ಸಾಧನೆಗೆ ಶ್ರದ್ಧೆ ಪರಿಶ್ರಮ ಮುಖ್ಯ


ಧಾರವಾಡ,ಎ.4: ನಿರಂತರ ಸಾಧನೆಯಿಂದ ವಿದ್ಯಾರ್ಥಿಗಳು, ಕಲಾವಿದರು ಜೀವನದಲ್ಲಿ ಯಶಸ್ಸು ಸಾಧಿಸಬಹುದು. ಸಾಧನೆಗೆ ಶ್ರದ್ಧೆ ಪರಿಶ್ರಮವು ಮುಖ್ಯ ಎಂದು ಹಿರಿಯ ಕಲಾವಿದ ಬಿ. ಮಾರುತಿ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘದ ಮಕ್ಕಳ ಮಂಟಪವು, ಎರಡು ದಿನಗಳ ಕಾಲ ಸಂಘದಲ್ಲಿ ಆಯೋಜಿಸಿರುವ ಮಾಳಮಡ್ಡಿ ಕೆ. ಇ. ಬೋಡ್ರ್ಸ ಪ್ರೌಢಶಾಲೆಯ 9ನೇ ವರ್ಗದ ವಿದ್ಯಾರ್ಥಿ ಋತ್ವಿಕ ಮಳಲಿ ಅವರ `ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ’ವನ್ನು ಏಪ್ರಿಲ್ 2 ರಂದು ಋತ್ವಿಕನ ಚಿತ್ರಕಲೆ ಪ್ರದರ್ಶಿಸುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಮುಂದುವರೆದು ಮಾತನಾಡಿದ ಬಿ. ಮಾರುತಿಯವರು, ಚಿತ್ರಕಲೆಗೆ ಒಂದು ವಿಶಿಷ್ಠ ಸ್ಥಾನವಿದೆ. ಇದು ಎಲ್ಲ ಪ್ರಕಾರದ ಕಲೆಗಳಿಗೆ ಮೂಲ ಬುನಾದಿ. ಚಿತ್ರಕಲೆ, ಶಿಲ್ಪಕಲೆಗಳು ಮನುಷ್ಯನ ಮನಸ್ಸಿಗೆ ಮುದ ಆಹ್ಲಾದ ನೀಡುವ, ಭಾವನೆಗಳನ್ನು ವ್ಯಕ್ತಪಡಿಸುವ ಉಲ್ಲಾಸಗೊಳಿಸುವ ಜೊತೆಗೆ ಚಿಂತನಾಶಕ್ತಿ ವರ್ದಿಸುವ ಶಕ್ತಿ ಹೊಂದಿವೆ. ಪಾಲಕರು ಹಾಗೂ ಶಿಕ್ಷಕರು ಮಕ್ಕಳ ಅಭಿರುಚಿ ಆಸಕ್ತಿ ಗಮನಿಸಿ ಅವರಲ್ಲಿ ಅಡಗಿದ ಸೂಪ್ತ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹ ನೀಡಬೇಕು ಅಂದಾಗ ಮಾತ್ರ ಅವರಲ್ಲಿರುವ ಪ್ರತಿಭೆ ಹೊರಹೊಮ್ಮಲು ಸಾಧ್ಯ ಎಂದರು. ಸಾರ್ವಜನಿಕರಲ್ಲಿ ಕಲಾ ಪ್ರಜ್ಞೆ ಮೂಡುವಂತಾಗಲು ಪ್ರತಿ ಜಿಲ್ಲೆಯಲ್ಲಿಯೂ ಆರ್ಟ್ ಗ್ಯಾಲರಿ ಸ್ಥಾಪನೆ ಅಗತ್ಯ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಅಳ್ನಾವರ ತಾಲೂಕಾ 3ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರು ಹಾಗೂ ಸಾಹಿತಿಗಳಾದ ಈರಣ್ಣ ಅಗಳಗಟ್ಟಿ ಮಾತನಾಡಿ, ಕಲೆಯಲ್ಲಿ ಸಾಧನೆ ಒಂದು ತಪಸ್ಸು, ಇದನ್ನು ಬಾಲಕ ಕಲಾವಿದ ಋತ್ವಿಕ ಮಳಲಿ ಅವನಲ್ಲಿ ಕಾಣಬಹುದಾಗಿದೆ. ಸಮಾಜ, ಪೋಷಕರು ಇಂಥ ಬಾಲಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಿದ ಸಂಘದ ಕಾರ್ಯ ಪ್ರಶಂಸನೀಯ ಎಂದರು.
