ಸಂಜೆವಾಣಿ ನ್ಯೂಸ್
ಮೈಸೂರು: ಜು.31:- ವಿಶಾಲವಾದ ಪ್ರಪಂಚದಲ್ಲಿ ಸಾಧಕರು ಶಾಶ್ವತವಲ್ಲ, ಸಾಧನೆ ಮಾತ್ರ ಶಾಶ್ವತ. ಯಾರು ತಮ್ಮಲ್ಲಿರುವ ಜ್ಞಾನವನ್ನು ಸರಿಯಾದ ದಿಕ್ಕಿನಲ್ಲಿ ಸದ್ಬಳಕೆ ಮಾಡಿಕೊಳ್ಳುವರೋ, ಅವರು ಜೀವನದಲ್ಲಿ ಅದ್ಭುತ ಸಾಧಕರಾಗಬಲ್ಲರು, ಅವರ ಸಾಧನೆ ಉಳಿಯುತ್ತದೆ ಎಂದು ನಿವೃತ್ತ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಡಾ.ಕೆ. ಶಂಕರೇಗೌಡ ಅಭಿಪ್ರಾಯಪಟ್ಟರು.
ನಗರದ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಸಭಾಂಗಣದಲ್ಲಿ ಶ್ರೀರಂಗಪಟ್ಟಣದ ಸುಮಂಗಲಿ ಸೇವಾ ಟ್ರಸ್ಟ್ ವತಿಯಿಂದ ನಡೆದ ‘ಕರ್ನಾಟಕ ಪ್ರಜಾಭೂಷಣ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಮುಖ್ಯ ಭಾಷಣಕಾರರಾಗಿ ಭಾಗವಹಿಸಿ ಮಾತನಾಡಿದ ಅವರು,
ಸಾಧನೆಮಾಡಲು ಜ್ಞಾನ, ತಾಳ್ಮೆ, ಪರಿಶ್ರಮ ಹಾಗೂ ತ್ಯಾಗದ ಮನೋಭಾವ ಅಗತ್ಯ. ಹೀಗೆ ವಿವಿಧ ಕ್ಷೇತ್ರದಲ್ಲಿ ಸಾಧನೆಯ ಕೃಷಿ ಮಾಡಿದ, ಬದ್ಧತೆಯಿಂದ ಸೇವೆ ಸಲ್ಲಿಸುವ ಪ್ರಾಮಾಣಿಕ ಸಾಧಕರ ಗುರುತಿಸಿ ಅಭಿನಂದನೆ ಸಲ್ಲಿಸುವುದು ತುಂಬಾ ಮುಖ್ಯ ಎಂದು ಸಂಘಟಕರಿಗೆ ಸಲಹೆ ನೀಡಿದರು.
ಸಾಧಕರಾದ ನಾಲ್ವಡಿ ಕೃಷ್ಣರಾಜ ಒಡೆಯರ್, ಡಾ.ಬಿ.ಆರ್. ಅಂಬೇಡ್ಕರ್, ಕುವೆಂಪು, ಎಪಿಜೆ ಅಬ್ದುಲ್ ಕಲಾಂ, ಡಾ.ಸಿ.ಎನ್. ಮಂಜುನಾಥ್ ಅವರ ಸೇವೆ ಮತ್ತು ಸಾಧನೆಯನ್ನು ಜನರು ಸದಾ ಗೌರವಿಸಬೇಕು, ನೆನೆಯಬೇಕು. ಈ ಸಾಧಕರು ಮಾಡಿದ ಸಾಧನೆ, ಸಾರಿದ ಸಂದೇಶಗಳನ್ನು ಯುವಜನರಿಗೆ ತಿಳಿಸಬೇಕು. ಆ ಮೂಲಕ ಯುವ ಪೀಳಿಗೆಗೆ ಮಾರ್ಗದರ್ಶನ ನೀಡಿ, ಅವರಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸಬೇಕು ಎಂದು ಸಲಹೆ ನೀಡಿದರು.
