ಸಾಧನೆಗೆ ಛಲದೊಂದಿಗೆ ಸತತ ಪ್ರಯತ್ನ ಬಹುಮುಖ್ಯ: ಡಿ.ಜಿ ಬಳೂರಗಿ

(ಸಂಜೆವಾಣಿ ವಾರ್ತೆ)
ಶಹಾಪುರ:ಎ.8:ಜೀವನದಲ್ಲಿ ಸಾಧಿಸಬೇಕು ಎನ್ನವ ಛಲವಿದ್ದರೆ ಸಾಲದು, ಪರಿಶ್ರಮವು ಅವಶ್ಯಕವಾಗಿದೆ. ಸತತ ಪ್ರಯತ್ನದಿಂದ ಮಾತ್ರ ಸಾಧನೆ ಸಾಧ್ಯ. ಯುವ ಜನತೆ ಅರಿತು ನಡೆಯಬೇಕಿದೆ ಎಂದು ಸಾಹಿತಿ ಹಾಗೂ ನಿವೃತ್ತ ಪ್ರಾಂಶುಪಾಲರಾದ ಡಿ.ಜಿ ಬಳೂರಗಿ ಹೇಳಿದರು.
ನಗರದ ಕೋರ್ಟ್ ರಸ್ತೆಯ ಗದ್ದೆ ರಾಯನಗುಡಿ ಹತ್ತಿರವಿರುವ ಸಾಹಿತಿ ಡಿ.ಜಿ ಬಳೂರಗಿಯವರ ಪ್ರೇಮಕುಂಜ ನಿವಾಸದಲ್ಲಿ ಸಗರದ ಕಲಾನಿಕೇತನ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿರುವ ಮನೆಯಂಗಳದಲ್ಲಿ ಮಾತುಕತೆ ಕಾರ್ಯಕ್ರಮದಲ್ಲಿ ತಿಂಗಳ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಸಾಧನೆಗೆ ಅಸಾಧ್ಯವಾದದ್ದಿಲ್ಲ ಆದರೆ ಶ್ರಮ ಮುಖ್ಯ. ಹಲವಾರು ಕ್ಷೇತ್ರಗಳಲ್ಲಿ ಸಾಧಿಸಲು ದಾರಿಗಳಿವೆ ಮೊದಲು ಮನಸ್ಸು ಮಾಡಬೇಕಿದೆ. ಬದುಕಿನುದ್ದಕ್ಕೂ ಕಂಡಂತ ನೋವು ನಲಿವುಗಳ ಜೀವನಕ್ಕೆ ಪಾಠವಾಗಿರುತ್ತವೆ. ಪ್ರತಿಯೊಂದು ಕಾಲಘಟ್ಟತೆಗಳು ಮನುಷ್ಯನಿಗೆ ಆತ್ಮಸ್ಥೈರ್ಯ ಶಕ್ತಿಯಾಗಿ ಮಾರ್ಪಾಡಾಗುತ್ತದೆ. ಛಲ ಬಿಡದೆ ಪ್ರಯತ್ನಿಸಿದರೆ ಗೆಲುವು ಶತ ಸಿದ್ದ ಎಂದು ಅವರು ನುಡಿದರು.
ನಂತರ ಕಲಬುರಗಿಯ ಪತ್ರಕರ್ತರು ಹಾಗೂ ಲೇಖಕರಾಗಿರುವ ಡಾ. ಶಿವರಂಜನ್ ಸತ್ಯಂಪೇಟೆ ಮಾತನಾಡಿ, ಜೀವನ ಜಂಜಾಟದ ನಡುವೆಯೂ ಬದುಕಿನ ಕುಲುಮೆಯಲ್ಲಿ ಸಂಕಷ್ಟಗಳಿಗೆ ಜ್ವಾಲೆಯಾಗಿ ತನ್ನನ್ನು ತಾನು ಒಡ್ಡಿಕೊಂಡು ಹೊಳೆಯುವ ಆಭರಣವಾಗಿ ರೂಪುಗೊಳ್ಳುವಂತೆ ವ್ಯಕ್ತಿಯ ಸಾಧನೆ ಸಮಾಜದ ಮುಂದೆ ತೆರೆದುಕೊಂಡಾಗ ಮಾತ್ರ ಆ ಸಾಧಕನ & ಸಾಹಿತಿಯ ಬದುಕು ಸಾರ್ಥಕವಾಗುತ್ತದೆ. ಮುಂಬರುವ ದಿನಗಳಲ್ಲಿ ಸಾಹಿತಿಗಳೊಂದಿಗೆ ಸಂವಾದದ ಜೊತೆಗೆ ಸಮಾಜದಲ್ಲಿರುವ ಹೋರಾಟಗಾರರ, ಪ್ರಗತಿಪರ ರೈತರ, ವಿದ್ಯಾರ್ಥಿಗಳು ಮತ್ತು ಹಿರಿಯ ಪತ್ರಕರ್ತರೊಂದಿಗೆ ಸಂವಾದವೂ ಕೂಡ ಈ ಟ್ರಸ್ಟ್ ಹಮ್ಮಿಕೊಳ್ಳಬೇಕು ಎಂದರು.
