ಸಾಧಕರ ಜೀವನ ಚರಿತ್ರೆ ಓದಲು ಶ್ರೀಗಳ ಕರೆ

ತುಮಕೂರು, ಜು. ೪- ಪ್ರಸ್ತುತ ಸಮಾಜದಲ್ಲಿ ಆದರ್ಶಗಳ ಕೊರತೆ ಕಾಡುತ್ತಿರುವ ನಡುವೆ ದೊಡ್ಡಲಿಂಗಪ್ಪನವರ ಸೇವೆ, ಆದರ್ಶ ಅನುಕರಣೀಯವಾದದ್ದು. ಸಾಧಕರ ಜೀವನ ಚರಿತ್ರೆ ಓದುವ ಮೂಲಕ ಮುಂದಿನ ಪೀಳಿಗೆಗೆ ದಿಶೆ ದೊರಕುತ್ತದೆ. ಸರಳತೆ ಹಾಗೂ ಸ್ನೇಹ ಜೀವ ತುಂಬಾ ಮುಖ್ಯವಾಗುತ್ತದೆ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಾಲಾನಂದ ಸ್ವಾಮೀಜಿ ತಿಳಿಸಿದರು.
ಒಳಿತು ಕೆಡಕು ಮಾಡಿಸುವುದು ಮನಸ್ಸು. ಆತ್ಮದ ಸ್ಥಿತಿಯಲ್ಲಿ ಎಲ್ಲರೂ ಒಂದೇ ಆದರೂ ವ್ಯಕ್ತಿತ್ವದಲ್ಲಿ ಭಿನ್ನತೆಯಿರುತ್ತದೆ. ಅದಕ್ಕೆ ಕಾರಣ ಮನಸ್ಸು. ವ್ಯಕ್ತಿ ಮನಸ್ಸು ಸರಿಯಾದ ರೀತಿಯಲ್ಲಿ ಕೆಲಸ ಮಾಡಿದರೆ ಉತ್ತಮ ಕಾರ್ಯಗಳು ಆಗುತ್ತವೆ. ಜ್ಞಾನೇಂದ್ರಿಯಗಳು, ಕಣೇಂದ್ರಗಳು ಕೆಲಸ ಮಾಡಬೇಕಾದರೆ ಅದಕ್ಕೆ ಮನಸ್ಸು ಎದ್ದಿರಬೇಕು. ಆಗ ಮಾತ್ರ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದರು.
ನಗರದಲ್ಲಿ ಒಕ್ಕಲಿಗರ ವಿಕಾಸ ವೇದಿಕೆ ತುಮಕೂರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ಶಿಂಷಾ ಲಿಟರರಿ ಅಕಾಡೆಮಿ ಸಹಯೋಗದಲ್ಲಿ ಸಮುದಾಯ ಸೇವೆಯಲ್ಲಿ ಆರ್. ದೊಡ್ಡಲಿಂಗಪ್ಪನವರ ಬದುಕಿನ ಚಿತ್ರಣ “ನೋವುಂಡು ಬೆಳಕು ಬೀರುವ ದೀಪ” ಕೃತಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಧನಾತ್ಮಕ ಚಿಂತನೆಯಿಂದ ಮಾತ್ರ ಮನುಷ್ಯ ಉತ್ತಮ ಹಂತಕ್ಕೆ ತಲುಪಲು ಸಾಧ್ಯವಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಧನಾತ್ಮಕ ಗುಣಗಳನ್ನು ಬೆಳೆಸಿಕೊಳ್ಳುವುದು ಅವಶ್ಯಕವಾಗಿದೆ. ಅಂತಹ ಗುಣವನ್ನು ದೊಡ್ಡಲಿಂಗಪ್ಪನವರು ಬೆಳೆಸಿಕೊಂಡಿದ್ದು ಇತರರಿಗೆ ಮಾದರಿಯಾಗಿದ್ದಾರೆ. ಸಮಾಜ ಸೇವೆ ಮಾಡಲು ಮನಸ್ಸು ಇರಬೇಕು. ಒಳ್ಳೆಯ ಮನಸ್ಸಿನಿಂದ ಮಾಡಿದ ಸಮಾಜ ಸೇವೆ ಆತ್ಮ ತೃಪ್ತಿ ತಂದು ಕೊಡುತ್ತದೆ. ದೊಡ್ಡಲಿಂಗಪ್ಪನವರು ಇಂತಹ ಕಾರ್ಯಗಳನ್ನು ಮಾಡುತ್ತಿದ್ದು, ಇವರ ಸರಳತೆ, ಆದರ್ಶಗಳು ಮುಂದಿನ ಪೀಳಿಗೆಗೆ ಪ್ರೇರಣೆಯಾಗಲಿ ಎಂದರು.
