ಸಾಧಕ – ಬಾಧಕ ಪರಿಶೀಲಿಸಿ ಯೋಜನೆ ಪ್ರಕಟಿಸಿ: ಇಟಗಿ

ಬೆಂಗಳೂರು, ಮಾ. ೨೩- ಸರ್ಕಾರ ಯಾವುದೇ ಯೋಜನೆಗಳನ್ನು ಘೋಷಿಸುವ ಮುನ್ನ ಅದರ ಸಾಧಕ – ಬಾಧಕಗಳನ್ನು ಪರಿಶೀಲಿಸಿದ ಬಳಿಕವೇ ಪ್ರಕಟಿಸಬೇಕು ಎಂದು ಕಾಂಗ್ರೆಸ್ ಸದಸ್ಯ ಬಸವರಾಜ್ ಪಾಟೀಲ್ ಇಟಗಿ ವಿಧಾನ ಪರಿಷತ್ ನಲ್ಲಿಂದು ಹೇಳಿದ್ದಾರೆ.
ರಾಜ್ಯ ಮುಂಗಡ ಪತ್ರದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬರೀ ಯೋಜನೆಗಳನ್ನು ಪ್ರಕಟಿಸಿದರೆ ಸಾಲದು. ಅವುಗಳು ಜನಸಾಮಾನ್ಯರು ಮತ್ತು ರೈತರಿಗೆ ತಲುಪಿದಾಗ ಮಾತ್ರ ಸರ್ಕಾರದ ಉದ್ದೇಶವೂ ಈಡೇರಲಿದೆ. ಈ ನಿಟ್ಟಿನಲ್ಲಿ ಚಿಂತನೆ ನಡೆಸಬೇಕು ಎಂದು ಹೇಳಿದರು.
ಕೃಷಿ, ತೋಟಗಾರಿಕೆ ಸೇರಿದಂತೆ, ವಿವಿಧ ಇಲಾಖೆಯಲ್ಲಿ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳು ಬಲಾಢ್ಯರ ಪಾಲಾಗುತ್ತಿವೆ. ಅದನ್ನು ತಪ್ಪಿಸಿ, ಅರ್ಹರಿಗೂ ಸೌಲಭ್ಯ ಸಿಗುವಂತಾಗಬೇಕು ಎಂದರು.
ಕೃಷಿ ಯಂತ್ರದಾರ ಸೇರಿದಂತೆ, ರೈತರಿಗಾಗಿ ಜಾರಿಗೆ ತಂದಿರುವ ಅನೇಕ ಯೋಜನೆಗಳು ದಲ್ಲಾಳಿಗಳ ಪಾಲಾಗುತ್ತಿವೆ. ಇದನ್ನು ತಪ್ಪಿಸಬೇಕು ಎಂದು ಅವರು ಹೇಳಿದರು.
ಕೇಂದ್ರ – ರಾಜ್ಯ ಸರ್ಕಾರಗಳು ಕೃಷಿಯನ್ನು ರೈತರ ಬೆನ್ನೆಲುಬು, ಜೀವನಾಡಿ ಎಂದೆಲ್ಲಾ ಕರೆಯುತ್ತಾರೆ. ಆದರೆ ಕೃಷಿಗೆ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡಬೇಕು ಎಂದರು.
ಕೃಷಿ, ನೀರಾವರಿ, ಇಂಧನ ಸೇರಿದಂತೆ, ವಿವಿಧ ಇಲಾಖೆಗಳು ರೈತರ ಜೊತೆ ನೇರ ಸಂಪರ್ಕ ಹೊಂದಿರಲಿವೆ. ಈ ಕ್ಷೇತ್ರಗಳ ಬಲವರ್ಧನೆಗೆ ಆದ್ಯತೆ ನೀಡಬೇಕು ಎಂದರು.