ಸಾಧು ಸಂತರ ರಕ್ಷಣೆಗೆ ಸರ್ಕಾರ ಬದ್ಧ


(ಸಂಜೆವಾಣಿ ವಾರ್ತೆ)
ಚನ್ನಮ್ಮನ ಕಿತ್ತೂರ,ಜು.11: ಈ ಸಂಸಾರದ ಸಂತೆ ಬೇಡವೆಂದು ಸಮಾಜದಿಂದ ದೂರವಿದ್ದುಕೊಂಡು ಸನ್ಯಾಸತ್ವ ಪರಿಪಾಲನೆ ಮಾಡುತ್ತಾ ಈ ಸಮಾಜದಲ್ಲಿ ಮನುಷ್ಯರಾದವರು ಹೇಗೆ ಬದುಕುಕಟ್ಟಿಕೊಳ್ಳಬೇಕೆಂದು ಕಲಿಸಿಕೊಟ್ಟವರು ಸಾಧು-ಸಂತರು ಎಂದು 108 ಶ್ರೀ ಸಿದ್ದಸೇನ ಮಹಾರಾಜ ಹೇಳಿದರು.
ಬೆಳಗಾವಿ ಸುವರ್ಣಸೌಧ ಹತ್ತಿರದ ಶಾಂತಗಿರಿ ಆಶ್ರಮದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದವರು. 108 ಶ್ರೀ ಕಾಮಕುಮಾರ ನಂದಿ ಮಹಾರಾಜ ತಮ್ಮ ಜೀವನದ ಹಂಗು ತೊರೆದು ಸಮಾಜಕ್ಕಾಗಿ ಬದುಕಿದವರು. ಕಷ್ಟವೆಂದು ಬಂದವರಿಗೆ ಸಹಾಯ ಮಾಡುವುದು ತಪ್ಪೇ..? ಸಹಾಯ ಮಾಡುವುದಕ್ಕಾಗಿ ಹಣ ನೀಡಿ ಮರಳಿ ಹೆಣವಾಗಬೇಕಾಯಿತು. ಅದಕ್ಕಾಗಿ ಯಾರನ್ನು ನಂಬುವುದು ತಿಳಿಯದಂತಾಗಿದೆ. ಧರ್ಮ ಮತ್ತು ಸಮಾಜ ನನ್ನದು ಎನ್ನವ ಸಾಧು-ಸಂತರ ರಕ್ಷಣೆ ಸರ್ಕಾರದ ಮೇಲಿದೆ. ಇನ್ಮುಂದೆ ಸರ್ಕಾರ ಅವರಿಗೆ ರಕ್ಷಣೆ ಕೊಟ್ಟು ಕಾಪಾಡಬೇಕು. ಇಲ್ಲದಿದ್ದರೆ ಮುಂದೊಂದು ದಿನ ಗಂಡಾಂತರ ತಪ್ಪಿದ್ದಲ್ಲ ಎಂದರು.
ಗೃಹ ಸಚಿವ ಜಿ,ಪರಮೇಶ್ವರ ಶಾಂತಗಿರಿ ಆಶ್ರಮಕ್ಕೆ ಭೇಟಿ ನೀಡಿ ಸಂಘಟನೆಯವರ ಮನವಿ ಸ್ವೀಕರಿಸಿದರು. ನಂತರ ಮಾತನಾಡಿ ಯಾವುದೆ ಅಪೇಕ್ಷೆ ಇಲ್ಲದೇ ಎಲ್ಲವನ್ನು ತ್ಯಾಗ ಮಾಡಿ ಜೀವನ ಸಾಗಿಸುತ್ತಿದ್ದ ಸಂತ ಮಹಾರಾಜರಿಗೆ ಇಂತಹ ಘಟನೆ ನಡೆಯಬಾರದಿತ್ತು ಇದು ಖಂಡನೀಯ
ಈಗಾಗಲೇ ಪೋಲಿಸರು ಆರೋಪಿಗಳನ್ನ ಬಂಧಿಸಿ ತನಿಖೆ ಪ್ರಾರಂಭಿಸಿದ್ದಾರೆ. ಜೈನ ಸಮುದಾಯಕ್ಕಾಗಲಿ ಯಾವುದೇ ಸಮುದಾಯದ ಸಾಧು-ಸಂತರಿಗೆ ಎಲ್ಲ ರೀತಿ ರಕ್ಷಣೆ ಒದಗಿಸುವ ಪ್ರಯತ್ನ ಸರ್ಕಾರ ಮಾಡುತ್ತದೆ ಎಂದರು.
ಇಂತಹ ಗಂಭೀರವಾದ ಸಂದರ್ಭದಲ್ಲಿ ಪ್ರತಿಪಕ್ಷದವರು ರಾಜಕೀಯ ಮಾಡಬಾರದು. ಪೋಲಿಸರು ಕೆಲವೇ ಘಂಟೆಗಳಲ್ಲಿ ಅಪರಾಧಿಗಳನ್ನು ಬಂಧಿಸಿ ತನಿಖೆಗೊಳಪಡಿಸಿದ್ದಾರೆ. ಅದು ಸಮರ್ಥತೆ ತೋರಿಸುತ್ತಿದೆ. ಇದನ್ನು ಸಿಬಿಐಗೆ ಒಪ್ಪಿಸುವ ಅವಶ್ಯಕತೆಯಿಲ್ಲಾ.ಎಲ್ಲದರಲ್ಲಿಯೂ ರಾಜಕಾರಣ ಮಾಡಬಾರದು ಎಂದು ಹೇಳಿದರು.
ಈ ವೇಳೆ ಕ್ಷುಲಕ ಮಹಾರಾಜ, ಸೂರ್ಯ ಸೋಮದೇವ ಭೈಯಾಜಿ, ಶಾಸಕ ಅಭಯ್ ಮಾಜಿ ಜಿ.ಪಂ. ಸದಸ್ಯೆ ರೋಹಿನಿ ಪಾಟೀಲ, ಸೇರಿದಂತೆ ಜೈನ ಶ್ರಾವಕ-ಶ್ರಾವಕೀಯರು, ಸಂಘಟನೆಯವರು, ಮುಖಂಡರುಗಳು, ಸಾರ್ವಜನಿಕರಿದ್ದರು.