ಯಾವ ವ್ಯಕ್ತಿ ಸಮಾಜಕ್ಕೋಸ್ಕರ ಬದುಕಿರುತ್ತಾನೋ ಅವನು ಸತ್ತ ಮೇಲೂ ಬದುಕಿರುತ್ತಾನೆ. ಯಾವ ವ್ಯಕ್ತಿ ತನಗಾಗಿ ಬದುಕಿರುತ್ತಾನೋ ಆತ ಬದುಕಿರುವಾಗಲೇ ಸತ್ತ ಸ್ಥಿತಿಯಲ್ಲಿರುತ್ತಾನೆ. ಕಳೆ ತರುವ ಕೊಳೆ ತೊಳೆಯುವ ಪುಸ್ತಕಗಳನ್ನು ಓದುವುದರಿಂದ ಬದುಕಿನಲ್ಲಿ ಸಾರ್ಥಕತೆ ತರುತ್ತದೆ ಎಂದರು.
ವಿಜ್ಞಾನ ಕೇಂದ್ರದ ಅಧ್ಯಕ್ಷ ಮರುಳಯ್ಯ ಪ್ರಾಸ್ತವಿಕವಾಗಿ ಮಾತನಾಡಿ, ಪ್ರಚಾರದ ಸಮಾಜ ಸೇವೆ ಆಗಬಾರದು. ಯಾರಿಗೂ ತಿಳಿಯದಂತೆ, ಪರೋಕ್ಷವಾಗಿ ಮಾಡುವುದು ಸೇವೆಯಾಗುತ್ತದೆ. ವಸ್ತು, ಹಣದ ರೂಪದಲ್ಲಿ ದಾನ ಮಾಡುವವರು ಸಮಾಜದಲ್ಲಿ ಸಿಗುತ್ತಾರೆ. ಅಂತಹ ಸೇವೆ ನಮಗೆ ಅವಶ್ಯಕತೆಯಿಲ್ಲ. ಯಾವುದೇ ಫಲಾಫಲಗಳನ್ನು ಅಪೇಕ್ಷಿಸಿದೆ ಮಾಡುವುದೇ ನಿಜವಾದ ಸೇವೆಯಾಗುತ್ತದೆ. ಅಂತಹ ಸೇವೆಯನ್ನು ದೊಡ್ಡಲಿಂಗಪ್ಪನವರು ಮಾಡುತ್ತಿದ್ದಾರೆ. ಕುಂಚಿಟಿಗರ ಸಮುದಾಯ ಭವನ, ವಿದ್ಯಾರ್ಥಿನಿಲಯ ನಿರ್ಮಾಣದಂತಹ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು ಮಾತ್ರವಲ್ಲದೆ ಧಾರ್ಮಿಕ ಕ್ಷೇತ್ರದಲ್ಲಿಯೂ ಸಹ ಉತ್ತಮ ಕಾರ್ಯ ಮಾಡಿದ್ದಾರೆ. ಇವರ ಬದುಕು ಇಂದಿನ ಪೀಳಿಗೆಗೆ ಸ್ಫೂರ್ತಿದಾಯಕವಾಗಿದೆ ಎಂದರು.
