ಸಾಧನಾ ಸಮಾವೇಶಕ್ಕೆ 25 ಸಾವಿರ ಕಾರ್ಯಕರ್ತರು

ಮಧುಗಿರಿ, ಜು. ೨೩- ದೊಡ್ಡಬಳ್ಳಾಪುರದಲ್ಲಿ ಜು. ೨೮ ರಂದು ನಡೆಯುವ ಬಿಜೆಪಿಯ ಸಾಧನ ಸಮಾವೇಶದಲ್ಲಿ ಮಧುಗಿರಿ ಸಂಘಟನಾತ್ಮಕ ಜಿಲ್ಲೆಯಿಂದ ೨೫ ಸಾವಿರ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ತಿಳಿಸಿದರು.
ಪಟ್ಟಣದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರವರ ಸರ್ಕಾರಕ್ಕೆ ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಸರ್ಕಾರದ ಜನಪರ ಯೋಜನೆಗಳ ಬಗ್ಗೆ ಹಾಗೂ ಸಾಧನೆಗಳ ಪ್ರಗತಿ ವರದಿಯನ್ನು ಜನತೆಗೆ ನೀಡುವ ಕಾರ್ಯಕ್ರಮ ಇದಾಗಿದೆ ಎಂದರು.
ತಾಲ್ಲೂಕಿನ ೧೩೯ ಗ್ರಾಮ ಪಂಚಾಯ್ತಿಗಳಿಂದ ವಾಹನ ವ್ಯವಸ್ಥೆ ಮಾಡಲಾಗಿದ್ದು, ಪಕ್ಷದ ಕಾರ್ಯಕರ್ತರು, ಹಿತೈಷಿಗಳು ಹಾಗೂ ಮೋದಿ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ ಎಂದರು.
ವಿಧಾನಪರಿಷತ್ ಸದಸ್ಯ ಚಿದಾನಂದ ಎಂ. ಗೌಡ ಮಾತನಾಡಿ, ಉಪ ವಿಭಾಗದ ೪ ತಾಲ್ಲೂಕುಗಳು ಅಭಿವೃದ್ದಿಯಿಂದ ವಂಚಿತವಾಗಿದ್ದು, ಶಾಪಗ್ರಸ್ಥ ಕ್ಷೇತ್ರಗಳಾಗಿವೆ. ಬಿಜೆಪಿ ದೂರ ದೃಷ್ಠಿವುಳ್ಳ ಪಕ್ಷವಾಗಿದ್ದು ಸಮಗ್ರ ಅಭಿವೃದ್ದಿಗೆ ಯೋಜನೆಗಳನ್ನು ರೂಪಿಸಿದ್ದು ಮುಂದಿನ ಚುನಾವಣೆಯಲ್ಲಿ ೪ ಕ್ಷೇತ್ರಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ನಿರಂತರವಾಗಿ ಪಕ್ಷದ ಭಾವುಟ ಹಾರಿಸಲಿದೆ ಎಂದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಕೆ.ಮಂಜುನಾಥ್ ಮಾತನಾಡಿ, ಮುಂದಿನ ದಿನಗಳಲ್ಲಿ ಈ ಭಾಗದಲ್ಲಿ ಪಕ್ಷದ ವತಿಯಿಂದ ಸಮಾವೇಶ, ರ್ಯಾಲಿಗಳನ್ನು ಹಮ್ಮಿಕೊಳ್ಳಲಾಗುವುದು. ಈ ರ್ಯಾಲಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಸಚಿವರುಗಳು ಭಾಗವಹಿಸಲಿದ್ದಾರೆ. ಪಕ್ಷವನ್ನು ಸಂಘಟಿಸಿ ಶಕ್ತಿ ತುಂಬುವ ಕೆಲಸ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಗಂಗಹನುಮಯ್ಯ, ಜಿಲ್ಲಾ ಮಾಧ್ಯಮ ಪ್ರಮುಖ್ ಆದಿಶೇಷಗುಪ್ತ, ಪಧಾದಿಕಾರಿಗಳಾದ ಕಾರ್ತಿಕ್, ಎಂ.ಸುರೇಶ್, ನಾಗೇಂದ್ರ, ಕಲ್ಪನಗೋವಿಂದರಾಜು ಮತ್ತಿತರರು ಉಪಸ್ಥಿತರಿದ್ದರು.