ಇನ್ನೋರ್ವ ಮುಖ್ಯ ಅತಿಥಿ, ದೂರದರ್ಶನ ವರದಿಗಾರರಾದ ಲಕ್ಷ್ಮಿಕಾಂತ ಬೀಳಗಿ ಅವರು ಮಾತನಾಡಿ, ಕರ್ನಾಟಕ ವಿದ್ಯಾವರ್ಧಕ ಸಂಘವು ಎಲ್ಲ ಪ್ರಕಾರದ ಕಲೆ, ಸಾಹಿತ್ಯ, ಸಂಗೀತದಲ್ಲಿ ಬಾಲಪ್ರತಿಭೆಗಳಿಗೆ, ಉದಯೋನ್ಮುಖರಿಗೆ ವೇದಿಕೆ ಒದಗಿಸುತ್ತಾ ಪ್ರೇರಣಾ ಶಕ್ತಿಯಾಗಿ ಮಾಡುತ್ತಿರುವ ಕಾರ್ಯ ಹಾಗೂ ಈ ದಿಶೆಯಲ್ಲಿ ವಿದ್ಯಾರ್ಥಿ, ಋತ್ವಿಕ ಮಳಲಿ ಇತನ ಚಿತ್ರಕಲೆಯನ್ನು ಗುರುತಿಸಿ ಪ್ರೋತ್ಸಾಹಿಸಿದ್ದು ಶ್ಲಾಘನೀಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಬಾಲವಿಕಾಸ ಅಕಾಡೆಮಿ ಮಾಜಿ ಅಧ್ಯಕ್ಷರು ಹಾಗೂ ಗುಬ್ಬಚ್ಚಿಗೂಡು ಪತ್ರಿಕೆಯ ಸಂಪಾದಕರಾದ ಶಂಕರ ಹಲಗತ್ತಿಯವರು ಮಾತನಾಡಿ, ಚಿತ್ರಕಲೆ ನಮ್ಮ ದೇಶದ ಸಂಸ್ಕøತಿ, ಕಲೆ, ಪರಂಪರೆಯ ಪ್ರತೀಕ. ಚಿತ್ರಕಲೆಯಿಂದ ನಮ್ಮಲ್ಲಿ ಸೃಜನಶೀಲತೆ ಹೊರಹೊಮ್ಮಲು ಸಾಧ್ಯ. ವಿದ್ಯಾರ್ಥಿಗಳು ತಮಗೆ ಲಭಿಸಿದ ಬಿಡುವಿನ ವೇಳೆಯನ್ನು ಸದುಪಯೋಗ ಮಾಡಿಕೊಳ್ಳಲು ಚಿತ್ರಕಲೆ ಸಂಗೀತ, ನಾಟಕದಂತಹ ಸಹ ಪಠ್ಯ ಚಟುವಟಿಕೆಯಲ್ಲಿ ಸಕ್ರೀಯವಾಗಿ ಪಾಲ್ಗೊಂಡು, ಕಲಿಕೆಯಲ್ಲಿ ಉಂಟಾಗುವ ಬೇಸರ ಹಾಗೂ ಜಡತ್ವವನ್ನು ನೀಗಿಸಿಕೊಳ್ಳಬೇಕೆಂದ ಅವರು, ಚಿತ್ರಕಲೆಯಲ್ಲಿ ಸಾಧನೆಗೈಯುವ ಎಲ್ಲ ಗುಣಗಳನ್ನು ಋತ್ವಿಕ ಹೊಂದಿದ್ದಾನೆ ಎಂದರು.
ಈರಣ್ಣ ಅಗಳಗಟ್ಟಿ ದಂಪತಿಗಳನ್ನು ಸಂಘದ ಪರವಾಗಿ ಸನ್ಮಾನಿಸಿ, ಗೌರವಿಸಲಾಯಿತು. ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ಬಸವಪ್ರಭು ಹೊಸಕೇರಿಯವರು ಸ್ವಾಗತಿಸಿದರು. ಮಕ್ಕಳ ಮಂಟಪದ ಸಂಚಾಲಕರಾದ ಶಿವಾನಂದ ಭಾವಿಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಇದೇ ಸಂದರ್ಭದಲ್ಲಿ ಪ್ರಸಕ್ತ ಅವಧಿಯ ಮಕ್ಕಳ ಮಂಟಪದ ಸಲಹಾ ಸಮಿತಿ ಸದಸ್ಯರಾಗಿ ಅಮೂಲ್ಯ ಸಲಹೆಗಳನ್ನು ನೀಡಿ ಮಕ್ಕಳ ಮಂಟಪದ ಕಾರ್ಯಕ್ರಮಗಳ ಯಶಸ್ಸಿಗೆ ಸಹಕರಿಸಿದ ಸದಸ್ಯರಿಗೆ ಹೂಗುಚ್ಚ ನೀಡಿ ಧನ್ಯವಾದ ಅರ್ಪಿಸಿದರು. ಸಲಹಾ ಸಮಿತಿ ಸದಸ್ಯರಾದ ವೀರಣ್ಣ ಒಡ್ಡೀನ ನಿರ್ವಹಿಸಿದರು. ಸಿ. ಎಸ್. ನಾಗಶೆಟ್ಟಿ ವಂದಿಸಿದರು.
ಕಾರ್ಯಕ್ರಮದಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರಾದ ಶಂಕರ ಕುಂಬಿ, ಮಕ್ಕಳ ಮಂಟಪದ ಸಲಹಾ ಸಮಿತಿ ಸದಸ್ಯರಾದ ಡಾ. ಧನವಂತ ಹಾಜವಗೋಳ, ಡಾ. ಶೇಖರ ಹಲಸಗಿ, ಶ್ರೀಮತಿ ಮಹಾಲಕ್ಷ್ಮಿ ಪೂಜಾರ, ಬಸಪ್ಪ ಶೆಲ್ಲಿಕೇರಿ, ಶಶಿಭೂಷಣ ದೊಡವಾಡ ಹಾಗೂ ಡಾ. ದೀಪಕ ಆಲೂರ, ಎಸ್.ಎಂ. ರಾಚಯ್ಯನವರ, ಆರ್. ಡಿ. ಕುಲಕರ್ಣಿ, ವೆಂಕಟೇಶ ದೇಸಾಯಿ, ಜಿ. ಎನ್. ಇನಾಮದಾರ, ವಿ.ಕೆ. ಪಾಟೀಲ, ಪಿ.ವ್ಹಿ. ಗದ್ರೆ, ಸತೀಶ ದೇಸಾಯಿ, ರಂಗಣ್ಣ ಕುಲಕರ್ಣಿ, ಕರೆಪ್ಪ ಸುಣಗಾರ ಸೇರಿದಂತೆ ಶಿಕ್ಷಕರು, ಕಲಾವಿದರು, ವಿದ್ಯಾರ್ಥಿಗಳು, ಪಾಲಕರು ಮತ್ತಿತರರು ಪಾಲ್ಗೊಂಡಿದ್ದರು.