ಹಿರಿಯ ಲೇಖಕರಾದ ಪ್ರೊ. ಎಂ.ಜಿ. ಚಂದ್ರಶೇಖರಯ್ಯ ಮಾತನಾಡಿ, ಈ ಕೃತಿ ರಚನೆ ನಿಜಕ್ಕೂ ಸಾರ್ಥಕವೆನಿಸುತ್ತದೆ. ಸಾರ್ವಜನಿಕ ಕೆಲಸವನ್ನು ತಮ್ಮ ಮನೆಯ ಕೆಲಸವೆಂದು ಭಾವಿಸುವ ದೊಡ್ಡ ಗುಣ ದೊಡ್ಡಲಿಂಗಪ್ಪನವರದ್ದು. ಅಂತಃಕರಣದಿಂದ ಸಮಾಜದ ಸಮಸ್ಯೆಗಳಿಗೆ ಮಿಡಿಯುವ ಹೃದಯ ದೊಡ್ಡಲಿಂಗಪ್ಪನವರದ್ದು. ಇಂತಹವರ ಸಮಾಜಮುಖಿ ಚಿಂತಕರ ಸಂಖ್ಯೆ ಸಮಾಜದಲ್ಲಿ ಜಾಸ್ತಿಯಾಗಬೇಕು ಎಂದರು.
ಆರ್. ದೊಡ್ಡಲಿಂಗಪ್ಪನವರು ಮಾತನಾಡಿ, ಸ್ನೇಹ, ಪ್ರೀತಿ, ನಂಬಿಕೆಯಿಂದ ಯಾವುದೇ ಕಾರ್ಯವನ್ನು ಸಾಧಿಸಬಹುದು. ನಂಬಿಕೆ ಮೂರು ಅಕ್ಷರವೇ ಇರಬಹುದು. ಆದರೆ ಅದನ್ನು ಸಂಪಾದಿಸುವುದು ತುಂಬಾ ಕಷ್ಟ. ಶಿಕ್ಷಣ ಎಡವಲು ಬಿಡುವುದಿಲ್ಲ, ಸಂಸ್ಕಾರ ಕೆಡಲು ಬಿಡುವುದಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಶಿಕ್ಷಣವಂತರಾಗಿ ಉತ್ತಮ ಸಂಸ್ಕಾರವನ್ನು ಬೆಳೆಸಿಕೊಳ್ಳಬೇಕು ಎಂದರು.
ಕೃತಿ ಸಂಪಾದಕರಾದ ಎಂ.ಎಚ್. ನಾಗರಾಜು ಮಾತನಾಡಿ, ದೊಡ್ಡಲಿಂಗಪ್ಪನವರ ಸಮಾಜ ಸೇವೆ, ಅವರ ಬದುಕನ್ನು ಹತ್ತಿರದಿಂದ ನೋಡಿದವನು ನಾನು. ಅವರ ಜೀವನ ಸಾಧನೆಗೆ ನಾನು ನೀಡಿದ ಶೀರ್ಷಿಕೆಯೇ ನೋವುಂಡು ಬೆಳಕು ಬೀರುವ ದೀಪ. ಇದು ನನಗೆ ಸಾರ್ಥಕತೆ ತರುತ್ತದೆ ಎಂದು ತಮ್ಮ ಅನಿಸಿಕೆ ಹಂಚಿಕೊಂಡರು.
ವಿದ್ಯಾವಾಚಸ್ಪತಿ ಕವಿತಾಕೃಷ, ಕಸಾಪ ಜಿಲ್ಲಾ ಅಧ್ಯಕ್ಷ ಸಿದ್ದಲಿಂಗಪ್ಪ ಮಾತನಾಡಿದರು.
ಕವಿವಿ ಸಂಘದ ಅಧ್ಯಕ್ಷ ಕಾಮರಾಜ್, ಕೇಂದ್ರ ಒಕ್ಕಲಿಗರ ಸಂಘದ ನಿರ್ದೇಶಕ ಹನುಮಂತರಾಯಪ್ಪ, ಡಾ. ಹಾಲಪ್ಪ ಪ್ರತಿಷ್ಟಾನದ ಅಧ್ಯಕ್ಷ ಡಾ. ಮುರಳೀಧರ ಹಾಲಪ್ಪ, ಕೆಂಪೇಗೌಡ ಬ್ಯಾಂಕ್ ಉಪಾಧ್ಯಕ್ಷ ಎಲ್. ಲಿಂಗಣ್ಣ ಮತ್ತಿತರರು ಉಪಸ್ಥಿತರಿದ್ದರು.