ಸಾಧನೆಯ ಶಿಖರವೇರಲು ಶ್ರದ್ಧೆ ಅತ್ಯಗತ್ಯ

ಕೋಲಾರ,ಡಿ,೨೪- ಎಸ್ಸೆಸ್ಸೆಲ್ಸಿ ಶೈಕ್ಷಣಿಕ ಜೀವನದ ಅತ್ಯಂತ ಮಹತ್ವದ ಘಟ್ಟವಾಗಿದ್ದು, ನೀವು ಸಾಧನೆಯ ಶಿಖರವೇರಲು ಹಾಗೂ ಸಮಾಜ ನಿಮ್ಮನ್ನು ಗುರುತಿಸುವಂತಾಗಲು ನಿರಂತರ ಅಭ್ಯಾಸ,ಶ್ರದ್ಧೆ ಅಗತ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕನ್ನಯ್ಯ ಕರೆ ನೀಡಿದರು.
ತಾಲ್ಲೂಕಿನ ಕ್ಯಾಲನೂರು ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆಯಿಂದ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಪ್ರೇರಣಾಶಿಬಿರ ಹಾಗೂ ಸಂವಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಸಾಧನೆ ಸಾಧಕನ ಸ್ವತ್ತು ಅದು ಎಂದಿಗೂ ಸೋಮಾರಿಯ ಸ್ವತ್ತಲ್ಲ ಎಂಬುದನ್ನು ಅರಿಯಿರಿ, ಪರೀಕ್ಷೆ ಮುಗಿಯುವವರೆಗೂ ಪ್ರತಿ ಕ್ಷಣವೂಅಮೂಲ್ಯ ಎಂದು ತಿಳಿದು ಅಭ್ಯಾಸ ಮಾಡಿ ಎಂದು ಕಿವಿಮಾತು ಹೇಳಿದರು.
ಈ ಬಾರಿ ಕೋಲಾರ ತಾಲ್ಲೂಕು ಫಲಿತಾಂಶ ಪಟ್ಟಿಯಲ್ಲಿ ಪ್ರಥಮ ಸ್ಥಾನ ಬರುವಂತಾಗಲು ಶಿಕ್ಷಕರು ಬದ್ದತೆಯಿಂದ ಕೆಲಸ ಮಾಡಿ ಎಂದು ತಾಕೀತು ಮಾಡಿದ ಅವರು, ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಕುರಿತು ಹೆಚ್ಚಿನ ನಿಗಾ ವಹಿಸಲು ಸೂಚಿಸಿದರು.
ಪರೀಕ್ಷಾ ಕೇಂದ್ರಗಳ ಪುನರಚನೆ ಮಾಡಲಾಗಿದೆ, ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಎಸ್ಸೆಸ್ಸೆಲ್ಸಿ ಮಕ್ಕಳ ಅನುತ್ತೀರ್ಣತೆ ತಪ್ಪಿಸಲು ಮೂರು ಪರೀಕ್ಷೆ ನಡೆಸುತ್ತಿದೆ, ಮೊದಲ ಪರೀಕ್ಷೆಗೆ ನೋಂದಣಿ ಮಾಡಿಕೊಂಡ ಶಾಲಾ ಹೊಸ ಅಭ್ಯರ್ಥಿಗಳು ಮತ್ತು ಖಾಸಗಿ ಅಭ್ಯರ್ಥಿಗಳು ಆ ಪರಿಕ್ಷೆಯಲ್ಲಿ ಅನುತ್ತೀರ್ಣರಾದಲ್ಲಿ ಅಥವಾ ಯಾವುದೇ ವಿಷಯದ ಅಂಕ ಗಳಿಕೆ ಹೆಚ್ಚಿಸಿಕೊಳ್ಳಲು ೨ ಅಥವಾ ೩ನೇ ಪರೀಕ್ಷೆ ತೆಗೆದುಕೊಳ್ಳಲು ಅರ್ಹತೆ ಪಡೆದಿರುತ್ತಾರೆ ಎಂದ ಅವರು, ಒಂದನೇ ಪರೀಕ್ಷೆಗೆ ನೋಂದಣಿ ಮಾಡಿಕೊಳ್ಳದ ಅಭ್ಯರ್ಥಿ ಯಾವುದೇ ಕಾರಣಕ್ಕೂ ೨ ಮತ್ತು ೩ನೇ ಪರೀಕ್ಷೆ ತೆಗೆದುಕೊಳ್ಳುವ ಅರ್ಹತೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಜಿಲ್ಲಾ ಎಸ್ಸೆಸ್ಸೆಲ್ಸಿ ಪರೀಕ್ಷಾ ನೋಡಲ್ ಅಧಿಕಾರಿ ಕೃಷ್ಣಪ್ಪ ಮಾತನಾಡಿ, ಪರಿಣಾಮಕಾರಿಯಾಗಿ ಅಭ್ಯಾಸಕ್ಕಾಗಿ ವಿಷಯವಾರು ವೇಳಾಪಟ್ಟಿ ಸಿದ್ದಪಡಿಸಿಕೊಂಡು ಸಮಯ ವ್ಯರ್ಥ ಮಾಡದೇ ಓದಿ, ಮೊದಲು ಪಠ್ಯ ಕ್ರಮ ಅರ್ಥಮಾಡಿಕೊಳ್ಳಿ, ನಿಮಗೆ ಯಾವುದೇ ಪಾಠದ ಕುರಿತು ಗೊಂದಲವಿದ್ದರೆ ಮುಜುಗರಕ್ಕೆ ಒಳಗಾಗದೇ ನಿಮ್ಮ ಶಿಕ್ಷಕರನ್ನು ಕೇಳಿ ತಿಳಿದುಕೊಳ್ಳಿ ಎಂದರು.
ಕೆಪಿಎಸ್ ಶಾಲೆ ಮುಖ್ಯಶಿಕ್ಷಕ ಓ.ಮಲ್ಲಿಕಾರ್ಜುನ್ ಮಾತನಾಡಿ, ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮಪಡಿಸುವ ನಿಟ್ಟಿನಲ್ಲಿ ಇಲಾಖೆ ನೀಡಿರುವ ಮಾರ್ಗದರ್ಶನ ಪಾಲಿಸಲಾಗುತ್ತಿದೆ, ಸಂಪನ್ಮೂಲ ಪುಸ್ತಕಗಳನ್ನು ಮಕ್ಕಳಿಗೆ ನೀಡಿ ಅಭ್ಯಾಸ ಮಾಡಿಸುತ್ತಿದ್ದು, ಈ ಬಾರಿ ಶೇ.೧೦೦ ಫಲಿತಾಂಶ ಸಾಧನೆಯ ಗುರಿ ಹೊಂದಲಾಗಿದೆ ಎಂದರು.
ಸಂವಾದದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಬಿ.ಎ.ಕವಿತಾ, ರಾಜಣ್ಣ, ಸುಬ್ರಹ್ಮಣ್ಯಾಚಾರಿ, ಕೆ.ಎಸ್.ಶ್ರೀನಿವಾಸಗೌಡ,ಅಮರೇಶಬಾಬು, ಗಂಗಾಧರ ಮೂರ್ತಿ ಮಕ್ಕಳಿಗೆ ವಿಷಯವಾರು ಮಾರ್ಗದರ್ಶನ ನೀಡಿ,ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸಿ ಗೊಂದಲ ನಿವಾರಿಸಿದರು.
ಸಂವಾದದಲ್ಲಿ ಕ್ಯಾಲನೂರಿನ ಕೆಪಿಎಸ್ ಶಾಲೆ, ಜ್ಞಾನದೀಪಿಕಾ ಪ್ರೌಢಶಾಲೆ, ಅಮ್ಮನಲ್ಲೂರಿನ ಚೌಡೇಶ್ವರಿ ಶಾಲೆ, ಉರಟಿ ಅಗ್ರಹಾರ ವಾಗ್ದೇವಿ ಪ್ರೌಢಶಾಲೆಗಳ ಎಸ್ಸೆಸ್ಸೆಲ್ಸಿ ಮಕ್ಕಳು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ರಮೇಶ್ sಎಸ್‌ಡಿಎಂಸಿ ಅಧ್ಯಕ್ಷ ನಾರಾಯಣ ಮೂರ್ತಿ, ಜಿಲ್ಲಾಪ್ರೌಢಶಾಲಾ ವೃತ್ತಿಶಿಕ್ಷಕರ ಸಂಘದ ಉಪಾಧ್ಯಕ್ಷೆ ಧನಲಕ್ಷ್ಮಿ,ಶಿಕ್ಷಕರಾದ ರಾಮಲಿಂಗಪ್ಪ, ಧನ್ಯಕುಮಾರ್,ರಾಜೇಶ್,ಜಿ.ಎಂ.ಶ್ರೀನಿವಾಸ್,ರಾಮಾಂಜಪ್ಪ,ಜ್ಯೋತಿ,ಗೀತಾ, ಸಂಗೀತಾ ಅಂಗಡಿ ಮತ್ತಿತರರಿದ್ದರು.