆಸಿಕೊಳ್ಳಬೇಕು. ಜ್ಞಾನ, ಬುದ್ಧಿ ಜೊತೆಗೆ ಹೃದಯವಂತಿಕೆ, ಮಾವೀಯ ಮೌಲ್ಯಗಳು, ಸಂಸ್ಕಾರವನ್ನು ಜೀವನದಲ್ಲಿ ಅಳವಡಿಸಿಕೊಂಡು ಸಾಗಿದರೆ, ಬದುಕು ಸುಂದರವಾಗಲು ಸಾಧ್ಯವಾಗುತ್ತದೆಯೆಂದು ನುಡಿದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಸಿಸ್ಟರ್ ಸಿಬಾ ವೈ.ಬೈರಾಮಡಗಿ, ಲಕ್ಷ್ಮೀಕಾಂತ, ಆಸಿಸ್, ಅಭಿಷೇಖ, ನರಸಪ್ಪ ಬಿರಾದಾರ ದೇಗಾಂವ, ಸಂಗಮೇಶ್ವರ ಸರಡಗಿ, ಬಾಲಕೃಷ್ಣ ಕುಲಕರ್ಣಿ, ಡಿ.ವಿ.ಕುಲಕರ್ಣಿ, ರಾಮದಾಸ ಪಾಟೀಲ, ಬಸವರಾಜ ಹೆಳವರ ಯಾಳಗಿ, ಚಂದ್ರಶೇಖರ ಹರವಾಳ, ದಶರಥ ರೆಡ್ಡಿ, ಪಾಂಡುರಂಗ ಕಟಕೆ, ಗುರುಲಿಂಗಯ್ಯ ಸ್ವಾಮಿ, ಅಣ್ಣಾರಾಯ ಮಂಗಾಣೆ, ವೀರೇಶ ಬೋಳಶೆಟ್ಟಿ ನರೋಣಾ, ವಿನೋದ ಪಡನೂರ, ಸೂರ್ಯಕಾಂತ ಸಾವಳಗಿ, ಲಕ್ಷ್ಮೀಬಾಯಿ ಅಟೂರ ಸೇರಿದಂತೆ ಹಲವರು ಭಾಗವಹಿಸಿದ್ದರು.