ಭಾಲ್ಕಿ:ಅ.3:ನಾವು ಮಾಡುವ ಕಾರ್ಯದಲ್ಲಿ ಅಪಾರ ಶ್ರದ್ಧೆ, ನಿರಂತರ ಪ್ರಯತ್ನ, ತಾಳ್ಮೆ ಇದ್ದಲ್ಲಿ ಯಾವುದೇ ಕ್ಷೇತ್ರದಲ್ಲಿಯೂ ಸುಲಭವಾಗಿ ಸಾಧನೆ ಮಾಡಬಹುದು ಎಂದು ಹಿರೇಮಠದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಹೇಳಿದರು.
ತಾಲ್ಲೂಕಿನ ಕರಡ್ಯಾಳದ ಶ್ರೀ ಚನ್ನಬಸವೇಶ್ವರ ಗುರುಕುಲ ಶಿಕ್ಷಣ ಸಮುಚ್ಛಯದಲ್ಲಿ ಹಮ್ಮಿಕೊಂಡಿದ್ದ ಸಂಗೀತ, ಶಿಕ್ಷಣ, ಕ್ರೀಡಾ ಸಾಧಕರ ಸನ್ಮಾನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ನಮ್ಮ ಜಿಲ್ಲೆ ಪ್ರತಿಭಾವಂತರಿಂದ ಕೂಡಿದ ಸಮೃದ್ಧ ಗಣಿಯಾಗಿದೆ. ಪ್ರತಿಭೆಗಳಿಗೆ ಸಕಾಲಕ್ಕೆ ಸೂಕ್ತ ಮಾರ್ಗದರ್ಶನ, ಅವಕಾಶ ಸಿಕ್ಕಲ್ಲಿ ಮಹೋನ್ನತ ಸಾಧನೆ ಮಾಡುವ ವಿದ್ಯಾರ್ಥಿಗಳು ನಮ್ಮಲ್ಲಿ ಇದ್ದಾರೆ ಎಂದರು.
ನಮ್ಮ ಜಿಲ್ಲೆಯ ಲತಾ ಮಂಗೇಶ್ಕರ್ ಎಂದು ಮನೆ ಮಾತಾಗಿರುವ ಶಿವಾನಿ ಶಿವದಾಸ ಸ್ವಾಮಿ ಅವರು ಇಂಡಿಯನ್ ಐಡೋಲ್ ಸೀಸನ್ 14ಕ್ಕೆ ಆಯ್ಕೆಯಾಗಿರುವುದು ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಗುರುಕುಲ ವಿಜ್ಞಾನ ಪಿಯು ಕಾಲೇಜಿನ ಸಂತೋಷಿ, ಸುದೀಪ ಅವರು ರಾಷ್ಟ್ರಮಟ್ಟದ ಕಠಿಣ ಪರೀಕ್ಷೆಯಾದ ಎನ್ ಡಿಎ ಪರೀಕ್ಷೆ ಪಾಸಾಗಿರುವುದು ಜೊತೆಗೆ ಪ್ರಾಥಮಿಕ ಶಾಲೆಯ ಕ್ರೀಡಾಪಟುಗಳು ಕೊಕ್ಕೊ ಸ್ಪರ್ಧೆಯಲ್ಲಿ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿರುವುದು ನಮ್ಮಲ್ಲಿ ಪ್ರತಿಭೆಗೆ ಕೊರತೆಯಿಲ್ಲ ಎಂಬುದನ್ನು ಸಾರಿ ಹೇಳುತ್ತವೆ ಎಂದು ತಿಳಿಸಿದರು.
ಹಿರಿಯ ಪತ್ರಕರ್ತ ಸದಾನಂದ ಜೋಶಿ ಮಾತನಾಡಿ, ಆತ್ಮವಿಶ್ವಾಸ, ಗುರಿಯ ಸ್ಪಷ್ಟತೆ, ಸಚ್ಚಾರಿತ್ರ್ಯ, ಧೈರ್ಯ ವಿದ್ದರೆ ಅಂದುಕೊಂಡಿದ್ದನ್ನು ಸಾಧಿಸಲು ಸಾಧ್ಯ.
ಕಠಿಣ ಪರಿಶ್ರಮದ ಫಲವೇ ಸಾಧನೆ. ಗುಣಮಟ್ಟದ ಶಿಕ್ಷಣದ ಮೂಲಕ ನಮ್ಮ ಭಾಗವನ್ನು ಶೈಕ್ಷಣಿಕವಾಗಿ ಅಭಿವೃದ್ಧಿಗೊಳಿಸಲು ಶಿಕ್ಷಣದ ಕ್ರಾಂತಿ ಕೈಗೊಂಡವರು ಲಿಂ. ಚನ್ನಬಸವ ಪಟ್ಟದ್ದೇವರು, ಬಸವಲಿಂಗ ಪಟ್ಟದ್ದೇವರು ಎಂದು ಹೇಳಿದರು.