ಸ್ಪಂದನ ಸಾಂಸ್ಕೃತಿಕ ಪರಿಷತ್ತಿನ ಅಧ್ಯಕ್ಷ ಟಿ. ಸತೀಶ್ ಜವರೇಗೌಡ ಮಾತನಾಡಿ, ಕಾಯಕ ಸಂಸ್ಕೃತಿಯನ್ನು ಉಳಿಸುವ ಜೊತೆಗೆ ಅರ್ಪಣಾ ಮನೋಭಾವದಿಂದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುವ ಸಾಧಕರು ಸಮಾಜದ ಆಸ್ತಿ. ಇಂತಹ ನಿಸ್ವಾರ್ಥ ಸೇವಾ ಸಾಧಕರಿಗೆ ಸಲ್ಲಿಸುವ ಪ್ರಶಸ್ತಿಯ ಗೌರವ ಅವರ ಜವಾಬ್ದಾರಿಯ ವೃದ್ಧಿಸುತ್ತದೆ. ಸಮಾಜಮುಖಿ ಕಾರ್ಯಗಳಲ್ಲಿ ಮುಂದಡಿಯಿಡಲು ಚಿಮ್ಮುಹಲಗೆಯಾಗುವುದಲ್ಲದೆ ಹೊಸ ಹುರುಪು ತುಂಬಿ, ಜೀವನದಲ್ಲಿ ಮತ್ತಷ್ಟು ಸಾಧಿಸಲು ಪ್ರೇರಣೆ ನೀಡುತ್ತದೆ ಎಂದರು.
ಮೇಲುಕೋಟೆಯ ವಂಗೀಪುರದ ನಂಬಿಮಠದ ಇಳೈ ಆಳ್ವಾರ್ ಸ್ವಾಮೀಜಿ ಸಾನಿಧ್ಯದಲ್ಲಿ ನಡೆದ ಸಮಾರಂಭವನ್ನು ಯುವ ಮುಖಂಡ ಲೋಕೇಶ್ವರ್ ಎಂ. ನಾಯಕ್ ಉದ್ಘಾಟಿಸಿದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕೆ.ಆರ್. ಪೇಟೆ ತಾಲ್ಲೂಕಿನ ಸಂಘಟನಾ ಕಾರ್ಯದರ್ಶಿ ಬಿ.ಎಸ್. ಮಂಜು, ಲಯನ್ಸ್ ಕ್ಲಬ್ ಆಫ್ ಮೈಸೂರು ಗೋಲ್ಡನ್ ಸಿಟಿಯ ಅಧ್ಯಕ್ಷ ಸುರೇಶ್ ಗೋಲ್ಡ್, ರೂಪದರ್ಶಿ ವಿ. ಅನಿತಾ, ಟ್ರಸ್ಟ್ ಅಧ್ಯಕ್ಷ ಹೆಚ್.ವಿ. ಪುಟ್ಟಸ್ವಾಮಿ, ಸಾಹಿತಿ ಅಪ್ಪಾಜಿ ಕೆ. ಶೆಟ್ಟಹಳ್ಳಿ ಉಪಸ್ಥಿತರಿದ್ದರು.
ವಿವಿಧ ಕ್ಷೇತ್ರದ ಸಾಧಕರಾದ ಮಂಡ್ಯದ ಮಹಿಳಾ ಹೋರಾಟಗಾರ್ತಿ ರಜನಿ ರಾಜ್, ಕನ್ನಡ ಉಪನ್ಯಾಸಕ ಮಂಜುನಾಥ ರಾಜೇ ಅರಸ್, ನಿವೃತ್ತ ಮುಖ್ಯ ಶಿಕ್ಷಕ ಯೋಗೇಂದ್ರ, ಸಮಾಜಸೇವಕಿ ಶೀಲಾವತಿ, ಯುವ ಪ್ರತಿಭೆ ಯಶಿಕ ಮಹಾಜನ್, ರಂಗನಟ ಸಿ.ಆರ್. ಪುಟ್ಟರಾಜು, ಕನ್ನಡ ಹೋರಾಟಗಾರ ಕೆ.ವಿ. ಕೃಷ್ಣಮೂರ್ತಿ ಸೇರಿದಂತೆ 30 ಮಂದಿಗೆ ‘ಕರ್ನಾಟಕ ಪ್ರಜಾಭೂಷಣ ಪ್ರಶಸ್ತಿ’ ಪ್ರದಾನ ಮಾಡಲಾಯಿತು.