ಸಾಧನೆಗೆ ಅಂಗವಿಕಲತೆ, ಬಡತನ, ಅಡ್ಡಿಯಾಗದು

ಆನೇಕಲ್. ಮೇ. ೨೧- ಸಾಧನೆಗೆ ಅಂಗವಿಕಲತೆ, ಬಡತನ, ಅಡ್ಡಿಯಾಗದು, ಸಾಧನೆಗೆ ಬೇಕಿರುವುದು ಅಚಲವಾದ ಛಲ ಮತ್ತು ಗುರಿ ಹಾಗೂ ಗುರಿ ತಲುಪಲು ಸರಿಯಾದ ಗುರು ಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯರು ದಯಾನಂದರೆಡ್ಡಿರವರು ತಿಳಿಸಿದರು.
ಅವರು ರೋಟರಿ ಬೆಂಗಳೂರು ಹಾಗೂ ಗೋಲ್ಡ್ ಖಾಯಿನ್ ಕ್ಲಬ್ ಸಹಯೋಗದಲ್ಲಿ ವಿಶೇಷ ಚೇತನರಿಗೋಸ್ಕರ ಆಯೋಜಿಸಿದ್ದ ೪೦ ಕಿಲೋಮೀಟರ್ ನ ಕಾರ್ ರ್‍ಯಾಲಿ ಯಲ್ಲಿ ಗೆಲುವು ಸಾದಿಸಿದವರಿಗೆ ಬಹುಮಾನ ವಿತರಿಸಿ ಮಾತನಾಡಿದರು. ಇಂದು ನಡೆದ ಕಾರ್ ರ್‍ಯಾಲಿಯಲ್ಲಿ ಸುಮಾರು ೨೭ ಜನ ಅಂಧರು ಬ್ರೈನ್ ಲಿಪಿ ಮೂಲಕ ಚಾಲಕನಿಗೆ ಸರಿಯಾದ ಮಾಹಿತಿ ನೀಡಿ ರಸ್ತೆ ನಿಯಮಗಳನ್ನು ತಪ್ಪದೆ ಪಾಲಿಸಿ ಸುಮಾರು ೫೯ ನಿಮಿಷಗಳಲ್ಲಿ ಬೆಂಗಳೂರಿನಿಂದ ಗೋಲ್ಡ್ ಖಾಯಿನ್ ಕ್ಲಬ್ ಗೆ ಯಶಸ್ವಿಯಾಗಿ ಬಂದು ತಲುಪುವ ಮೂಲಕ ನಾವು ಯಾರಿಗೂ ಕಡಿಮೆ ಇಲ್ಲ ಎಂಬುದು ತೋರಿಸಿದ್ದಾರೆ ಎಂದರು.
ದೇಹದ ಕೆಲ ನ್ಯೂನತೆಗಳಿಂದ ಮಾನಸಿಕವಾಗಿ ಕುಗ್ಗಿ, ಜೀವನವೇ ಮುಗಿಯಿತು ಎಂಬ ಸಂಕುಚಿತ ಮನೋಭಾವವನ್ನು ಬಿಟ್ಟು ಏನಾದರೂ ಸಾದನೆ ಮಾಡುತ್ತೇವೆ ಎಂದು ಮುನ್ನೆಡೆಯಿರಿ ಖಂಡಿತವಾಗಿ ಮುದೊಂದು ದಿನ ನೀವು ಸಾಧಕರಾಗುತ್ತೀರ ಎಂದು ಸ್ಪೂರ್ತಿ ತುಂಬಿದರು. ಈವತ್ತಿನ ದಿನಗಳಲ್ಲಿ ವಿಶೇಷ ಚೇತನರು ರಾಷ್ಠ ಹಾಗೂ ಅಂತರಾಷ್ಠೀಯ ಮಟ್ಟದಲ್ಲಿ ಸಾಧನೆಯನ್ನು ಮಾಡಿ ತೋರಿಸಿದ್ದಾರೆ, ಸಾಧನೆಗೆ ಬೇಕಿರುವುದು ಬುದ್ದಿವಂತಿಕೆ ಹೊರೆತು ಅಂಗವಿಕಲತೆ ಅಡ್ಡಿಯಾಗದು ಎಂಬುದನ್ನು ತಿಳಿಯಿರಿ ಎಂದರು.
ಪ್ರತಿಯೊಬ್ಬರಲ್ಲಿಯೂ ಒಂದಲ್ಲ ಒಂದು ರೀತಿಯಾದ ಪ್ರತಿಭೆ ಅಡಗಿರುತ್ತದೆ ಅಂತ ಪ್ರತಿಭೆಗಳು ಹೊರ ಬರಬೇಕಾದರೆ ಸೂಕ್ತ ವೇದಿಕೆಗಳ ಅಗತ್ಯತೆ ಇದೆ, ಸಮಾಜದಲ್ಲಿರುವ ಶ್ರೀಮಂತ ವರ್ಗ, ಎನ್.ಜಿ,ಓ. ಸಂಘ-ಸಂಸ್ಥೆಗಳು ತಮ್ಮ ಕೈಲಾದ ಮಟ್ಟಿಗೆ ವಿಶೇಷ ಚೇತನರಿಗೆ ಸಹಾಯ ಮಾಡಿ, ಸ್ವಾರ್ಥಕ್ಕಾಗಿ ಬದುಕುವುದನ್ನು ಬಿಟ್ಟು ತಮ್ಮ ಕೈಲಾದ ಮಟ್ಟಿಗೆ ಸಮಾಜ ಅಭಿವೃದ್ದಿಗೆ ಕೈಜೋಡಿಸಿ ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ತರುಣ್ ಸೇರಿದಂತೆ ರೋಟರಿ ಬೆಂಗಳೂರು ಮತ್ತು ಎನ್.ಜಿ,ಓ. ಸಂಘ-ಸಂಸ್ಥೆಗಳ ಮುಖ್ಯಸ್ಥರು ಹಾಗೂ ವಿಶೇಷ ಚೇತನರು ಭಾಗವಹಿಸಿದ್ದರು.