ಖ್ಯಾತ ಸಂಶೋಧಕರು ಹಾಗೂ ಸುರಪುರದ ಸಹಾಯಕ ಖಜಾನೆ ಅಧಿಕಾರಿಗಳಾದ ಡಾ.ಎಂ.ಎಸ್. ಸಿರವಾಳರವರು ಮಾತನಾಡುತ್ತಾ, ಡಿ.ಜಿ.ಬಳೂರಗಿ ಅವರು ಉತ್ತಮವಾದ ಸಾಹಿತ್ಯ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಸುಸಂಸ್ಕೃತ ಮನೆತನದ ಸರಳ ಸಜ್ಜನಿಕೆಯ ವ್ಯಕ್ತಿಯಾಗಿ ಯಾವುದೇ ಆಡಂಬರಗಳಿಗೆ ಒಳಗಾಗದೆ ಯಾವುದಕ್ಕೂ ಬೆನ್ನು ಹತ್ತದೆ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಅಲ್ಲದೆ ಇವರು ಸಾಹಿತ್ಯದ ಹಲವು ಮಜಲುಗಳನ್ನು ಈ ನಾಡಿಗೆ ಪರಿಚಯಿಸಿಕೊಟ್ಟಿರುವ ಕೀರ್ತಿ ಸಲ್ಲುತ್ತದೆ. ಸಗರನಾಡಿನ ಮೇಲುಸ್ತರದ ಸಾಹಿತಿಗಳಲ್ಲಿ ಇವರೂ ಕೂಡ ಒಬ್ಬರು ಪ್ರಮುಖರಾಗಿದ್ದಾರೆ ಆದ್ದರಿಂದ ಸಾಹಿತ್ಯಕ್ಕೆ ಇವರ ಕೊಡುಗೆ ಅಪಾರವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿಗಳಾದ ಸಿದ್ಧರಾಮ ಹೊನಕಲ್, ಶಿವಣ್ಣ ಇಜೇರಿ, ಗುರುಬಸಯ್ಯ ಗದ್ದುಗೆ, ನಿವೃತ್ತ ಡಿ.ಡಿ.ಪಿ.ಐ ಮಾಂತಗೌಡ ಮಣ್ಣೂರ, ಗುರುಲಿಂಗಪ್ಪ ಮಿಣಜಿಗಿ, ಶರಣಗೌಡ ಪಾಟೀಲ್, ಸುಧಾಕರ್ ಗುಡಿ, ದೇವಿಂದ್ರಪ್ಪ ಕನ್ಯಾಕೋಳೂರ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಟ್ರಸ್ಟಿನ ಅಧ್ಯಕ್ಷರಾದ ಬಸವರಾಜ ಸಿನ್ನೂರ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯಕ್ರಮವನ್ನು ಪ್ರಿಯಾಂಕಾ ಜಿ.ಬಳೂರ್ಗಿ ಪ್ರಾರ್ಥಿಸಿದರು, ಮಲ್ಲಿಕಾರ್ಜುನ ಆವಂಟಿ ಸ್ವಾಗತಿಸಿದರು, ಮಡಿವಾಳಪ್ಪ ಪಾಟೀಲ್ ನಿರೂಪಿಸಿದರು, ವೀರೇಶ್ ವಂದಿಸಿದರು.