ಸಾಧನೆಗೆ ಸುಲಭ ಉಪಾಯ ಎಂಬುದಿಲ್ಲ

ಕಾರ್ಕಳ, ಜ.೪- ಬದುಕಿನಲ್ಲಿ ಸುಲಭವಾಗಿ ಸಿಗುವುದು ಎಂಬುದು ಯಾವುದು ಇಲ್ಲ. ಸ್ಪಷ್ಟ ಗುರಿ, ಖಚಿತ ದಾರಿ, ಅಪ್ರತಿಮ ಆತ್ಮವಿಶ್ವಾಸ, ನಿಖರ ಯೋಜನೆ, ಅವಿರತ ಶ್ರಮ ಮೇಳೆಸಿದಾಗ ಮಾತ್ರ ಯಶಸ್ಸು ಕಂಡುಕೊಳ್ಳಬಹುದು ಎಂದು ಕಾರ್ಕಳ ರಾಜಾಪುರ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಕಡಾರಿ ರವೀಂದ್ರ ಪ್ರಭು ಹೇಳಿದರು.
ಅವರು ಜಾನಪದ ನೃತ್ಯ ಕಲೋತ್ಸವದ ಹುಡುಗಿಯರ ವಿಭಾಗದ ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದ ಜೇಸೀಸ್‌ಆಂಗ್ಲ ಮಾಧ್ಯಮ ಶಾಲೆಯ ಎಸ್.ಎಸ್.ಎಲ್.ಸಿ ವಿದ್ಯಾರ್ಥಿನಿ ತ್ರಿಶಾ ಆರ್. ಶೆಟ್ಟಿ ಅವರನ್ನು ಕಾರ್ಕಳ ವನಿತಾ ಸಮಾಜ ಮತ್ತು ಹೊಸಸಂಜೆ ಬಳಗದ ಆಶ್ರಯದಲ್ಲಿ ಜ.೩ ಭಾನುವಾರ ಸನ್ಮಾನಿಸಿ ಮಾತನಾಡಿದರು.
ನಮ್ಮ ಜಾನಪದ ಕಲೆ ಜಾಗತಿಕ ಖ್ಯಾತಿ ಪಡೆದಿದೆ. ಶತಮಾನಗಳ ಇತಿಹಾಸವಿರುವ ಈ ಕಲಾಪ್ರಕಾರ ಭಕ್ತಿ, ಮನರಂಜನೆ, ಸಂಗೀತ, ನಾಟ್ಯಕಲಾ ವೈವಿಧ್ಯತೆಗಳ ಸಂಗಮದಂತಿದ್ದ್ದು ಈ ಕಲಾಪ್ರಕಾರದ ವಿವಿಧ ವಿಭಾಗಗಳ ಅಭಿವೃದ್ಧಿಗೆ ಕಲಾಪ್ರಿಯರ ಪ್ರೋತ್ಸಾಹ ನಿರಂತರವಾಗಬೇಕು. ಈ ಕಲಾಕ್ಷೇತ್ರದಲ್ಲಿ ಅರಳುತ್ತಿರುವ ಪ್ರತಿಭೆಗಳಿಗೆ ಮಾರ್ಗದರ್ಶನದ ಜೊತೆ ಆರ್ಥಿಕ ಶಕ್ತಿಯನ್ನು ಒದಗಿಸಬೇಕು ಎಂದು ಅವರು ನುಡಿದರು.
ಪುರಸಭಾ ಸದಸ್ಯರುಗಳಾದ ಲಕ್ಷ್ಮೀನಾರಾಯಣ ಮಲ್ಯ, ಮೀನಾಕ್ಷಿ ಗಂಗಾಧರ್, ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕಾರ್ಕಳ ಘಟಕದ ಅಧ್ಯಕ್ಷೆ ಮಿತ್ರಪ್ರಭಾ ಹೆಗ್ಡೆ, ಕಾರ್ಕಳ ತಾಲೂಕು ಮಹಿಳಾ ಒಕ್ಕೂಟದ ಅಧ್ಯಕ್ಷೆ ಯಶೋದಾ ಶೆಟ್ಟಿ, ಕಾರ್ಪೊರೇಷನ್ ಬ್ಯಾಂಕ್ ನಿವೃತ್ತ ಅಧಿಕಾರಿ ಲಕ್ಷ್ಮಿ ಆರ್. ಪೈ, ವನಿತಾ ಸಮಾಜದ ಸ್ಥಾಪಕ ಸದಸ್ಯೆ ಮತ್ತು ಮಾಜಿ ಅಧ್ಯಕ್ಷೆ ಪ್ರಭಾ ಶೆಣೈ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಶುಭಹಾರೈಸಿದರು.
ವನಿತಾ ಸಮಾಜದ ಅಧ್ಯಕ್ಷೆ ಸುನೀತಾ ಶೆಟ್ಟಿ ಸ್ವಾಗತಿಸಿದರು. ಹೊಸಸಂಜೆ ಬಳಗದ ಅಧ್ಯಕ್ಷ ಆರ್. ದೇವರಾಯ ಪ್ರಭು ನಿರ್ವಹಿಸಿದರು. ಕಾರ್ತಿಕ್ ಪ್ರಭು ವಂದಿಸಿದರು.