ಸಾಧಕರ ಜೀವನ ಸಾಧನೆ ದಾಖಲೀಕರಣ ಶ್ಲಾಘನೀಯ: ಡಾ.ಶರಣಪ್ರಕಾಶ ಪಾಟೀಲ

ಕಲಬುರಗಿ,ನ.6-ಕಲೆ, ಸಾಹಿತ್ಯ, ಸಂಗೀತ ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕರ ಮನದಾಳದ ಮಾತುಗಳನ್ನು ಸಂಗ್ರಹಿಸಿ ಅದನ್ನು ಕೃತಿಯ ರೂಪದಲ್ಲಿ ಬಿಡುಗಡೆ ಮಾಡುತ್ತಿರುವುದು ಅತ್ಯಂತ ಶ್ಲಾಘನೀಯ ಕೆಲಸವಾಗಿದೆ ಎಂದು ಮಾಜಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಗರದ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿಂದು ಹಮ್ಮಿಕೊಂಡಿದ್ದ “ಸಾಧಕರ ಮನದಾಳದ ಮಾತು” ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
ಮನದಾಳದ ಮಾತು ಕೃತಿ ವಿವಿಧ ಕ್ಷೇತ್ರಗಳ ಸಾಧಕರ ಸಾಧನೆಯ ದಾಖಲೀಕರಣವಾಗಿದೆ. ಈ ಕೃತಿ ಮುಂದಿನ ಪೀಳಿಗೆಗೆ ದಾರದೀಪವಾಗಲಿದೆ. ವಿವಿಧ ಕ್ಷೇತ್ರಗಳ ಸಾಧಕರು ತಮ್ಮ ಜೀವನದಲ್ಲಿ ಅನುಭವಿಸಿದ ನೋವು, ನಲಿವು ಮತ್ತು ಸಾಧನೆಗಳ ದಾಖಲೀಕರಣ ಇದರಲ್ಲಿದೆ. ಪಾಶ್ಚಿಮಾತ್ಯ ಸಂಸ್ಕೃತಿಯ ವೈಭವೀಕರಣಕ್ಕೆ ಮಾರು ಹೋಗಿರುವ ಯುವ ಜನರು ಸಾಧಕರ ಜೀವನ ಸಾಧನೆಯನ್ನೊಳಗೊಂಡ ಇಂತಹ ಕೃತಿಗಳನ್ನು ಓದುಬೇಕು. ಆ ಮೂಲಕ ಸಾಧಕರು ಕಂಡುಂಡ ನೋವು, ನಲಿವು ಮತ್ತು ಸಾಧನೆಗಳನ್ನು ಅರಿತುಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮುಂಬರುವ ದಿನಗಳಲ್ಲಿ ಮನದಾಳದ ಮಾತು ಕಾರ್ಯಕ್ರಮದಲ್ಲಿ ರಾಜ್ಯಸಭಾ ಸದಸ್ಯರಾದ ಮಲ್ಲಿಕಾರ್ಜುನ ಖರ್ಗೆ ಅವರಂತಹ ಹಿರಿಯ ರಾಜಕೀಯ ನಾಯಕರನ್ನು ಕರೆಸಿ ಅವರ ಮನದಾಳದ ಮಾತು ಕಾರ್ಯಕ್ರಮ ನಡೆಸಬೇಕು ಎಂದು ಸಲಹೆ ನೀಡಿದರು. ಸಾಹಿತ್ಯ ಕ್ಷೇತ್ರಕ್ಕೆ ಮಠ-ಮಾನ್ಯಗಳು ಸಹ ಅಮೂಲ್ಯವಾದ ಕೊಡುಗೆ ನೀಡಿದ್ದು, ಮಠಾಧೀಶರ ಸೇವೆ, ಸಾಧನೆಗಳನ್ನು ಸಹ ಜನರಿಗೆ ಮುಟ್ಟಿಸುವ ಕೆಲಸವಾಗಬೇಕು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವೀರಭದ್ರ ಸಿಂಪಿ ಅವರು ಮಾತನಾಡಿ, ಸಾಹಿತ್ಯ ಪರಿಷತ್ ಅಧ್ಯಕ್ಷನಾಗಿ ರಾಜಕೀಯ ನಾಯಕರಿಗೆ ಸಾಕಷ್ಟು ಕಷ್ಟ ಕೊಟ್ಟಿದ್ದೇನೆ. ಈ ಕಷ್ಟದಿಂದ ಸಾಹಿತ್ಯ ಪರಿಷತ್ತಿಗೆ ಅನುಕೂಲವಾಗಿದೆ. ಕಾಡಿ ಬೇಡಿ ಹಣ ತಂದು ಪರಿಷತ್ತಿನ ಕಾರ್ಯಚಟುವಟಿಕೆಗಳನ್ನು ಮಾಡಿದ್ದೇನೆ. ಡಾ.