ಸಾಮರಸ್ಯದ ನಡೆ ಹೊಂದಿದ ಹಾರಕೂಡ ಚನ್ನವೀರ ಶಿವಾಚಾರ್ಯರು : ಶ್ರೀ ರಂಭಾಪುರಿ ಜಗದ್ಗುರುಗಳು

ಕಲಬುರಗಿ:ನ.5:ಹಾರಕೂಡ ಹಿರೇಮಠದ ಡಾ. ಚನ್ನವೀರ ಶಿವಾಚಾರ್ಯ ಸ್ವಾಮಿಗಳು ಸರ್ವ ಸಮಾಜದವರನ್ನು ಸಮಾನವಾಗಿ ಕಂಡು ಶ್ರೀ ಮಠವನ್ನು ಸಾಮರಸ್ಯದಿಂದ ಮುನ್ನಡೆಸುತ್ತ ಸೌಹಾರ್ದಮಯ ವಾತಾವರಣ ನಿರ್ಮಿಸಿದ್ದಾರೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಶುಕ್ರವಾರ ಬಸವಕಲ್ಯಾಣ ತಾಲೂಕಿನ ಹಾರಕೂಡ ಹಿರೇಮಠದ ಚನ್ನವೀರ ಶಿವಾಚಾರ್ಯ ಸ್ವಾಮಿಗಳ 60ನೇ ಜನ್ಮ ದಿನಾಚರಣೆ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಹಾರಕೂಡ ಹಿರೇಮಠ ಈ ಭಾಗದಲ್ಲಿ ಕಲೆ, ಸಾಹಿತ್ಯ, ಸಂಸ್ಕøತಿ ಪರಂಪರೆಗಳನ್ನು ಬೆಳೆಸುತ್ತ ಭಕ್ತರ ಪಾಲಿಗೆ ಶ್ರದ್ಧಾ ಕೇಂದ್ರವಾಗಿ ಬೆಳೆಯುತ್ತಿದೆ. ಶ್ರೀ ಮಠಕ್ಕೆ ಭಕ್ತರೇ ನಿಜವಾದ ಆಸ್ತಿಯಾಗಿದ್ದಾರೆ. ಲಿಂ. ಚನ್ನಬಸವ ಶ್ರೀಗಳು ನೀಡಿದ ಸನ್ಮಾರ್ಗ ಮಾಡಿದ ಸತ್ಕಾರ್ಯಗಳಿಂದಾಗಿ ಭಕ್ತರ ಮನದಲ್ಲಿ ಶಾಶ್ವತವಾಗಿ ನೆಲೆಯೂರಿದ್ದಾರೆ. ಇಂದು ಷಷ್ಠ್ಯಬ್ಧಿ ಆಚರಿಸಿಕೊಳ್ಳುತ್ತಿರುವ ಚನ್ನವೀರ ಶ್ರೀಗಳು ಮುಂದೆ ಜನ್ಮ ವಜ್ರ ಮಹೋತ್ಸವವನ್ನು ಆಚರಿಸುವಂತಾಗಲಿ. ಅವರಿಂದ ಇನ್ನೂ ಜನಪರ ಕಾರ್ಯಗಳು ನಡೆಯಲಿ ಶ್ರೀ ಮಠ ಅಭಿವೃದ್ಧಿ ಹೊಂದಲಿ ಎಂದು ಶುಭ ಹಾರೈಸಿ ಶ್ರೀಗಳಿಗೆ ರೇಶ್ಮೆ ಮಡಿ ಹೊದಿಸಿ ಶ್ರೀ ಪೀಠದ ಸ್ಮರಣಿಕೆ ನೀಡಿ ಆಶೀರ್ವದಿಸಿದರು.
ನೇತೃತ್ವ ವಹಿಸಿದ ಡಾ. ಚನ್ನವೀರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಶ್ರೀ ರಂಭಾಪುರಿ ಜಗದ್ಗುರುಗಳು ನಿರಂತರ ಪ್ರವಾಸ ಮಾಡುತ್ತಾ ಭಕ್ತರ ಉದ್ಧಾರಕ್ಕಾಗಿ ಶ್ರಮಿಸುತ್ತಿದ್ದಾರೆ. ಅವರು ತೋರಿಸುತ್ತಿರುವ ಸನ್ಮಾರ್ಗದಲ್ಲಿ ನಾವೆಲ್ಲ ಸಾಗಿ ಸುಖ ಶಾಂತಿ ನೆಮ್ಮದಿ ಹೊಂದೋಣ. ಲಿಂ. ಚನ್ನಬಸವ ಶಿವಯೋಗಿಗಳು ಮತ್ತು ಲಿಂ. ಕರಬಸಯ್ಯ ಹಿರೇಮಠ ಅವರು ತಮ್ಮ ಧಾರ್ಮಿಕ ಸಾಮಾಜಿಕ ಕಾರ್ಯಗಳಿಂದ ಶ್ರೀ ಮಠದ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದಾರೆ. ಇಂದು ಕರಬಸಯ್ಯ ಹಿರೇಮಠರ ಸಮಾಧಿ ಶ್ರೀ ರಂಭಾಪುರಿ ಜಗದ್ಗುರುಗಳಿಂದ ಲೋಕಾರ್ಪಣೆಗೊಂಡಿರುವುದು ತಮಗೆ ಸಂತಸ ತಂದಿದೆ ಎಂದರು.
ಶಾಸಕ ಶರಣು ಸಲಗರ ದೀಪ ಬೆಳಗಿಸುವ ಮೂಲಕ ಸಮಾರಂಭವನ್ನು ಉದ್ಘಾಟಿಸಿದರು. ಅನುಭವ ಮಂಟಪ ಅನುಷ್ಠಾನ ಸಮಿತಿ ಅಧ್ಯಕ್ಷ ಬಸವರಾಜ ಪಾಟೀಲ ಸೇಡಂ, ಸಂಸದ ಉಮೇಶ ಜಾಧವ, ಮಾಜಿ ಸಚಿವ ಡಾ. ಶರಣಪ್ರಕಾಶ ಪಾಟೀಲ, ವಿ.ಪ.ಮಾಜಿ ಸದಸ್ಯ ವಿಜಯಸಿಂಗ್ ಸೇರಿದಂತೆ ಹಲವಾರು ರಾಜಕೀಯ ಮುಖಂಡರು ಗಣ್ಯರು ಉಪಸ್ಥಿತರಿದ್ದರು. ಹಿರೇನಾಗಾಂವ ಜಯಶಾಂತಲಿಂಗ ಶ್ರೀ, ತ್ರಿಪುರಾಂತ ಅಭಿನವ ಘನಲಿಂಗ ರುದ್ರಮುನಿ ಶ್ರೀ, ತಡೋಳಾ ರಾಜೇಶ್ವರ ಶ್ರೀ, ಹುಮನಾಬಾದ್ ರೇಣುಕ ಗಂಗಾಧರ ಶ್ರೀ, ಹುಡಗಿ ವಿರೂಪಾಕ್ಷ ಶ್ರೀ, ಕಡಗಂಚಿ ವೀರಭದ್ರ ಶ್ರೀಗಳು ಸೇರಿದಂತೆ ವಿವಿಧ ಮಠಾಧೀಶರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ‘ಚೆನ್ನವೀರ ಪದನಮನ’ ಕೃತಿ ಬಿಡುಗಡೆಗೊಳಿಸಲಾಯಿತು.
ರಾಜಗುರು ಗುರುಸ್ವಾಮಿ ಕಲಕೇರಿ ಮತ್ತು ಗುರುಶಾಂತಯ್ಯ ಸ್ಥಾವರಮಠ ಇವರಿಂದ ಸಂಗೀತ ಕಾರ್ಯಕ್ರಮ ಜರುಗಿತು.
ಸಮಾರಂಭಕ್ಕೂ ಮುನ್ನ ಶ್ರೀ ರಂಭಾಪುರಿ ಜಗದ್ಗುರುಗಳವರನ್ನು ಅಲಂಕೃತ ಸಾರೋಟಿನಲ್ಲಿ ಅದ್ದೂರಿ ಮೆರವಣಿಗೆಯ ಮೂಲಕ ಶ್ರೀ ಹಾರಕೂಡ ಹಿರೇಮಠಕ್ಕೆ ಬರಮಾಡಿಕೊಳ್ಳಲಾಯಿತು. ನಂತರ ಶ್ರೀ ರಂಭಾಪುರಿ ಜಗದ್ಗುರುಗಳು ಲಿಂ. ಕರಬಸಯ್ಯ ಸ್ವಾಮಿ ಹಿರೇಮಠ ಅವರ ಗದ್ದುಗೆಯನ್ನು ಉದ್ಘಾಟಿಸಿದರು.