ಸಾಮರಸ್ಯದ ಬಾಳ್ವೆಗಾಗಿ ಕಾಂಗ್ರೆಸ್‌ಗೆ ಮತ ನೀಡಿ: ರಕ್ಷಾರಾಮಯ್ಯ

ಸಾಮರಸ್ಯದ ಬಾಳ್ವೆಗಾಗಿ ಕಾಂಗ್ರೆಸ್‌ಗೆ ಮತ ನೀಡಿ: ರಕ್ಷಾರಾಮಯ್ಯ ಹುಳಿಯಾರು, ಮಾ. ೨೭- ಸೌಹಾರ್ದತೆ ಮತ್ತು ಸಾಮರಸ್ಯದ ಬಾಳ್ವೆಗಾಗಿ ಕಾಂಗ್ರೆಸ್‌ಗೆ ಮತ ನೀಡುವಂತೆ ರಾಜ್ಯ ಯುವ ಕಾಂಗ್ರೆಸ್ ಅಧ್ಯೆಕ್ಷ ರಕ್ಷಾರಾಮಯ್ಯ ಮನವಿ ಮಾಡಿದ್ದಾರೆ.
ಹುಳಿಯಾರು ಪಟ್ಟಣ ಪಂಚಾಯ್ತಿ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಮಾಡಿ ಅವರು ಮಾತನಾಡಿದರು.
ಬಿಜೆಪಿ ಜಾತಿ ಮತ್ತು ಧರ್ಮದಿಂದ ದೇಶ ವಿಭಜಿಸುತ್ತದೆ. ಕಾರ್ಪೊರೆಟ್ ಕಂಪನಿಗಳ ಲಾಬಿಗೆ ಮಣಿದು ಕಾಂಗ್ರೆಸ್ ಪಕ್ಷ ಕಟ್ಟಿ ಬೆಳಸಿದ ಸರ್ಕಾರಿ ಸಂಸ್ಥೆಗಳನ್ನು ಖಾಸಗೀಕರಣ ಮಾಡುತ್ತಿದೆ. ಬೆಲೆ ಏರಿಕೆ ತಡೆಯುವಲ್ಲಿ ವಿಫಲರಾಗಿ ಜನಜೀವನ ಅಸ್ತವ್ಯಸ್ಥವಾಗಿದೆ. ಇದನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ದೇಶದ ಜನ ಬಿಜೆಪಿ ವಿರುದ್ಧ ಮಾತನಾಡಲು ಆರಂಭಿಸಿದ್ದಾರೆ. ಹುಳಿಯಾರು ಪ.ಪಂ. ಚುನಾವಣೆ ಸೇರಿದಂತೆ ಮುಂಬರುವ ಎಲ್ಲಾ ಚುನಾವಣೆಗಳಲ್ಲೂ ಜನ ಕಾಂಗ್ರೆಸ್ ಕೈ ಹಿಡಿಯಲಿದ್ದಾರೆ ಎಂಬ ಆಶಾಭಾವ ವ್ಯಕ್ತಪಡಿಸಿದರು.
ರಾಜ್ಯ ಯುವ ಕಾಂಗ್ರೆಸ್ ಮಾಜಿ ಉಪಾಧ್ಯಕ್ಷ ಆರ್.ರಾಜೇಂದ್ರ ಮಾತನಾಡಿ, ಸಿದ್ಧರಾಮಯ್ಯ ಅವರ ಅನ್ನಭಾಗ್ಯ ಯೋಜನೆಯೊಂದೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುತ್ತದೆ. ಕೊವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ಅನ್ನಭಾಗ್ಯವೊಂದಿಲ್ಲದಿದ್ದರೆ ರಾಜ್ಯದ ಜನ ಹಸಿವಿನಿಂದ ಸಾಯಬೇಕಿತ್ತು. ಈ ಸತ್ಯ ಈಗ ಮನಗಂಡಿರುವ ರಾಜ್ಯದ ಜನ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಾಡಿದ ತಪ್ಪನ್ನು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮಾಡಲಾರರು ಎಂದರಲ್ಲದೆ, ಹುಳಿಯಾರು ಅಭಿವೃದ್ಧಿಗೆ ಕಾಂಗ್ರೆಸ್ ಕೊಟ್ಟಿರುವ ಕೊಡುಗೆ ಮತದಾರರ ಮುಂದಿಟ್ಟು ಚುನಾವಣೆಗೆ ಮತ ಕೇಳಿ ಮತದಾರರನ್ನು ಒಲಿಸಿ ಈ ಬಾರಿ ಹುಳಿಯಾರು ಪಂಚಾಯ್ತಿ ಅಧಿಕಾರ ಕಾಂಗ್ರೆಸ್ ಹಿಡಿಯುವಂತೆ ಮಾಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಬಿ.ಲಕ್ಕಪ್ಪ, ಜಿ.ಪಂ. ಸದಸ್ಯ ವೈ.ಸಿ.ಸಿದ್ಧರಾಮಯ್ಯ, ಚಿಕ್ಕನಾಯಕನಹಳ್ಳಿ ಕಾಂಗ್ರೆಸ್ ಮುಖಂಡ ಕೃಷ್ಣೇಗೌಡ, ರಮಾನಂದ್, ಪ.ಪಂ. ಮಾಜಿ ಸದಸ್ಯರುಗಳಾದ ಧನುಷ್ ರಂಗನಾಥ್, ಎಸ್‌ಆರ್‌ಎಸ್ ದಯಾನಂದ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶಶಿಹುಲಿಕುಂಟೆ, ಹುಳಿಯಾರು ಯುವ ಕಾಂಗ್ರೆಸ್ ಅಧ್ಯಕ್ಷ ಯೋಗೀಶ್, ಕಾಂಗ್ರೆಸ್ ಓಬಿಸಿ ಘಟಕದ ಅಧ್ಯಕ್ಷ ಪ್ರಸನ್ನಕುಮಾರ್ ಮತ್ತಿತರರು ಉಪಸ್ಥಿತರಿದ್ದರು.