ಶರಣಪ್ರಕಾಶ ಪಾಟೀಲ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಪರಿಷತ್ತಿನ ಕಾರ್ಯಚಟುವಟಿಕೆಗಳಿಗೆ ನೆರವು ನೀಡಿದ್ದಾರೆಯ ಶರಣಬಸಪ್ಪ ದರ್ಶನಾಪೂರ ಅವರು ಪರಿಷತ್ತಿಗೆ ಸಾಕಷ್ಟು ಸಹಾಯ ಮಾಡಿದ್ದಾರೆ. ಆದರೆ, ಈಗಿನ ಉಸ್ತುವಾರಿ ಸಚಿವರು ಪರಿಷತ್ತಿಗೆ ಒಂದು ರೂಪಾಯಿಯೂ ನೀಡಿಲ್ಲ. ಬೀದರ್ ಜಿಲ್ಲಾ ಉಸ್ತುವಾರಿ ಸಚಿವರು ಅಲ್ಲಿನ ಸಾಹಿತ್ಯ ಪರಿಷತ್ತಿಗೆ 2 ಕೋಟಿ ರೂಪಾಯಿ ಅನುದಾನ ಕೊಡಿಸಿದ್ದಾರೆ. ನಮ್ಮ ಜಿಲ್ಲೆಯವರೇ ಉಸ್ತುವಾರಿ ಸಚಿವರಾಗಿದ್ದರೆ ಕಾಡಿಬೇಡಿ ಹಣ ತರಬಹುದಾಗಿತ್ತು. ಆದರೆ ಈಗ ಯಾರನ್ನು ಕಾಡಿಬೇಡಿ ಹಣ ತರಬೇಕು ಎಂಬ ಅನಾಥಭಾವ ಕಾಡುತ್ತಿದೆ ಎಂದರು.
ಹಾರಕೂಡ ಚನ್ನಬಸವೇಶ್ವರ ಸಂಸ್ಥಾನ ಹಿರೇಮಠದ ಡಾ.ಚನ್ನವೀರ ಶಿವಾಚಾರ್ಯರು ಸಮಾರಂಭದ ಸಾನಿಧ್ಯವಹಿಸಿ ಕೃತಿ ಬಿಡುಗಡೆ ಮಾಡಿದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಕಲ್ಯಾಣರಾವ ಪಾಟೀಲ ಕೃತಿ ಪರಿಚಯ ಮಾಡಿದರು. ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಪರಿಷತ್ತಿನ ಗೌರವ ಕೋಶಾಧ್ಯಕ್ಷ ದೌಲತರಾಯ ಮಾಲಿಪಾಟೀಲ, ಗೌರವ ಕಾರ್ಯದರ್ಶಿಗಳಾದ ಮಡಿವಾಳಪ್ಪ ನಾಗರಹಳ್ಳಿ, ಡಾ.ವಿಜಯಕುಮಾರ ಪರೂತೆ ಸೇರಿದಂತೆ ಮತ್ತಿತರ ಗಣ್ಯರು ವೇದಿಕೆ ಮೇಲಿದ್ದರು.
ಕುಮಾರ ತನ್ಮಯ ಮಲ್ಲಿಕಾರ್ಜುನ ನಾಗರಹಳ್ಳಿ, ಕುಮಾರಿ ನೇಹಾ ಮತ್ತು ಸ್ನೇಹಾ ಮಲ್ಲಿಕಾರ್ಜುನ ನಾಗರಹಳ್ಳಿ ಅವರು ಪ್ರಾರ್ಥನಾ ಗೀತೆ ಹಾಡಿದರು. ಮಕ್ಕಳು ಶುಶ್ರಾವ್ಯವಾಗಿ ಪಾರ್ಥನಾ ಗೀತೆ ಹಾಡಿದಕ್ಕೆ ಡಾ.ಚನ್ನವೀರ ಶಿವಾಚಾರ್ಯರು ಮೆಚ್ಚುಗೆ ವ್ಯಕ್ತಪಡಿಸಿ ಆಶೀರ್ವದಿಸಿದರು.
ಸಾಹಿತಿಗಳು, ಸಾಹಿತ್ಯಾಸಕ್ತರು ಮತ್ತು ಸಾಧಕರ ಕುಟುಂಬದ ಸದಸ್ಯರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು..